KPSC Scam ಸಿಸಿಟಿವಿ ಇಲ್ಲದ ಕೊಠಡಿಯಲ್ಲಿ ನಡೆಯುತ್ತಿತ್ತು ಅಭ್ಯರ್ಥಿಗಳ ಸಂದರ್ಶನ

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ (KPSC) ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ (ED) ತನಿಖೆಯಲ್ಲಿ ಮತ್ತಷ್ಟು ಸ್ಫೋಟಕ ಅಂಶಗಳು ಬಯಲಾಗಿವೆ. ಕಳೆದ ಸೆಪ್ಟೆಂಬರ್ 2ರಂದು ಪಬ್ಲಿಕ್ ಟಿವಿ ಬ್ರೇಕ್ ಮಾಡಿದ್ದ ‘ಸ್ಟ್ರಾಂಗ್ ರೂಂಗೆ ಸಿಸಿಟಿವಿ ಕಣ್ಗಾವಲಿಲ್ಲ’ ಎಂಬ ವರದಿಗೆ ಪೂರಕವಾದ ಅಂಶಗಳು ಇದೀಗ ಇಡಿ ಸಲ್ಲಿಸಿರುವ ಚಾರ್ಜ್‌ಶೀಟ್‌ನಲ್ಲೂ ಉಲ್ಲೇಖವಾಗಿವೆ.

ಕೆಪಿಎಸ್‌ಸಿ ನೇಮಕಾತಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಪಾಡಬೇಕಾದ ಅಧಿಕಾರಿಗಳು, ಅಕ್ರಮ ಎಸಗುವ ಉದ್ದೇಶದಿಂದಲೇ ಸಿಸಿಟಿವಿ ಕ್ಯಾಮೆರಾ ಇಲ್ಲದ ಸ್ಥಳಗಳಲ್ಲಿ ಅಭ್ಯರ್ಥಿಗಳ ಸಂದರ್ಶನ (Interview) ನಡೆಸಿದ್ದಾರೆ ಎಂಬ ಗಂಭೀರ ಸಂಗತಿ ಇಡಿ ತನಿಖೆಯಿಂದ ಬೆಳಕಿಗೆ ಬಂದಿದೆ.

ಪಶುವೈದ್ಯಾಧಿಕಾರಿ, ಕಿರಿಯ ಎಂಜಿನಿಯರ್ (JE) ಸೇರಿದಂತೆ ಹಲವು ಪ್ರಮುಖ ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ ಮೆರಿಟ್ ಆಧಾರದ ಮೇಲೆ ತೇರ್ಗಡೆಯಾದ ಅಭ್ಯರ್ಥಿಗಳ ಖುದ್ದು ಸಂದರ್ಶನದ ವೇಳೆಯೂ ಸಿಸಿಟಿವಿ ಕಣ್ಗಾವಲು ಇರಲಿಲ್ಲ. ಬೇಕೆಂದೇ ಸಿಸಿಟಿವಿ ಇಲ್ಲದ ಕೊಠಡಿಗಳನ್ನು ಆಯ್ಕೆ ಮಾಡಿಕೊಂಡು ಸಂದರ್ಶನ ಪ್ರಕ್ರಿಯೆ ನಡೆಸುವ ಮೂಲಕ ಅಕ್ರಮಕ್ಕೆ ದಾರಿ ಮಾಡಿಕೊಡಲಾಗಿತ್ತು ಎನ್ನಲಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ಎದುರಿಸಿರುವ ಕೆಪಿಎಸ್‌ಸಿ ಮಾಜಿ ಪರೀಕ್ಷಾ ನಿಯಂತ್ರಕ ಗ್ಯಾನೇಂದ್ರ ಕುಮಾರ್ ಅವರು ಇಡಿ ಅಧಿಕಾರಿಗಳ ಮುಂದೆ ಮಹತ್ವದ ಹೇಳಿಕೆ ನೀಡಿದ್ದಾರೆ.

ಸಂದರ್ಶನ ಕೊಠಡಿ ಹಾಗೂ ಸ್ಟ್ರಾಂಗ್ ರೂಂಗಳಲ್ಲಿ ಸಿಸಿಟಿವಿ ಅಳವಡಿಸದಿರುವ ಕುರಿತು ಇಡಿ ಅಧಿಕಾರಿಗಳು ಪ್ರಶ್ನಿಸಿದಾಗ, “ಸಿಸಿಟಿವಿ ಬಗ್ಗೆ ನನಗೆ ಏನೂ ಗೊತ್ತಿಲ್ಲ. ಆ ವಿಚಾರವಾಗಿ ಕೆಪಿಎಸ್‌ಸಿ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳನ್ನು ಕೇಳಿ” ಎಂದು ಗ್ಯಾನೇಂದ್ರ ಕುಮಾರ್ ಉತ್ತರಿಸಿದ್ದಾರೆ.

ಪಬ್ಲಿಕ್ ಟಿವಿ ಈ ಹಿಂದೆ ಬಯಲಿಗೆಳೆದಿದ್ದ ಸಿಸಿಟಿವಿ ನಿರ್ಲಕ್ಷ್ಯದ ವರದಿಯನ್ನು ಇಡಿ ತನಿಖೆ ದೃಢಪಡಿಸಿದ್ದು, ಗ್ಯಾನೇಂದ್ರ ಕುಮಾರ್ ಅವರ ಹೇಳಿಕೆಯು ಆಯೋಗದ ಉನ್ನತ ಅಧಿಕಾರಿಗಳತ್ತ ಬೊಟ್ಟು ಮಾಡುವಂತಿದೆ.