ಶ್ರೀಕೃಷ್ಣಮಠದಲ್ಲಿ ಕಲಾವಿದರ ಸಮಾವೇಶ

ಉಡುಪಿ: ಶ್ರೀಕೃಷ್ಣಮಠ, ಪರ್ಯಾಯ ಶ್ರೀ ಪಲಿಮಾರು ಮಠದ ಆಶ್ರಯದಲ್ಲಿ ಯಕ್ಷಗಾನ ಕಲಾರಂಗ (ರಿ.) ಉಡುಪಿ ಇವರ ವತಿಯಿಂದ ಯಕ್ಷಗಾನ ಕಲಾವಿದರ ಸಮಾವೇಶ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಶನಿವಾರ ಸಂಪನ್ನಗೊಂಡಿತು.

ಶ್ರೀಕೃಷ್ಣನಿಗೆ ಚಿನ್ನದ ಗೋಪುರ ಸಮರ್ಪಣೆಯ ಸಂದರ್ಭದಲ್ಲಿ ನಡೆದ ಕಾರ್ಯಕ್ರಮ ‘ಯಕ್ಷಗೋಪುರ’ವಾಗಿ ದಿನಪೂರ್ತಿ ನಡೆಯಿತು. ಬೆಳಗ್ಗೆ ಪೂಜ್ಯ ಪಲಿಮಾರು ಮಠಾಧೀಶರಾದ ಶ್ರೀ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು, ಶ್ರೀಮಠದ ಕಿರಿಯ ಯತಿಗಳಾದ ಶ್ರೀ ಶ್ರೀ ವಿದ್ಯಾರಾಜೇಶ್ವರತೀರ್ಥ ಶ್ರೀಪಾದರು ಹಾಗೂ ಸುಬ್ರಹ್ಮಣ್ಯ ಮಠದ ಶ್ರೀ ಶ್ರೀ ವಿದ್ಯಾಪ್ರಸನ್ನತೀರ್ಥ ಶ್ರೀಪಾದರು ಕಾರ್ಯಕ್ರಮ ಉದ್ಘಾಟಿಸಿದರು.
 ಯಕ್ಷಗಾನ ಅಕಾಡೆಮಿಯ ಅಧ್ಯಕ್ಷ ಪ್ರೊ. ಎಂ.ಎ ಹೆಗಡೆ ಅಧ್ಯಕ್ಷತೆ ವಹಿಸಿದ್ದರು. ನಾಡೋಜ ಡಾ. ಜಿ. ಶಂಕರ್ಕ, ಕಲಾವಿದರಿಗೆ ತಲಾ ೫ ಸಾವಿರ ರೂಪಾಯಿ ಮೊತ್ತದ ಆರೋಗ್ಯ ನಿಧಿ ಹಸ್ತಾಂತರಿಸಿದರು. ಯಕ್ಷಗಾನ ವಿದ್ವಾಂಸರಾದ ಡಾ. ಎಂ. ಪ್ರಭಾಕರ ಜೋಶಿ, ಡಾ. ಪ್ರಭಾಕರ ಶಿಶಿಲ, ಆನಂದ ಸಿ. ಕುಂದರ್ ಭಾಗವಹಿಸಿದ್ದರು. ಆರು ತಿಂಗಳ ಈಚೆ ಅಗಲಿದ ಹನ್ನೆರಡು ಕಲಾವಿದರ ಕುಟುಂಬಕ್ಕೆ ಸಾಂತ್ವನ ನಿಧಿ ಸಮರ್ಪಿಸಲಾಯಿತು. ಏಳು ಕಲಾವಿದರಿಗೆ ಗೃಹ ನಿರ್ಮಾಣದ ಉಡುಗೊರೆ ವಿತರಿಸಲಾಯಿತು.

ಸಂಸ್ಥೆಯ ಅಧ್ಯಕ್ಷ ಕೆ. ಗಣೇಶ್ ರಾವ್ ಸ್ವಾಗತಿಸಿದರು. ಉಪಾಧ್ಯಕ್ಷರಾದ ಎಂ. ಗಂಗಾಧರ ರಾವ್, ಎಸ್.ವಿ ಭಟ್ ಉಪಸ್ಥಿತರಿದ್ದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಕಾರ್ಯಕ್ರಮ ನಿರೂಪಿಸಿದರು.