ಕೃಷ್ಣಮಠಕ್ಕೆ ಸ್ವರ್ಣ ಗೋಪುರ ಸಮರ್ಪಣೆ ಜೂ. 1ರಂದು ಭವ್ಯ ಮೆರವಣಿಗೆ

ಉಡುಪಿ: ಉಡುಪಿ ಶ್ರೀಕೃಷ್ಣ ಮಠದ ಗರ್ಭಗುಡಿಯ ಗೋಪುರಕ್ಕೆ ಸ್ವರ್ಣಕವಚ ಹೊದಿಸಿ
ಸಮರ್ಪಿಸುವ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಜೂನ್‌ 1ರಂದು ನಗರದ ಜೋಡುಕಟ್ಟೆಯಿಂದ
ಶ್ರೀಕೃಷ್ಣ ಮಠದವರೆಗೆ ಬಹೃತ್‌ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿದೆ.
ಅಂದು ಮಧ್ಯಾಹ್ನ 3 ಗಂಟೆಗೆ ಮೆರವಣಿಗೆ ಆರಂಭವಾಗಲಿದೆ. ಮೆರವಣಿಗೆಯ ಪ್ರಮುಖ
ಆಕರ್ಷಣೆಯಾಗಿ ಶ್ರೀಕೃಷ್ಣಮಠದ ಸೇವಾರ್ಥಿಗಳಿಗೆ ಪ್ರಸಾದ ರೂಪದಲ್ಲಿ ನೀಡಲಾಗುವ ೧೦೦೮
ರಜತಕಲಶಗಳನ್ನು ಆಕರ್ಷಕವಾಗಿ ಜೋಡಿಸಿಟ್ಟು, ಮೆರವಣಿಗೆ ನಡೆಸಲಾಗುವುದು. ಅಲ್ಲದೆ,
ಸ್ಟಾರ್‌ಪ್ಲಸ್‌ ವಾಹಿನಿಯಲ್ಲಿ ಪ್ರಸಾರವಾಗುವ ಮಹಾಭಾರತ ಧಾರವಾಹಿಯ ಕೃಷ್ಣಾರ್ಜುನರ
ಪಾತ್ರಧಾರಿಗಳಾದ ಸೌರಭ್‌ ಜೈನ್‌ ಮತ್ತು ಶಾಹಿರ್‌ ಶೇಖ್‌ ಭಾಗಹಿಸಲಿದ್ದು, ಚಾರಿತ್ರಿಕ
ಪೋಷಾಕಿನಲ್ಲಿ ಕಾಣಿಸಿಕೊಳ್ಳುವ ಅವರು ಮೆರವಣಿಗೆಯ ವೈಭವಕ್ಕೆ ಮತ್ತಷ್ಟು ಮೆರಗು
ನೀಡಲಿದ್ದಾರೆ.
೧೫೦ ಭಜನಾ ತಂಡಗಳಿಂದ ಭಜನೆ, ೫೦ ಜನರಿಂದ ಡೋಲುವಾದನ ಮತ್ತು ಸ್ಥಳೀಯ ಸಾಂಸ್ಕೃತಿಕ ತಂಡಗಳಿಂದ ವಿವಿಧ ಕಲಾಪ್ರಕಾರಗಳ ನೃತ್ಯ ಜರುಗಲಿದೆ. ಪೇಜಾವರ ಮಠದ ವಿಶ್ವೇಶ್ವತೀರ್ಥ ಶ್ರೀಪಾದರು ಹಾಗೂ ಉತ್ತರಾದಿ ಮಠದ ಸತ್ಯಾತ್ಮತೀರ್ಥ ಸ್ವಾಮೀಜಿ ಮೆರವಣಿಗೆಗೆ ಚಾಲನೆ ನೀಡುವರು.  ಅಂಬಲಪಾಡಿ ಜಿ. ಶಂಕರ್‌ ಫ್ಯಾಮಿಲಿ ಟ್ರಸ್ಟ್‌ನ ಪ್ರವರ್ತಕ ಜಿ. ಶಂಕರ್‌, ಸಾಯಿರಾಧ ಸಮೂಹ ಸಂಸ್ಥೆಯ ಆಡಳಿತ ನಿರ್ದೇಶಕ ಮನೋಹರ್‌ ಶೆಟ್ಟಿ, ಉದ್ಯಮಿ ಭುವನೇಂದ್ರ ಕಿದಿಯೂರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದು ಶ್ರೀಕೃಷ್ಣ ಮುಖ್ಯಪ್ರಾಣ ಸೇವಾಸಮಿತಿ ಹಾಗೂ ಕಿದಿಯೂರು ಶ್ರೀವಿಷ್ಣುಮೂರ್ತಿ ವನದುರ್ಗ ಸೇವಾ ಸಮಿತಿ ಪ್ರಕಟಣೆಯಲ್ಲಿತಿಳಿಸಿದೆ.