ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ: ಮಂಗಳೂರು ದಸರಾ ಮಹೋತ್ಸವಕ್ಕೆ ಅದ್ಧೂರಿ ಚಾಲನೆ

ಮಂಗಳೂರು: ಕರಾವಳಿಯ ಇತಿಹಾಸ ಪ್ರಸಿದ್ಧ, ನಾಡಿನ ಪ್ರಮುಖ ಆಕರ್ಷಣೆಯಾದ ‘ಮಂಗಳೂರು ದಸರಾ’ ಮಹೋತ್ಸವಕ್ಕೆ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಭಾನುವಾರ ಮಧ್ಯಾಹ್ನ ಅತ್ಯಂತ ವಿಜೃಂಭಣೆಯಿಂದ ಚಾಲನೆ ದೊರೆತಿದೆ.

ಕೇಂದ್ರದ ಮಾಜಿ ಸಚಿವ ಹಾಗೂ ಕ್ಷೇತ್ರದ ಅಭಿವೃದ್ಧಿ ರೂವಾರಿ ಬಿ. ಜನಾರ್ದನ ಪೂಜಾರಿ ಅವರ ನೇತೃತ್ವದಲ್ಲಿ, ಕೊರಗಪ್ಪ ಸಭಾಭವನದ ಭವ್ಯ ದರ್ಬಾರ್ ಮಂಟಪದಲ್ಲಿ ಶ್ರೀ ಮಹಾಗಣಪತಿ, ಆದಿಶಕ್ತಿ, ನವದುರ್ಗೆಯರು ಹಾಗೂ ವಿದ್ಯಾದೇವತೆ ಶ್ರೀ ಶಾರದಾ ಮಾತೆಯ ಆಕರ್ಷಕ ಮೂರ್ತಿಗಳ ಪ್ರತಿಷ್ಠಾಪನೆ ಧಾರ್ಮಿಕ ವಿಧಿವಿಧಾನಗಳೊಂದಿಗೆ ಸಂಪನ್ನಗೊಂಡಿತು.

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ., ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಹಾಗೂ ಶಾಸಕ ಡಿ. ವೇದವ್ಯಾಸ ಕಾಮತ್ ಅವರು ಜ್ಯೋತಿ ಬೆಳಗಿಸುವ ಮೂಲಕ ಮಹೋತ್ಸವಕ್ಕೆ ವಿಧ್ಯುಕ್ತವಾಗಿ ಚಾಲನೆ ನೀಡಿದರು. ಈ ವೇಳೆ ಕ್ಷೇತ್ರಕ್ಕೆ ಅಪಾರ ಸಂಖ್ಯೆಯ ಭಕ್ತರು ಹರಿದುಬಂದು, ದೇವಿಯ ದರ್ಶನ ಪಡೆದು ಪುನೀತರಾದರು.ಮಾಧ್ಯಮಗಳೊಂದಿಗೆ ಮಾತನಾಡಿದ ಕ್ಷೇತ್ರದ ಖಜಾಂಚಿ ಪದ್ಮರಾಜ್ ಪೂಜಾರಿ ಅವರು ಈ ಬಾರಿಯ ದಸರಾ ಮಹೋತ್ಸವದ ವೈಶಿಷ್ಟ್ಯಗಳನ್ನು ಹಂಚಿಕೊಂಡಿದ್ದಾರೆ.ವಿಶಿಷ್ಟ ದರ್ಬಾರ್ ಮಂಟಪ: ಕಳೆದ 35 ವರ್ಷಗಳ ಇತಿಹಾಸದಲ್ಲೇ ಹಿಂದೆಂದೂ ಕಾಣದಂತಹ ನೂತನ ಶೈಲಿ ಹಾಗೂ ವಿಶಿಷ್ಟ ವಿನ್ಯಾಸದಲ್ಲಿ ಈ ಬಾರಿಯ ದರ್ಬಾರ್ ಮಂಟಪವನ್ನು ಅಲಂಕರಿಸಿ ನಿರ್ಮಿಸಲಾಗಿದೆ.*ಮಹಿಳೆಯರು, ಮಕ್ಕಳಿಗೆ ಪ್ರತ್ಯೇಕ ಸ್ಪರ್ಧೆ:*ಕಳೆದ ಬಾರಿ ಆರಂಭಿಸಲಾದ ‘ಮಕ್ಕಳ ದಸರಾ’ ಹಾಗೂ ‘ಕಿನ್ನಿ ಪಿಲಿ’ ಸ್ಪರ್ಧೆಗಳ ಮುಂದುವರಿದ ಭಾಗವಾಗಿ, ಈ ಬಾರಿ ಪ್ರಥಮವಾಗಿ ‘ಮಹಿಳಾ ದಸರಾ’ವನ್ನು ಸಂಘಟಿಸಲಾಗಿದೆ. ಮಹಿಳೆಯರು ಮತ್ತು ಮಕ್ಕಳಿಗೆ ಪ್ರತ್ಯೇಕ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದ್ದು, ಸಮಾಜದ 9 ಮಂದಿ ಅಸಾಮಾನ್ಯ ಸಾಧಕ ಮಹಿಳೆಯರನ್ನು ಗುರುತಿಸಿ ಸಂತೋಷಿ ಕಲಾಮಂಟಪದಲ್ಲಿ ಸನ್ಮಾನಿಸಲಾಗುವುದು.*ಆಕರ್ಷಕ ಚಿತ್ರಕಲೆಗಳು:*ಸ್ಥಳೀಯ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ‘ಫಿಕ್ಸ್‌ಪೆನ್ಸಿಲ್’ ಕಲಾ ಶಾಲೆಯ ಸುಮಾರು 200ಕ್ಕೂ ಅಧಿಕ ವಿದ್ಯಾರ್ಥಿಗಳು ಹಾಗೂ ಕಲಾವಿದರು ಕ್ಷೇತ್ರದ ಮುಖ್ಯ ಗೇಟ್‌ನಿಂದ ಪ್ರವೇಶ ದ್ವಾರದವರೆಗೆ ರಸ್ತೆಯಲ್ಲೇ ಆಕರ್ಷಕ ಚಿತ್ರಕಲೆಗಳನ್ನು ರಚಿಸಿದ್ದಾರೆ.*ಮಕ್ಕಳ ಅಕ್ಷರಾಭ್ಯಾಸಕ್ಕೆ ವಿಶೇಷ ವ್ಯವಸ್ಥೆ:*ಭಕ್ತರ ಬೇಡಿಕೆಯ ಮೇರೆಗೆ ಅಕ್ಟೋಬರ್ 20ರಂದು ಬೆಳಿಗ್ಗೆ 9 ಗಂಟೆಗೆ ಶಾರದಾ ದೇವಿಯ ಸನ್ನಿಧಿಯಲ್ಲಿ ಮಕ್ಕಳಿಗೆ ಅಕ್ಷರಾಭ್ಯಾಸಕ್ಕೆ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿದ್ದು, ಈಗಾಗಲೇ 100ಕ್ಕೂ ಹೆಚ್ಚು ಪೋಷಕರು ತಮ್ಮ ಮಕ್ಕಳ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ.*ಮುಖ್ಯಮಂತ್ರಿಗಳ ಭೇಟಿ:*ತುರ್ತು ಕಾರಣಗಳಿಂದ ದೆಹಲಿಗೆ ತೆರಳಬೇಕಾಗಿದ್ದರಿಂದ ಉದ್ಘಾಟನಾ ದಿನದಂದು ಆಗಮಿಸಲು ಸಾಧ್ಯವಾಗದ ಮುಖ್ಯಮಂತ್ರಿಗಳು ಅಕ್ಟೋಬರ್ 15 ಅಥವಾ 16ರಂದು ಕ್ಷೇತ್ರಕ್ಕೆ ಭೇಟಿ ನೀಡುವ ನಿರೀಕ್ಷೆಯಿದೆ. ಜೊತೆಗೆ ಹಲವು ಸಚಿವರು, ಗಣ್ಯರು ಹಾಗೂ ಧಾರ್ಮಿಕ ಮುಖಂಡರು ಭಾಗವಹಿಸಲಿದ್ದಾರೆ. *ಭಕ್ತರ ಸಂಖ್ಯೆ ಹೆಚ್ಚಳ ಸಾಧ್ಯತೆ:*ಮೊದಲ ದಿನವೇ 3,500ಕ್ಕೂ ಅಧಿಕ ಮಂದಿ ಪಾಲ್ಗೊಂಡ ಮ್ಯಾರಥಾನ್‌ಗೆ ಚಾಲನೆ ನೀಡಲಾಗಿದೆ. ಈ ಬಾರಿ ಭಕ್ತರ ಸಂಖ್ಯೆಯಲ್ಲಿ ಶೇ. 25 ರಿಂದ 30ರಷ್ಟು ಹೆಚ್ಚಳವಾಗುವ ನಿರೀಕ್ಷೆಯಿದ್ದು, ಸುಮಾರು 1,000ಕ್ಕೂ ಹೆಚ್ಚು ಸ್ವಯಂಸೇವಕರು ಕ್ಷೇತ್ರಾದ್ಯಂತ ಸೇವೆಗೆ ನಿಯೋಜಿತರಾಗಿದ್ದಾರೆ. “ಇದು ಸರ್ಕಾರದ ದಸರಾ ಅಲ್ಲ, ಇದು ಜನರ ದಸರಾ” ಎಂದು ಅವರು ಬಣ್ಣಿಸಿದ್ದಾರೆ.*ಅ. 21ಕ್ಕೆ ಭವ್ಯ ಶೋಭಾಯಾತ್ರೆ:*11 ದಿನಗಳ ಕಾಲ ವೈವಿಧ್ಯಮಯ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದ್ದು, ಅಕ್ಟೋಬರ್ 21ರಂದು ಸಂಜೆ ವಿಸರ್ಜನಾ ಪೂಜೆ ನಡೆಯಲಿದೆ. ಬಳಿಕ ಆಕರ್ಷಕ ಸ್ತಬ್ಧಚಿತ್ರಗಳು, ಸಾಂಸ್ಕೃತಿಕ ಕಲಾತಂಡಗಳು ಮತ್ತು ಹುಲಿವೇಷಗಳೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ರಾತ್ರಿಯಿಡೀ ಭವ್ಯ ಶೋಭಾಯಾತ್ರೆ ಸಾಗಲಿದೆ. ಮರುದಿನ ಬೆಳಿಗ್ಗೆ (ಅಕ್ಟೋಬರ್ 22) ದೇವಸ್ಥಾನದ ಕಲ್ಯಾಣಿಯಲ್ಲಿ ಎಲ್ಲಾ ಮೂರ್ತಿಗಳನ್ನು ಸಂಪ್ರದಾಯಬದ್ಧವಾಗಿ ಜಲಸ್ತಂಭನ ಮಾಡಲಾಗುತ್ತದೆ.