ಸಿಗಡಿ ಕೃಷಿಭೂಮಿಗೆ ಉಪ್ಪುನೀರು:ಸ್ಥಳಕ್ಕೆ ಭೇಟಿ ನೀಡಿ ರೈತರ ಸಂಕಷ್ಟ ಆಲಿಸಿದ ಡಾ. ಮಧುಕೇಶ್ವರ್

ಕುಂದಾಪುರ: ಸಿಗಡಿ ಕೃಷಿಯಿಂದಾಗಿ ಹರೆಗೋಡು ಕೃಷಿಭೂಮಿಗೆ ಉಪ್ಪು ನೀರು ನುಗ್ಗುತ್ತಿರುವ ವಿಷಯದ ತನಿಖಗೆ  ಸ್ಥಳಕ್ಕೆ ಕುಂದಾಪುರ ಸಹಾಯಕ ಆಯುಕ್ತ ಡಾ. ಮಧುಕೇಶ್ವರ್ ಭೇಟಿ ನೀಡಿ ರೈತರ ಸಂಕಷ್ಟಗಳನ್ನು ಆಲಿಸಿದರು.

ಮಂಗಳವಾರ ಮಧ್ಯಾಹ್ನ ಹರೆಗೋಡುವಿಗೆ ಭೇಟಿ ನೀಡಿದ ಅವರು ಕೃಷಿಗದ್ದೆ ಹಾಗೂ ಸಿಗಡಿ ಕೆರೆಗಳನ್ನು ಪರಿಶೀಲನೆ ನಡೆಸಿದರು. ಈ ವೇಳೆಯಲ್ಲಿ ಕೃಷಿಕರು ಅವೈಜ್ಙಾನಿಕ ಸಿಗಡಿ ಕೃಷಿಯ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

  

ನಮ್ಮ ಪಾಡಿಗೆ ಬದುಕಲು ಬಿಡಿ:

ಸಿಗಡಿ ಕೃಷಿ ನಮ್ಮ ಜೀವನದ ದಾರಿಯನ್ನೇ ಕಿತ್ತುಕೊಂಡಿದೆ. ಸಮೃದ್ಧ ಕೃಷಿ ಭೂಮಿ ಬರಡಾಗಿದ್ದು, ಕುಡಿಯುವ ನೀರು ಕೂಡ ಉಪ್ಪಾಗಿದೆ. ನಮ್ಮನ್ನು ನಮ್ಮ ಪಾಡಿಗೆ ಬದುಕಲು ಬಿಡಿ. ಸಿಗಡಿ ಕೃಷಿ ಧಾಂಗುಡಿಗೆ ಮುಕ್ತಿ ಕೊಡಿಸಿ ಎಂದು ಕೃಷಿಕರು ಸಹಾಯಕ ಆಯುಕ್ತರಲ್ಲಿ ಮನವಿ ಮಾಡಿಕೊಂಡರು.

ಕಟ್‌ಬೇಲ್ತೂರು ಗ್ರಾಮ ಹರೆಗೋಡು ಪರಿಪರಿಸರದಲ್ಲಿ ಸಿಗಡಿ ಕೃಷಿಗೂ ಮುನ್ನಾ ಭತ್ತ, ಧವಸ ಧಾನ್ಯಗಳನ್ನು ಬೆಳೆಸುತ್ತಾ ಬದುಕು ಕಟ್ಟಿಕೊಂಡಿದ್ದೆವು.  ಈ ಭಾಗದಲ್ಲಿ ಯಾವತ್ತು ಸಿಗಡಿ ಕೃಷಿ ಆರಂಭವಾಯಿತೋ ಅಂದಿನಿಂದ ಇಂದಿನವರಗೆ ಹಂತಹಂತವಾಗಿ ನಮ್ಮ ಭತ್ತದ ಭೂಮಿ ಬರಡಾಗುತ್ತಾ ಬರುತ್ತಿದೆ. ಪ್ರಸಕ್ತ ಗದ್ದೆಯಲ್ಲಿ ಭತ್ತ ನಾಟಿ ಮಾಡಲಾಗದೆ ನೂರಾರು ಎಕ್ರೆ ಭೂಮಿ ಹಡಿಲು ಬಿಡಬೇಕಾಗಿದೆ. ಇನ್ನು ಕಷ್ಟಪಟ್ಟು ನಾಟಿ ಮಾಡಿದ ಗದ್ದೆಯಲ್ಲಿ ಭತ್ತದ ನೇಜಿ ಕರಕಲಾಗುತ್ತಿದೆ. ಕೃಷಿಯೇ ಇಲ್ಲದ ಮೇಲೆ ನಾವು ಬದುಕುವುದಾರೂ ಹೇಗೆ ಎಂದು ಅಧಿಕಾರಿಗಳ ಮುಂದೆ ಕೃಷಿಕರು ತಮ್ಮ ಅಸಹಾಯಕತೆ ತೋಡಿಕೊಂಡರು.

ಈ ವೇಳೆಯಲ್ಲಿ ಪತ್ರಕರ್ತರ ಜೊತೆ ಮಾತನಾಡಿದ ಸಹಾಯಕ ಆಯುಕ್ತ ಡಾ. ಮಧುಕೇಶ್ವರ್, ಸಿಗಡಿ ಕೃಷಿ ನಿಯಮ ಪಾಲನೆ ಮಾಡುತ್ತಿಲ್ಲ ಎನ್ನೋದು ಮೇಲ್ನೋಟಕ್ಕೆ ಕಂಡುಬರುತ್ತಿದ್ದು, ಉಪ್ಪು ನೀರು ನುಗ್ಗುವುದೇ ಕೃಷಿ ಭೂಮಿ ನಾಶವಾಗಲು ಕಾರಣವಾಗಿದೆ. ಸಿಗಡಿ ಕೃಷಿ ನವೀಕರಣ ಸಂದರ್ಭದಲ್ಲಿ ಸಿಗಡಿ ಕೃಷಿ ಸಮಸ್ಯೆ ನಿಯಮ ಉಲ್ಲಂಘನೆ ಬಗ್ಗೆ ಡಿಸಿ ಗಮನಕ್ಕೆ ತರುತ್ತೇನೆ. ನಿಯಮಾನುಸಾರ ಯಾರು ಸಿಗಡಿ ಕೃಷಿ ಮಾಡುವುದಿಲ್ಲವೋ ಅಂತವರ ಪರಿವಾನಿಗೆ ನವೀಕರಿಸುವುದಿಲ್ಲ ಎಂದರು.

ಹರೆಗೋಡು ಪರಿಸರದಲ್ಲಿ ಕಾಂಡ್ಲಾ ವನ ಕಡಿದು ಸಿಗಡಿ ಕೃಷಿ ಮಾಡಿಲಾಗಿದ್ದು, ಜಾಗ ವಶಕ್ಕೆ ಪಡೆದು ಕಾಂಡ್ಲಾ ಬೆಳೆಸುವ ಸಲುವಾಗಿ ಅರಣ್ಯ ಇಲಾಖೆಗೆ ಹಸ್ತಾಂತರಿಸಲಾಗುತ್ತದೆ. ಸರ್ಕಾರಿ ಜಾಗ ಹಾಗೂ ಕುಂದಾಪುರ ತಾಲೂಕಿನ ಎಲ್ಲಾ ಸಿಗಡಿ ಕೃಷಿ ನೀಲಿ ಚಿತ್ರ ತಯಾರಿಸಿ, ಮಾಹಿತಿ ಪಡೆದು ನಿಯಮ ಉಲ್ಲಂಘನೆ ಬಗ್ಗೆ ಮಾಹಿತಿ ಪಡೆಯಲಾಗುತ್ತದೆ. ಸಿಗಡಿ ಕೃಷಿ ಆರ್ಥಿಕ ಬೆಳೆಯಾಗಿದ್ದು, ಅದರ ನಿಯಮ ಪಾಲನೆ ಕೂಡಾ ಅಷ್ಟೇ ಮುಖ್ಯ. ಪರಿಸರ, ಸೂಕ್ಷ್ಮ ಜೀವಿಗಳ ಅವಸಾನ ಮಾಡುವ ಸಿಗಡಿ ಕೃಷಿಗೆ ಪರವಾನಿಗೆ ನೀಡುವುದಿಲ್ಲ ಎಂದು ಅವರು ಇದೇ ವೇಳೆಯಲ್ಲಿ ಎಚ್ಚರಿಸಿದರು.


ಈ ವೇಳೆಯಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯೆ ಶೋಭಾ ಪುತ್ರನ್, ಕಟ್‌ಬೇಲ್ತೂರು ಗ್ರಾಪಂ ಸದಸ್ಯರಾದ ಶೇಖರ ಬೆಳೆಗಾರ, ಚಂದ್ರಶೇಖರ ಭಟ್, ಮೀನುಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ಪುರುಷೋತ್ತಮ, ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ರೂಪ ಜೆ., ಕಟ್‌ಬೇಲ್ತೂರು ಪಿಡಿಒ ಅಶ್ವಿನಿ, ವಿಎ ಸೋಮಯ್ಯ, ಊರಿನ ಪ್ರಮುಖರಾದ ವಿಸ್ವನಾಥ ಗಾಣಿಗ, ಶ್ರೀನಿವಾಸ ಗಾಣಿಗ ಮುಂತಾದವರು ಇದ್ದರು.