ಕಾರ್ಮಿಕ ದಿನಾಚರಣೆ ಉಡುಗೊರೆ: ಕೆಎಸ್‌ಆರ್‌ಟಿಸಿಯ 7,200 ನೌಕರರ ವಿರುದ್ಧದ ಶಿಸ್ತು ಪ್ರಕರಣ ರದ್ದು

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಕಾರ್ಮಿಕ ದಿನದಂದು ತನ್ನ ಕಾರ್ಮಿಕರಿಗೆ ಉಡುಗೊರೆಯನ್ನು ನೀಡಿದೆ. ಸಂಸ್ಥೆಯ 7,200 ನೌಕರರ ವಿರುದ್ಧ ದಾಖಲಾಗಿದ್ದ ಶಿಸ್ತು ಪ್ರಕರಣಗಳನ್ನು ಒಂದೇ ಬಾರಿಗೆ ಅನ್ವಯಿಸುವಂತೆ ರದ್ದು ಮಾಡಿ ಆದೇಶ ಹೊರಡಿಸಿ ಇತಿಹಾಸ ನಿರ್ಮಿಸಿದೆ.

ಕೆಎಸ್‌ಆರ್‌ಟಿಸಿ ನಿಗಮದ ಬೆಂಗಳೂರು ಕಚೇರಿಯಲ್ಲಿ ಕಾರ್ಮಿಕ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವ್ಯವಸ್ಥಾಪಕ ನಿರ್ದೇಶಕ ವಿ. ಅನ್ಬು ಕುಮಾರ್‌ ಈ ಆದೇಶವನ್ನು ಹೊರಡಿಸಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. 10 ತಿಂಗಳಿಗಿಂತ ಕಡಿಮೆ ಅವಧಿಯ ಒಳಗಿನ ಗೈರು ಹಾಜರಿಯನ್ನು ಮನ್ನಿಸಿ, ಕೂಡಲೇ ಕರ್ತವ್ಯಕ್ಕೆ ಹಾಜರಾದ ನೌಕರರ ವಿಚಾರಣೆಯನ್ನು ರದ್ದುಗೊಳಿಸಿರುವುದಾಗಿ ಅವರು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಶಿಸ್ತು ಪ್ರಕರಣ ಮುಕ್ತಾಯಗೊಂಡಿರುವ ನೌಕರರಿಗೆ ಆದೇಶ ಪ್ರತಿಯನ್ನು ನೀಡಿ ಶುಭಕೋರಿದರು.

ಕಾರ್ಮಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಕಾರ್ಮಿಕರು ನಮ್ಮ ಸಾರಿಗೆ ಸಂಸ್ಥೆಯ ಬೆನ್ನುಲುಬಾಗಿದ್ದು, ಅವರ ಕ್ಷೇಮ ನಮ್ಮ ಆದ್ಯತೆ. ನಮ್ಮ ಸಂಸ್ಥೆ ನಡೆಯುತ್ತಿರುವುದು ಚಾಲಕ, ನಿರ್ವಾಹಕ, ತಾಂತ್ರಿಕ ಸಿಬ್ಬಂದಿಯಿಂದ. ಹೀಗಾಗಿ ಅಧಿಕಾರಿ ಅಥವಾ ನೌಕರರ ಬಾಂಧವ್ಯ ಚೆನ್ನಾಗಿದ್ದರೆ ಸಂಸ್ಥೆ ಚೆನ್ನಾಗಿರುತ್ತದೆ. ನಿಗಮದ ಪ್ರತಿದಿನದ ಆದಾಯ ಸರಾಸರಿ 10 ಕೋಟಿ ಇರಬೇಕು. ಆದರೆ, ನಮಗೆ ಸರಾಸರಿ 8 ಕೋಟಿ ರೂ. ಆದಾಯ ಬರುತ್ತಿದೆ. ಇದರಲ್ಲಿ ಶೇ.70ರಷ್ಟು ಡೀಸೆಲ್‌ ಪಾವತಿಗೆ ಸಂದಾಯ ಮಾಡಬೇಕಾಗಿದೆ. ನಿಗಮದ ಆರ್ಥಿಕ ಪರಿಸ್ಥಿತಿಯು ಕ್ಲಿಷ್ಟಕರವಾದ ಸ್ಥಿತಿಯಲ್ಲಿರುವುದರಿಂದ ನೌಕರರು ಸಾರಿಗೆ ಸೇವೆಯನ್ನು ಬಲಪಡಿಸಿ, ಉತ್ತಮ ಸೇವೆಯನ್ನು ಸಾರ್ವಜನಿಕರಿಗೆ ನೀಡಲು ನಮ್ಮ ಜತೆ ಕೈಜೋಡಿಸಬೇಕು ಎಂದರು.

ಇದೇ ವೇಳೆ ಎಂಬಿಬಿಎಸ್‌, ಎಂ.ಟೆಕ್‌ ಸೇರಿದಂತೆ ಉನ್ನತ ವ್ಯಾಸಂಗ ಮಾಡಿರುವ ಸಾರಿಗೆ ನೌಕರರ ಮಕ್ಕಳನ್ನು ವಿ. ಅನ್ಬು ಕುಮಾರ್‌ ಸನ್ಮಾನಿಸಿ, ಶುಭಹಾರೈಸಿದರು. ಈ ಸಂದರ್ಭದಲ್ಲಿ ಮುಖ್ಯ ಯಾಂತ್ರಿಕ ಶಿಲ್ಪಿ ರಮೇಶ್‌, ಮುಖ್ಯ ಸಂಚಾರ ವ್ಯವಸ್ಥಾಪಕ ಆಂಥೋನಿ ಜಾರ್ಜ್‌, ಮುಖ್ಯ ಕಾರ್ಮಿಕ ಕಲ್ಯಾಣಾಧಿಕಾರಿ ಗೌರಾಂಭ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.