ಮಂಗಳೂರು: ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಸ್ ಸಂಚಾರ ಆರಂಭಿಸಲು ಜನರಿಂದ ಬೇಡಿಕೆ ಬರುತ್ತಿದ್ದರೂ ಕಾರಣಾಂತರಗಳಿಂದ ಇಲ್ಲಿಗೆ ಬಸ್ ಸಂಚಾರ ಸ್ಥಗಿತಗೊಂಡಿತ್ತು. ಇದೀಗ ಬಸ್ ಪುನರ್ ಸಂಚಾರಕ್ಕೆ ಮುಹೂರ್ತ ಕೂಡಿ ಬಂದಿದ್ದು, ಮಂಗಳೂರು ನಗರದ ಬಿಜೈ ಸರಕಾರಿ ಬಸ್ ನಿಲ್ದಾಣ ಮತ್ತು ಮಣಿಪಾಲದಿಂದ ಬಜ್ಪೆ ಕೆಂಜಾರಿನಲ್ಲಿರುವ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸರಕಾರಿ ವೋಲ್ವೊ ಬಸ್ ಸಂಚಾರ ಆರಂಭವಾಗಲಿದೆ.
ಹಲವು ವರ್ಷಗಳಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಸರಕಾರಿ ಬಸ್ ಸಂಚಾರ ವ್ಯವಸ್ಥೆ ಕಲ್ಪಿಸಬೇಕೆಂಬ ಬೇಡಿಕೆ ಇದ್ದರೂ ಕೂಡ ಇದು ಈಡೇರಿರಲಿಲ್ಲ. ಸಂಚಾರ ಆರಂಭಿಸಿದ್ದರೂ ಕೂಡ ಆದಾಯದ ಕೊರತೆಯ ನೆಪದಲ್ಲಿ ಸಂಚಾರ ಸ್ಥಗಿತಗೊಳಿಸಲಾಗಿತ್ತು.
ಆದರೆ ಇದೀಗ ಬೇಡಿಕೆ ಮತ್ತಷ್ಟು ತೀವ್ರಗೊಂಡ ಹಿನ್ನೆಲೆಯಲ್ಲಿ ಸಾರಿಗೆ ಸಚಿವ ಶ್ರೀರಾಮುಲು ಬಸ್ ಸಂಚಾರ ಅರಂಭಿಸಲು ಸೂಚನೆ ನೀಡಿದ್ದಾರೆ. ಮೈಸೂರು ವಿಭಾಗದಿಂದ ನಾಲ್ಕು ವೋಲ್ವೊ ಬಸ್‌ಗಳನ್ನು ತರಿಸಲಾಗಿದ್ದರೂ ಕೂಡ ಆರ್‌ಟಿಒ ಪರವಾನಗಿ ನೀಡದ ಕಾರಣ ಓಡಾಟ ಸಾಧ್ಯವಾಗಿರಲಿಲ್ಲ.
ಈ ನಿಟ್ಟಿನಲ್ಲಿ ಆರ್‌ಟಿಒ, ಕೆಎಸ್ಸಾರ್ಟಿಸಿ, ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಗಳು ನಡೆಸಿದ ಮಾತುಕತೆ ಪಲಫ್ರದವಾಗಿದ್ದು, ಬಸ್ ಸಂಚಾರ ಆರಂಭಗೊಳ್ಳುವ ಸಾಧ್ಯತೆ ದಟ್ಟವಾಗಿದೆ.
ಬೆಳಗ್ಗೆ 6:30ಕ್ಕೆ ಮಂಗಳೂರಿನ ಬಿಜೈ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಿಂದ ಸ್ಟೇಟ್‌ಬ್ಯಾಂಕ್-ಸೆಂಟ್ರಲ್ ರೈಲು ನಿಲ್ದಾಣ-ಲಾಲ್‌ಬಾಗ್- ಕುಂಟಿಕಾನ- ಕಾವೂರು ಮೂಲಕ ಕೆಂಜಾರಿಗೆ ಬಸ್ ಸಂಚಾರ ಮಾಡಲಿದೆ. ಈ ರೂಟ್‌ನ ಪ್ರಯಾಣ ದರ 100 ರೂ. ನಿಗದಿಪಡಿಸಲಾಗಿದೆ. ಮಣಿಪಾಲದಿಂದ ಆಗಮಿಸುವ ಬಸ್ ಕಾವೂರು ಮೂಲಕ ವಿಮಾನ ನಿಲ್ದಾಣ ತಲುಪಲಿದೆ. ಈ ರೂಟ್‌ನ ಪ್ರಯಾಣ ದರ 300 ರೂ.ನಿಗದಿಪಡಿಸಲಾಗಿದೆ. ಇದರಲ್ಲಿ ವಿಮಾನ ಯಾನಿಗಳಿಗೆ ಮಾತ್ರವಲ್ಲ, ಸಾರ್ವಜನಿಕರ ಪ್ರಯಾಣಕ್ಕೂ ಅವಕಾಶ ಕಲ್ಪಿಸಲಾಗಿದೆ.