ಕ್ರಿಮಿನಾಶಕ ಸೇವಿಸಿದ್ದ ರೈತ ಗುಂಡು ನಾಯ್ಕ್ ಮೃತ

ಉಡುಪಿ: ಪೆರ್ಡೂರು ಮೂಡುಜೆಡ್ಡು ಎಂಬಲ್ಲಿ ಫೆ. 28ರಂದು ಬೆಳೆಗೆ ಹಾಕುವ ಕೀಟನಾಶಕ ಸೇವಿಸಿದ್ದ  ರೈತನೋರ್ವ ಚಿಕಿತ್ಸೆ ಫಲಕಾರಿಯಾಗದೆ ಇಂದು‌ ಮಧ್ಯಾಹ್ನ ಅಜ್ಜರಕಾಡಿನ ಸರ್ಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಆತ್ಮಹತ್ಯೆ ಮಾಡಿಕೊಂಡ ರೈತನನ್ನು ಮೂಡುಜೆಡ್ಡು ನಿವಾಸಿ ಗುಂಡು ನಾಯ್ಕ್ (58) ಎಂದು ಗುರುತಿಸಲಾಗಿದೆ. ರೈತ ಗುಂಡು ನಾಯ್ಕ್ ಕೃಷಿ ಬೆಳೆಗಾಗಿ ಸಾಲ ಮಾಡಿಕೊಂಡಿದ್ದು, ಅದನ್ನು ತೀರಿಸಲಾಗದೆ ಸಾಲದ ಸುಳಿಗೆ ಸಿಲುಕಿದ್ದರು. ಇದೇ ಕೊರಗಿನಿಂದ ಫೆ. 28ರಂದು ಮನೆಯಲ್ಲಿ ಕ್ರಿಮಿನಾಶಕ ಸೇವಿಸಿದ್ದರು. ಇದರಿಂದ ಅಸ್ವಸ್ಥರಾಗಿದ್ದ ಗುಂಡುರನ್ನು ಮನೆಯವರು ಅಜ್ಜರಕಾಡಿನ ಸರ್ಕಾರಿ ಆಸ್ಪತ್ರೆ ಗೆ ದಾಖಲಿಸಿದ್ದರು. ಆದರೆ ಇಂದು ಮಧ್ಯಾಹ್ನದ ಗುಂಡು ನಾಯ್ಕ್ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.
ಪದೇ ಪದೇ ನಾನು ಸಾಯುತ್ತೇನೆ ಎನ್ನುತ್ತಿದ್ದ ಗುಂಡು:
ಕೃಷಿಕನಾಗಿದ್ದ ಗುಂಡು ನಾಯ್ಕ್ ಕೃಷಿಗಾಗಿ ಬ್ಯಾಂಕ್ ನಲ್ಲಿ ಸಾಲ ಮಾಡಿದ್ದರು. ಆದರೆ ಕೃಷಿಯಲ್ಲಿ ನಿರೀಕ್ಷಿತ ಆದಾಯ ಬಾರದಿರುವ ಹಿನ್ನೆಲೆಯಲ್ಲಿ ತೀವ್ರ ಚಿಂತೆಗೆ ಒಳಗಾಗಿದ್ದರು. ಇದೇ ಕೊರಗಿನಲ್ಲಿ ನಾನು ಬದುಕುವುದಿಲ್ಲ, ಸಾಯುತ್ತೇನೆಂದು ಪದೇ ಪದೇ ಹೇಳುತ್ತಿದ್ದರು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.‌ ಕುಟುಂಬದವರು ನೀಡಿದ ದೂರಿನಂತೆ ಹಿರಿಯಡಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.