ಕುಡ್ಲ ಶೈಲಿಯ ಈ ಸ್ಪೆಷಲ್ ಚಿಕನ್ ಕರ್ರಿ ಮಾಡಿ ತಿಂದ್ರೆ ಆಹಾ ಅಂತೀರಿ!

ಸಣ್ಣಗೇ ಮಳೆ ಬೀಳುತ್ತಿದೆ.ಈ ಟೈಮ್ ನಲ್ಲಿ ಸ್ಪೈಸಿ ಖಾಧ್ಯಗಳೇ ಎಲ್ಲರ ಹಾಟ್ ಫೆವರೇಟ್. ನಾನ್ ವೆಜ್ ಪ್ರಿಯರಿಗಂತೂ ಹೇಳೋದೇ ಬೇಡ. ಬನ್ನಿ ಹಾಗಿದ್ರೆ ಒಂದೊಳ್ಳೆ ಕುಡ್ಲ ಸ್ಟೈಲ್ ನಲ್ಲಿ ಚಿಕನ್ ಕರ್ರಿ ಮಾಡೋದ್ ಹೇಗೆ  ತಿಳ್ಕೊಳ್ಳೋಣ
ಏನೇನ್ ಬೇಕು?
ಜೀರಿಗೆ- ಅರ್ಧ ಚಮಚ, ಕಾಳು ಮೆಣಸು- ಅರ್ಧ ಚಮಚ

ಎಣ್ಣೆ – ಸ್ವಲ್ಪ, ಬ್ಯಾಡಗಿ ಮೆಣಸಿನಕಾಯಿ-5-6, ಈರುಳ್ಳಿ- 2-3, ಬೆಳ್ಳುಳ್ಳಿ- 10 ಎಸಳು, ತೆಂಗಿನ ತುರಿ- ಅರ್ಧ ಬಟ್ಟಲು

ಅರಿಶಿನ ಪುಡಿ – ಸ್ವಲ್ಪ, ದನಿಯಾ- ಅರ್ಧ ಚಮಚ, ಕೋಳಿ ಮಾಂಸ- 300 ಗ್ರಾಂ, ತುಪ್ಪ- ಸ್ವಲ್ಪ, ಉಪ್ಪು- ರುಚಿಗೆ ತಕ್ಕಷ್ಟು

ನಿಂಬೆ ರಸ – 1 ಚಮಚ, ಗರಂ ಮಸಾಲಾ ಪುಡಿ – 1 ಚಮಚ, ತೆಂಗಿನ ಹಾಲು- 3/4 ಬಟ್ಟಲು

ಹೀಗೆ ಮಾಡಿ:

ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ಬಳಿಕ ಅದಕ್ಕೆ ಮೆಣಸಿನ ಕಾಯಿ, ಜೀರಿಗೆ, ಕಾಳು ಮೆಣಸು, ದನಿಯಾ ಹಾಕಿ ಚೆನ್ನಾಗಿ ಹುರಿದು ಜಾರ್ ಹಾಕಿಕೊಳ್ಳಬೇಕು. ಇದೇ ಬಾಣಲೆಯಲ್ಲಿಯೇ ತೆಂಗಿನ ತುರಿ. ಈರುಳ್ಳಿ, ಬೆಳ್ಳುಳ್ಳಿ ಹಾಕಿ ಕೆಂಪಗೆ ಹುರಿದು, ಅರಿಶಿನದ ಪುಡಿಯೊಂದಿಗೆ ಜಾರ್’ಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.

ಬಳಿಕ ಬಾಣಲೆಗೆ ಸ್ವಲ್ಪ ಎಣ್ಣೆ  ಹಾಗೂ ತುಪ್ಪವನ್ನು ಹಾಕಿ ಕಾದ ನಂತರ ಈರುಳ್ಳಿ ಹಾಕಿ ಕೆಂಪಗೆ ಹುರಿದುಕೊಳ್ಳಬೇಕು. ಬಳಿಕ ಚೆನ್ನಾಗಿ ತೊಳೆದ ಕೋಳಿ ಮಾಂಸ ಹಾಗೂ ಉಪ್ಪು ಹಾಕಿ 10 ನಿಮಿಷ ಬೇಯಿಸಿಕೊಳ್ಳಿ.

ಮಾಂಸ ಬೆಂದ ಬಳಿಕ ರುಬ್ಬಿಕೊಂಡ ಮಸಾಲೆ ಮಿಶ್ರಣವನ್ನು ಹಾಕಿ 5 ನಿಮಿಷ ಸಣ್ಣ ಉರಿಯಲ್ಲಿ ಬಿಡಿ. ನಂತರ ತೆಂಗಿನ ಹಾಲು ಹಾಕಿ 5 ನಿಮಿಷ ಕುದಿಯಲು ಬಿಡಬೇಕು. ಪ್ಯಾನ್’ಗೆ ಸ್ವಲ್ಪ ಎಣ್ಣೆ ಹಾಕಿ ಈರುಳ್ಳಿಯನ್ನು ಕೆಂಪಗೆ ಹುರಿದು ಗರಂ ಮಸಾಲಾ ಹಾಕಿ ಇದನ್ನು ಈಗಾಗಲೇ ಕುದಿಯುತ್ತಿರುವ ಕರ್ರಿಗೆ ಹಾಕಿ 1 ನಿಮಿಷ ಕುದಿಸಿದರೆ ಟೇಸ್ಟಿ ಟೇಸ್ಟಿ ಕುಡ್ಲ ಚಿಕನ್ ಕರ್ರಿ ರೆಡಿ.