ಕೃಷಿ ಸಾಲಮನ್ನಾ: ಆರ್‌ಬಿಐ ಎಚ್ಚರಿಕೆ

ನವದೆಹಲಿ: ಕೃಷಿ ಸಾಲಮನ್ನಾಕ್ಕೆ ಕಡಿವಾಣ ಹಾಕುವಂತೆ ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಐ) ರಾಜ್ಯ ಸರ್ಕಾರಗಳಿಗೆ ತಾಕೀತು ಮಾಡಿದೆ. ರಾಜ್ಯಸರ್ಕಾರಗಳ ಸಾಲಮನ್ನಾ ನಿರ್ಧಾರದಿಂದ ಭವಿಷ್ಯದಲ್ಲಿ ಬ್ಯಾಂಕ್‌ಗಳ ಕೃಷಿ ಸಾಲ ವಿತರಣೆ ಸಾಮರ್ಥ್ಯಕ್ಕೆ ದೊಡ್ಡ ಪೆಟ್ಟು ಬೀಳುವ ಸಾಧ್ಯತೆ ಇದೆ. ರಾಜ್ಯ ಸರ್ಕಾರಗಳ ಕೃಷಿ ಸಾಲಮನ್ನಾ ನಿರ್ಧಾರದಿಂದಾಗಿ ಬ್ಯಾಂಕ್‌ಗಳ ಕೃಷಿ ಸಾಲ ವಿತರಣೆ ಪ್ರಮಾಣ ಶೇ 70ರವರೆಗೂ ಕುಂಠಿತಗೊಂಡಿದೆ ಎಂದು ಆರ್‌ಬಿಐ ಎಚ್ಚರಿಕೆ ನೀಡಿದೆ.

2016–17ರಲ್ಲಿ ಬ್ಯಾಂಕ್‌ಗಳ ಕೃಷಿ ಸಾಲ ನೀಡಿಕೆ ಪ್ರಮಾಣ ಶೇ 12.4ರಷ್ಟು ಪ್ರಗತಿ ಸಾಧಿಸಿತ್ತು. 2017–18ರಲ್ಲಿ ಸಾಮರ್ಥ್ಯ ಶೇ 3.8ಕ್ಕೆ ಕುಸಿದಿದೆ ಎಂದು ಆರ್‌ಬಿಐ ವರದಿ ತಿಳಿಸಿದೆ.

ಪ್ರಧಾನಿ ನರೇಂದ್ರ ಮೋದಿ ಕಳೆದ ಫೆಬ್ರುವರಿಯಲ್ಲಿ ಉತ್ತರ ಪ್ರದೇಶ ರೈತರ ಸಾಲಮನ್ನಾ ಘೋಷಿಸಿದ್ದರು. ಅದಾದ ನಂತರ ಕನಿಷ್ಠ ಎಂಟು ರಾಜ್ಯಗಳು ಅಂದಾಜು ಒಂದು ಲಕ್ಷ ಕೋಟಿಗೂ ಹೆಚ್ಚು ಮೊತ್ತದ ರೈತರ ಸಾಲವನ್ನು ಮನ್ನಾ ಮಾಡುವುದಾಗಿ ಘೋಷಿಸಿದೆ. ಕರ್ನಾಟಕ, ಉತ್ತರ ಪ್ರದೇಶ, ಪಂಜಾಬ್‌, ಮಹಾರಾಷ್ಟ್ರ, ಛತ್ತೀಸಗಡ, ಮಧ್ಯಪ್ರದೇಶ ಸರ್ಕಾರಗಳು ಕೃಷಿ ಸಾಲಮನ್ನಾ ಮಾಡುವುದಾಗಿ ಹೇಳಿದೆ.

ಕರ್ನಾಟಕ ರಾಜ್ಯದಲ್ಲಿ ಜೆಡಿಎಸ್‌–ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರ ₹46,756.61 ಕೋಟಿ ಕೃಷಿ ಸಾಲಮನ್ನಾ ಮಾಡಿದೆ. ಸಾಲಮನ್ನಾ ಘೋಷಣೆ ಮಾಡಿದ ಎಲ್ಲ ರಾಜ್ಯಗಳ ಪೈಕಿ ಇದು ಅತ್ಯಂತ ದೊಡ್ಡ ಮೊತ್ತವಾಗಿದೆ.