ಉಡುಪಿ: ಸಿಎಎ ವಿರುದ್ಧ ಎಸ್.ಡಿ.ಪಿ.ಐ ನಡೆಸಿದ್ದ ಪ್ರತಿಭಟನೆಯಲ್ಲಿ ಶಾಮೀಲಾಗಿದ್ದ ಮಾಜಿ ಸಚಿವ ವಿನಯ ಕುಮಾರ್ ಸೊರಕೆಯವರಿಗೆ ಸೋಲಿನ ಭೀತಿ ಶುರುವಾಗಿದೆ. ಮಾಜಿ ಸಿ.ಎಂ. ಸಿದ್ಧರಾಮಯ್ಯ ತನ್ನ ಆಡಳಿತಾವಧಿಯಲ್ಲಿ ನೂರಾರು ಎಸ್.ಡಿ. ಪಿ.ಐ ಕಾರ್ಯಕರ್ತರ ಪ್ರಕರಣಗಳನ್ನು ಹಿಂಪಡೆದಿದ್ದು, ಕಾಂಗ್ರೆಸ್ ಮತ್ತು ಎಸ್.ಡಿ.ಪಿ.ಐ ನಡುವಿನ ಸುಮಧುರ ಬಾಂಧವ್ಯಕ್ಕೆ ಇದಕ್ಕಿಂತ ಉತ್ತಮ ಉದಾಹರಣೆ ಬೇಕೆ? ಎಸ್.ಡಿ.ಪಿ.ಐ ಕಾಂಗ್ರೆಸ್ ನ ಪಾಪದ ಕೂಸು. ಅಪಪ್ರಚಾರವೇ ಕಾಂಗ್ರೆಸ್ ಜೀವಾಳ ಎಂದು ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದ್ದಾರೆ.
ಜಿಲ್ಲಾ ಕಾಂಗ್ರೆಸ್ ನ ‘ಬಿಜೆಪಿ-ಎಸ್.ಡಿ.ಪಿ.ಐ ಒಳ ಒಪ್ಪಂದ’ ಆರೋಪಕ್ಕೆ ತಿರುಗೇಟು ನೀಡಿರುವ ಬಿಜೆಪಿ ಜಿಲ್ಲಾಧ್ಯಕ್ಷ, ಮುಸ್ಲಿಂ ಸಮುದಾಯವನ್ನು ಕೇವಲ ವೋಟ್ ಬ್ಯಾಂಕ್ ರಾಜಕಾರಣಕ್ಕೆ ಉಪಯೋಗಿಸುತ್ತಾ ಬಂದಿರುವ ಕಾಂಗ್ರೆಸ್ ನ ಕುಟಿಲ ನೀತಿ ಗುಟ್ಟಾಗಿ ಉಳಿದಿಲ್ಲ. ಪಿಎಫ್ಐ ಸಹಿತ 9 ದೇಶದ್ರೋಹಿ ಮತಾಂಧ ಸಂಘಟನೆಗಳನ್ನು ನಿಷೇಧಿಸಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ದಿಟ್ಟ ಕ್ರಮದಿಂದ ಕಂಗೆಟ್ಟಿರುವ ಕಾಂಗ್ರೆಸ್, ಬಿಜೆಪಿ ಮೇಲೆ ಗೂಬೆ ಕೂರಿಸುವ ವಿಫಲ ಯತ್ನದಿಂದ ನಿರಂತರ ನಿರಾಧಾರ ಆರೋಪದಲ್ಲಿ ತೊಡಗಿರುವುದು ಜನಜನಿತವಾಗಿದೆ. ದೇಶದೆಲ್ಲೆಡೆ ಅಸ್ತಿತ್ವವನ್ನು ಕಳೆದುಕೊಂಡಿರುವ ಕಾಂಗ್ರೆಸ್ ಗೆ ಇದೀಗ ತಾನೇ ಪೋಷಿಸಿರುವ ಎಸ್.ಡಿಪಿ.ಐ ನಿಂದ ಸ್ಪರ್ಧೆ ಎದುರಿಸುವ ಅನಿವಾರ್ಯತೆ ಬಂದೊದಗಿರುವುದು ನುಂಗಲಾರದ ತುತ್ತೆನಿಸಿದೆ ಎಂದಿದ್ದಾರೆ.
ಸದಾ ಒಂದೇ ವರ್ಗದ ಓಲೈಕೆ ಹಾಗೂ ಬ್ರಹ್ಮಾಂಡ ಭ್ರಷ್ಟಾಚಾರದೊಂದಿಗೆ ಸುದೀರ್ಘ ಕಾಲ ದೇಶವನ್ನಾಳಿದ ಕಾಂಗ್ರೆಸ್, ದೇಶದ್ರೋಹಿ ಮತಾಂಧ ಭಯೋತ್ಪಾದಕ ಸಂಘಟನೆಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೆ ಗಾಢ ಮೌನ ವಹಿಸಿದ್ದು, ಇದೀಗ ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ಐತಿಹಾಸಿಕ ದಿಟ್ಟ ಕ್ರಮದಿಂದ ಜ್ಞಾನೋದಯವಾದಂತೆ ನಟಿಸುತ್ತಿರುವುದು ಹಾಸ್ಯಾಸ್ಪದವೆನಿಸಿದೆ.
ಪಿಎಫ್ಐ ನಂತಹ ಸಮಾಜಘಾತುಕ ಮತಾಂಧ ಭಯೋತ್ಪಾದಕ ಸಂಘಟನೆಗಳನ್ನು ನಿಷೇಧಿಸಿ ಮಟ್ಟಹಾಕಿರುವ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ, ಮತೀಯ ರಾಜಕೀಯ ಪಕ್ಷವೆನಿಸಿರುವ ಎಸ್.ಡಿ.ಪಿ.ಐ ಅಥವಾ ಇನ್ನಿತರ ಯಾವುದೇ ಮತೀಯ ಸಂಘಟನೆಗಳು ದೇಶ ವಿರೋಧಿ ಕೃತ್ಯಗಳಲ್ಲಿ ತೊಡಗಿದ್ದಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸಮರ್ಥವಾಗಿದೆ. ಆದರೆ ಸೋಲಿನ ಭಯದಿಂದಲೇ ಈ ಬಗ್ಗೆ ಅತಿಯಾದ ಕಾಳಜಿ ತೋರುತ್ತಿರುವ ಕಾಂಗ್ರೆಸ್ ನ ಹತಾಶ ಮನೋಭಾವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಹೇಳಿಕೆಯಿಂದ ಜಗಜ್ಜಾಹೀರಾಗಿದೆ ಎಂದು ಕುಯಿಲಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.