ಉಡುಪಿ: ಕನಕದಾಸರು ದೇವರು ಸಮಾಜಕ್ಕೆ ಕೊಟ್ಟಿರುವ ಸಂಪತ್ತು. ಅವರು ಸಮಾಜಕ್ಕೆ ನೀಡಿರುವ ಸಾಹಿತ್ಯ, ಜೀವನ, ಪರಂಪರೆ ಎಲ್ಲವೂ ಅಜಾರಾಮರವಾಗಿದೆ ಎಂದು ಪರ್ಯಾಯಪಲಿಮಾರು ಮಠದ ವಿದ್ಯಾಧೀಶ ಸ್ವಾಮೀಜಿ ಹೇಳಿದರು.
ಭಕ್ತ ಕನಕದಾಸರ 532ನೇ ಜಯಂತಿ ಮಹೋತ್ಸವದ ಪ್ರಯುಕ್ತ ಬೆಂಗಳೂರಿನ ಕನಕ ಸದ್ಭಾವನಾ ಜ್ಯೋತಿ ರಥಯಾತ್ರೆ ಸಮಿತಿ ಹಾಗೂ ಉಡುಪಿ ಜಿಲ್ಲಾ ಕನಕದಾಸ ಸಮಾಜ ಸೇವಾ ಸಂಘದ ಸಹಯೋಗದಲ್ಲಿ ಕೃಷ್ಣಮಠದ ರಾಜಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಕನಕ ಸದ್ಭಾವನಾ ಜ್ಯೋತಿ ರಥಯಾತ್ರೆಯ ಸಭಾಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕನಕದಾಸರು ಕಾಣದ ಬೆಳಕನ್ನು ಪ್ರಕಾಶಿಸುವಂತೆ ಮಾಡಿದ ಮಹಾನ್ ವ್ಯಕ್ತಿ. ಅವರದ್ದು ಅದ್ಭುತವಾದ ಭಕ್ತಿ. ಅದಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಹಾಗಾಗಿ ಕನಕದಾಸರ ಜಯಂತಿ ಇಡೀ ಜಗತ್ತಿಗೆ ದೀಪೋತ್ಸವ ಎಂದರು.
ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ, ಉಡುಪಿಯಲ್ಲಿ 1967ರಲ್ಲಿ ಅಂದಿನ ಉಡುಪಿ ಶಾಸಕರಾಗಿದ್ದ ಮಲ್ಪೆ ಮಧ್ವರಾಜ್‌ರು ಕನಕ ಮಂದಿರ ನಿರ್ಮಾಣ ಮಾಡಿದ್ದರು. ಕನಕದಾಸರ ಗುಡಿಯನ್ನು ವೈಭವದಿಂದ ಜೀರ್ಣೋದ್ಧಾರ ಮಾಡಬೇಕು. ಅದಕ್ಕೆ ಎಲ್ಲ ರೀತಿಯ ಸಹಕಾರ ನೀಡಲು ಬದ್ಧನಾಗಿದ್ದೇನೆ ಎಂದರು.
ಉಡುಪಿ ಶಾಸಕ ರಘುಪತಿ ಭಟ್ ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರಿನ ಉಮಾಶಂಕರ್ ಸ್ವಾಮೀಜಿ, ಸಾಹಿತಿಗಳಾದ ಪ್ರೊ. ಕೃಷ್ಣಮೂರ್ತಿ, ಪ್ರೊ.ಚೊಕ್ಕನಳ್ಳಿ ಮಹೇಶ್, ಸಮಿತಿಯ ರಾಜ್ಯಾಧ್ಯಕ್ಷ ಓಂ. ಕೃಷ್ಣಮೂರ್ತಿ, ಅಲೆವೂರು ಗ್ರಾಪಂ ಅಧ್ಯಕ್ಷ ಶ್ರೀಕಾಂತ್ ನಾಯಕ್, ಜಿಲ್ಲಾ ಕನಕದಾಸ ಸಮಾಜ ಸೇವಾ ಸಂಘದ ಅಧ್ಯಕ್ಷ ಹನುಮಂತ ಐಹೊಳೆ, ಮಾಜಿ ಅಧ್ಯಕ್ಷ ಹನುಮಂತ ಎಸ್. ಡೊಳ್ಳಿನ ಮೊದಲಾದವರು ಉಪಸ್ಥಿತರಿದ್ದರು. ಜಿಲ್ಲಾ ಕನಕದಾಸ ಸಮಾಜ ಸೇವಾ ಸಂಘದ ಗೌರವಾಧ್ಯಕ್ಷ ಮೇಟಿ ಮುದಿಯಪ್ಪ ಸ್ವಾಗತಿಸಿದರು