ಕೆ.ಎಸ್.ಆರ್.ಟಿ ಸಿ ‘ಮಂಗಳೂರು ದಸರಾ ದರ್ಶನ’ಕ್ಕೆ ಭರ್ಜರಿ ಬೇಡಿಕೆ: ಟೂರು ಪ್ಯಾಕೇಜ್ ಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ

ಮಂಗಳೂರು: ಕೆ.ಎಸ್.ಆರ್.ಟಿ ಸಿ ಮಂಗಳೂರು ವಿಭಾಗದ ‘ಮಂಗಳೂರು ದಸರಾ ದರ್ಶನ’ಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ ಎಂದು ಸಂಸ್ಥೆಯ ಹಿರಿಯ ವಿಭಾಗಾಧಿಕಾರಿ ರಾಜೇಶ್ ಶೆಟ್ಟಿ ಹೇಳಿದ್ದಾರೆ.

ಮಂಗಳೂರು ದಸರಾ ದರ್ಶನಕ್ಕೆಂದೆ ಒಂಬತ್ತು ಬಸ್ ಗಳನ್ನು ಮೀಸಲಿರಿಸಲಾಗಿದ್ದು, ಕಳೆದ ವರ್ಷದಂತೆ ಈ ವರ್ಷವೂ ಸಾರ್ವಜನಿಕರಿಂದ ಟಿಕೆಟ್ ಗಾಗಿ ಬೇಡಿಕೆ ಬಂದಿದೆ. ಪ್ರಸ್ತುತ 6-7 ಬಸ್ ಗಳು ಓಡಾಡುತ್ತಿದ್ದು, ವಾರಾಂತ್ಯ ಮತ್ತು ಅ.21 ರ ಬಳಿಕ ಜನದಟ್ಟಣೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ.

ಕೊಲ್ಲೂರು ಮತ್ತು ನಗರ ದರ್ಶನಕ್ಕೆ ಸಾರ್ವಜನಿಕರಿಂದ ಹೆಚ್ಚಿನ ಬೇಡಿಕೆ ವ್ಯಕ್ತವಾಗಿದೆ ಎಂದು ಅವರು ಟಿಓಐಗೆ ಮಾಹಿತಿ ನೀಡಿದ್ದಾರೆ.

ದಸರಾ ದರ್ಶನ ಪ್ಯಾಕೇಜ್ ಮಂಗಳಾದೇವಿ, ಪೊಳಲಿ, ಸುಂಕದಕಟ್ಟೆ, ಕಟೀಲು, ಬಪ್ಪನಾಡು, ಸಸಿಹಿತ್ಲು, ಚಿತ್ರಾಪುರ ಮತ್ತು ಕುದ್ರೋಳಿ ದೇವಸ್ಥಾನ ದರ್ಶನಗಳನ್ನು ಒಳಗೊಂಡಿದೆ.

ಮಡಿಕೇರಿ ಪ್ಯಾಕೇಜ್ ರಾಜಾ ಸೀಟ್, ಅಬ್ಬಿ ಫಾಲ್ಸ್, ನಿಸರ್ಗಧಾಮ, ಗೋಲ್ಡನ್ ಟೆಂಪಲ್ ಮತ್ತು ಹಾರಂಗಿ ಡ್ಯಾಮ್ ಅನ್ನು ಒಳಗೊಂಡಿದೆ.

ಕೊಲ್ಲೂರು ಪ್ಯಾಕೇಜ್ ಮಾರಣಕಟ್ಟೆ, ಕೊಲ್ಲೂರು, ಕಮಲಶಿಲೆ ಮತ್ತು ಉಚ್ಚಿಲ ದೇವಸ್ಥಾನಗಳನ್ನು ಒಳಗೊಂಡಿದೆ.

ಪ್ರತಿ ಬಸ್ ಗೂ ಸಮರ್ಪಿತ ಸಂಯೋಜಕರನ್ನು ನಿಯೋಜಿಸಲಾಗಿದೆ. ಲೋಕಲ್ ಟ್ರಿಪ್ ಗಳಿಗೆ ಟಾಸ್ಕ್ ಪೋರ್ಸ್ ಗಳನ್ನು ನಿಯೋಜಿಸಲಾಗಿದ್ದು ಸಮಸ್ಯೆ ಉದ್ಬವಿಸಿದ ಸಂದರ್ಭದಲ್ಲಿ ಕ್ಷಿಪ್ರವಾಗಿ ಕಾರ್ಯಾಚರಿಸಲು ತರಬೇತಿಗೊಳಿಸಲಾಗಿದೆ. ಸಾರ್ವಜನಿಕರಿಂದ ಗೆಜ್ಜೆಗಿರಿ ಕ್ಷೇತ್ರಕ್ಕೂ ಪ್ಯಾಕೇಜು ನೀಡುವಂತೆ ಬೇಡಿಕೆ ಬಂದಿದೆ. ಈ ರೂಟ್ ಅನ್ನು ಮರು ಪರಿಚಯಿಸಲು ನಿರ್ಧರಿಸಲಾಗಿದ್ದು ವಿಟ್ಲ, ಪುತ್ತೂರು, ಗೆಜ್ಜೆಗಿರಿ ಮತ್ತು ಹನುಮಗಿರಿ ದೇವಸ್ಥಾನ್ಗಳನ್ನು ಇದು ಒಳಗೊಳ್ಳಲಿದೆ ಎಂದು ಅವರು ಮಾಧ್ಯಮಕ್ಕೆ ತಿಳಿಸಿದ್ದಾರೆ.