ಬಸ್ ನಲ್ಲಿ ಟಿಕೆಟ್ ಕೊಳ್ಳಲು ಮಹಿಳೆಯರ ಹಿಂದೇಟು: ರಾಜ್ಯ ಸಾರಿಗೆ ಸಿಬ್ಬಂದಿಗಳ ಪರದಾಟ; ಸಿಎಂಗೆ ಪತ್ರ

ಬೆಂಗಳೂರು: ಚುನಾವಣೆಯ ಸಂದರ್ಭದಲ್ಲಿ ಮಹಿಳೆಯರಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ ಗಳಲ್ಲಿ ಉಚಿತ ಪ್ರಯಾಣದ ಗ್ಯಾರಂಟಿ ಅನ್ನು ಕಾಂಗ್ರೆಸ್ ಪಕ್ಷವು ನೀಡಿದ್ದು, ಇದೀಗ ಮಹಿಳೆಯರು ಬಸ್ ಪ್ರಯಾಣದ ಸಂದರ್ಭದಲ್ಲಿ ಟಿಕೆಟ್ ಕೊಳ್ಳಲು ನಿರಾಕರಣೆ ಮಾಡುತ್ತಿರುವ ಘಟನೆಗಳು ವರದಿಯಾಗುತ್ತಿವೆ. ಮಹಿಳೆಯರಿಂದ ಟಿಕೆಟ್ ಶುಲ್ಕವನ್ನು ಪಡೆಯಲು ಸಾರಿಗೆ ಸಿಬ್ಬಂದಿಗಳು ಹರಸಾಹಸ ಪಡಬೇಕಾಗುತ್ತಿದೆ.

ಈ ಹಿನ್ನೆಲೆಯಲ್ಲಿ ಮಹಿಳೆಯರಿಗೆ ಬಸ್ ನಲ್ಲಿ ಉಚಿತ ಪ್ರಯಾಣವನ್ನು ಘೋಷಣೆ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಕೆ.ಎಸ್.ಆರ್.ಟಿ.ಸಿ ಸ್ಟಾಫ್ ಎಂಡ್ ವರ್ಕರ್ಸ್ ಫೆಡರೇಷನ್ ಪ್ರಧಾನ ಕಾರ್ಯದರ್ಶಿ ವಿಜಯಭಾಸ್ಕರ್ ಡಿ.ಎ ಪತ್ರ ಬರೆದಿದ್ದಾರೆ. ಈ ಯೋಜನೆಯಿಂದ ನಿಗಮಕ್ಕಾಗುವ ನಷ್ಟವನ್ನು ಸರಿದೂಗಿಸಲು ಮುಂಗಡವಾಗಿ ಹಣವನ್ನು ಬಿಡುಗಡೆ ಮಾಡಬೇಕು ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.

Image

ಬಸ್ಸಿನಲ್ಲಿ ಪ್ರಯಾಣಿಸುವ ಮಹಿಳೆಯರು ನಾವ್ಯಾಕೆ ಟಿಕೆಟ್ ತೆಗೆದುಕೊಳ್ಳಬೇಕು? ಕಾಂಗ್ರೆಸ್ ನವರು ಉಚಿತ ಪ್ರಯಾಣವೆಂದು ಹೇಳಿದ್ದಾರೆ, ನಾವು ಟಿಕೆಟ್ ತೆಗೆದುಕೊಳ್ಳುವುದಿಲ್ಲ ಎನ್ನುವ ವೀಡಿಯೋಗಳು ಹರಿದಾಡುತ್ತಿದೆ. ಸರಕಾರವು ಅಧಿಕೃತ ಆದೇಶ ಹೊರಡಿಸಬೇಕೆಂದು ಪ್ರಧಾನ ಕಾರ್ಯದರ್ಶಿ ಮನವಿ ಮಾಡಿದ್ದಾರೆ.

Image

ಟಿಕೆಟ್ ದರವನ್ನು ಪಾವತಿಸದೆ ಉಚಿತವಾಗಿ ಪ್ರಯಾಣಿಸಲು ಅನುವು ಮಾಡಿಕೊಡುವಂತೆ ಮಹಿಳಾ ಪ್ರಯಾಣಿಕರು ಕಂಡಕ್ಟರ್‌ಗಳನ್ನು ಒತ್ತಾಯಿಸುತ್ತಿದ್ದಾರೆ. ಬಸ್ ಪ್ರಯಾಣದ ವೇಳೆ ಸಿಬ್ಬಂದಿ ಹಾಗೂ ಪ್ರಯಾಣಿಕರ ನಡುವೆ ವಾಗ್ವಾದ ನಡೆದಿರುವ ಘಟನೆಗಳು ಹಲವು ಬಾರಿ ನಡೆದಿವೆ. ಇದು ಒಳ್ಳೆಯ ಲಕ್ಷಣವಲ್ಲ. ಮಹಿಳೆಯರಿಗೆ ಉಚಿತ ಪ್ರಯಾಣದ ಕುರಿತು ಸರ್ಕಾರದ ಮಟ್ಟದಲ್ಲಿ ನಿರ್ಧಾರ ತೆಗೆದುಕೊಳ್ಳುವಂತೆ ಮತ್ತು ಸಾರಿಗೆ ನಿಗಮಗಳಿಗೆ ನಿರ್ದೇಶನ ನೀಡುವಂತೆ ನಾವು ವಿನಂತಿಸುತ್ತೇವೆ, ಎಂದು ಪತ್ರದಲ್ಲಿ ಬರೆಯಲಾಗಿದೆ.

ಪ್ರಯಾಣವನ್ನು ಜಾರಿಗೆ ತರಲು, ರಾಜ್ಯ ರಸ್ತೆ ಸಾರಿಗೆ ನಿಗಮಗಳ ಮೇಲಿನ ಆರ್ಥಿಕ ಹೊರೆಯನ್ನು ಸರಿಯಾಗಿ ಅಂದಾಜು ಮಾಡಲು ಮತ್ತು ನಿಗಮಗಳಿಗೆ ಮುಂಚಿತವಾಗಿ ವೆಚ್ಚವನ್ನು ಮಂಜೂರು ಮಾಡಲು ನಾವು ನಿಮ್ಮನ್ನು ಕೋರುತ್ತೇವೆ ಎಂದು ಪತ್ರದಲ್ಲಿ ಬರೆಯಲಾಗಿದೆ.