ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಯೋಗ ದಿನಾಚರಣೆ

ಉಡುಪಿ:  ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಶ್ರೀ ಪಲಿಮಾರು ಮಠದ ಆಶ್ರಯದಲ್ಲಿ ಪತಂಜಲಿ ಯೋಗ ಸಮಿತಿ (ಹರಿದ್ವಾರ) ಉಡುಪಿ ಜಿಲ್ಲೆ, ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಕರ್ನಾಟಕ (ರಾಜಾಂಗಣ), ಶ್ರೀ ವಿವೇಕಾನಂದ ಜಿಲ್ಲಾ ಯೋಗ ಸ್ವಾಸ್ಥ್ಯ ಕೇಂದ್ರ ಉಡುಪಿ, ಸ್ವಾಮಿ ವಿವೇಕಾನಂದ ಯೋಗ ವಿಜ್ಞಾನ ಕೇಂದ್ರ ಉಡುಪಿ, ಸಿದ್ಧ ಸಮಾಧಿಯೋಗ ಉಡುಪಿ, ಶ್ರೀ ಕೃಷ್ಣ ಯೋಗ ಕೇಂದ್ರ ಬ್ರಹ್ಮಗಿರಿ ಇವರು ಆಯೋಜಿಸಿರುವ 5 ನೇ ಅಂತರಾಷ್ಟ್ರೀಯ  ಯೋಗ ದಿನಾಚರಣೆ ಕಾರ್ಯಕ್ರಮ ಶುಕ್ರವಾರ ಜರಗಿತು.

 ಪರ್ಯಾಯ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು  ಮಾತನಾಡಿ,  ಏಕಾದಶಿಯಂತಹ ಹರಿದಿನಗಳಲ್ಲಿ ಆಹಾರವನ್ನಾದರೂ ಬಿಡಬಹುದು, ಯೋಗವನ್ನು ಬಿಟ್ಟಂತಹ ದಿನ ನಮ್ಮ ಬದುಕಿನಲ್ಲಿ ಬಾರದಿರಲಿ. ಯೋಗಾಸನವು  ನಮ್ಮ ದಿನಚರಿಯ ಒಂದು ಭಾಗವಾಗಿರಲಿ. ಪತಂಜಲಿ ಸಂಸ್ಥೆಯವರು ಹರಿದ್ವಾರದಲ್ಲಿ ಯೋಗಕೇಂದ್ರವನ್ನು ಸ್ಥಾಪಿಸಿ ವಿಶ್ವದಲ್ಲಿ ಯೋಗವನ್ನು ಪಸರಿಸಿ ಇಂದು ವಿಶ್ವ ಯೋಗ ದಿನಾಚರಣೆಯನ್ನು ಆಚರಿಸುತ್ತಿರುವುದು ಭಾರತೀಯರಿಗೆ ಹೆಮ್ಮೆಯ ಸಂಗತಿಯಾಗಿದೆ. ಇಂದು ರಾಜಾಂಗಣದಲ್ಲಿಯೂ ಯೋಗ ದಿನವನ್ನು ಹಬ್ಬದ ವಾತಾವರಣದಲ್ಲಿ ಸುಂದರವಾಗಿ ಆಚರಿಸಿದ್ದೀರಿ ನಿಮಗೆಲ್ಲ ಶ್ರೀ ಕೃಷ್ಣ ಮುಖ್ಯಪ್ರಾಣ ದೇವರ ಅನುಗ್ರಹವಿರಲಿ ಎಂದರು.