ಕೆಪಿಸಿಸಿ ನಿಯೋಗದಿಂದ ಉಡುಪಿ ಜಿಲ್ಲೆಯ ವಿವಿಧ ಧಾರ್ಮಿಕ ನಾಯಕರ ಭೇಟಿ

ಉಡುಪಿ: ಕರಾವಳಿ ಭಾಗದಲ್ಲಿ ಇತ್ತೀಚೆಗೆ ನಡೆದಿರುವ ಹಲವು ಅಹಿತಕರ ಘಟನೆಗಳ ಹಿನ್ನೆಲೆಯಲ್ಲಿ ಪರಿಸ್ಥಿತಿಯ ಕೂಲಂಕಷ ಅಧ್ಯಯನ ನಡೆಸಿ, ಇವುಗಳಿಗೆ ಕಡಿವಾಣ ಹಾಕಲು ಅನುಸರಿಸಬೇಕಾದ ಕ್ರಮಗಳ ಕುರಿತು ಶಿಫಾರಸ್ಸು ಮಾಡಿ ವರದಿ ನೀಡಲು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯಿಂದ ನಿಯೋಜಿತವಾದ ಪಕ್ಷದ ಹಿರಿಯ ನಾಯಕರ ಕೆಪಿಸಿಸಿ ನಿಯೋಗ ಮಂಗಳವಾರ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್‌ನ ಹಿರಿಯ ಅಧಿಕಾರಿಗಳು, ಪರ್ಯಾಯ ಪುತ್ತಿಗೆ ಹಾಗೂ ಪೇಜಾವರ ಶ್ರೀಗಳು ಸೇರಿದಂತೆ ವಿವಿಧ ಧರ್ಮಗಳ ಮುಖಂಡರು, ವಿವಿಧ ಸಂಘಟನೆಗಳ ನಾಯಕರನ್ನು ಭೇಟಿ ಮಾಡಿ ಚರ್ಚಿಸಿತು.

ಎಐಸಿಸಿ ಪ್ರಧಾನ ಕಾರ್ಯದರ್ಶಿಗಳೂ, ರಾಜ್ಯಸಭಾ ಸದಸ್ಯರೂ ಆಗಿರುವ ಸೈಯದ್ ನಾಸೀರ್ ಹುಸೇನ್ ನೇತೃತ್ವದ ಈ ತಂಡದಲ್ಲಿ ವಿದಾನಪರಿಷತ್‌ನ ಮಾಜಿ ಸಭಾಪತಿ ಹಾಗೂ ಕೆಪಿಸಿಸಿ ಉಪಾಧ್ಯಕ್ಷ ಎ.ಆರ್. ಸುದರ್ಶನ್, ಕೆಪಿಸಿಸಿ ಕಾರ್ಯಾಧ್ಯಕ್ಷ ಡಾ.ಮಂಜುನಾಥ ಭಂಡಾರಿ, ಮಾಜಿ ಸಚಿವರಾದ ಕೆ.ಜಯಪ್ರಕಾಶ್ ಹೆಗ್ಡೆ ಹಾಗೂ ಕಿಮ್ಮೆನೆ ರತ್ನಾಕರ್ ಉಪಸ್ಥಿತರಿದ್ದರು.

ಸೋಮವಾರ ರಾತ್ರಿ ಉಡುಪಿಗೆ ಆಗಮಿಸಿದ ನಿಯೋಗ, ಉಡುಪಿ ಶ್ರೀ ಕೃಷ್ಣಮಠಕ್ಕೆ ಭೇಟಿ ನೀಡಿ ಶ್ರೀಕೃಷ್ಣ ಮುಖ್ಯಪ್ರಾಣರ ದರ್ಶನ ಮಾಡಿದ ಬಳಿಕ ಗೀತಾ ಮಂದಿರದಲ್ಲಿ ಪರ್ಯಾಯ ಪುತ್ತಿಗೆ ಮಠದ ಶ್ರೀಸುಗು ಣೇಂದ್ರ ತೀರ್ಥ ಸ್ವಾಮೀಜಿಗಳೊಂದಿಗೆ ಮಾತುಕತೆ ನಡೆಸಿ ಕರಾವಳಿಯಲ್ಲಿ ಸೌಹಾರ್ದಮಯ ವಾತಾವ ರಣ ಮೂಡಿಸುವ ಕುರಿತು ಸುದೀರ್ಘ ಮಾತುಕತೆ ನಡೆಸಿತು.ನಿಯೋಗದ ಸದಸ್ಯರಿಗೆ ಹಲವು ಸಲಹೆ ಸೂಚನೆಗಳನ್ನು ನೀಡಿರುವುದಾಗಿ ಪುತ್ತಿಗೆಶ್ರೀಗಳು ಸಂವಾದದ ಬಳಿಕ ತಿಳಿಸಿದರು. ಸೌಹಾರ್ದ ಶಾಂತಿಯ ಸ್ಥಾಪನೆಗೆ ಏನು ಕ್ರಮಕೈಗೊಳ್ಳಬಹುದು ಎಂಬ ಬಗ್ಗೆ ಚರ್ಚೆ ಮಾಡಿದ್ದೇವೆ. ನಾನು ನನ್ನ ಅಭಿಪ್ರಾಯಗಳನ್ನು ತಿಳಿಸಿದ್ದೇನೆ ಎಂದರು.

ಪ್ರಚೋದನೆ ನೀಡುವಂತಹ ಘಟನೆಗಳು ಸಮಾಜದಲ್ಲಿ ನಿಲ್ಲಬೇಕು. ಸುಳ್ಳು ಮಾಹಿತಿ ಹಬ್ಬಿಸಿ ಜನರಿಗೆ ತಪ್ಪು ಮಾಹಿತಿ ನೀಡುವ ಕೆಲಸ ಆಗಬಾರದು. ಇಂತಹ ವಿಚಾರಗಳಿಗೆ ಕಡಿವಾಣ ಹಾಕಬೇಕು. ಕೋಮು ವಿಚಾರದ ಘಟನೆಗಳಿಗೆ ಪ್ರತ್ಯೇಕ ನ್ಯಾಯ ವಿಚಾರಣೆ ಆಗಬೇಕು. ಶೀಘ್ರ ನ್ಯಾಯ ಸಿಕ್ಕರೆ ಇಂತಹ ದುರ್ಘ ಟನೆಗಳು ನಡೆಯುವುದಿಲ್ಲ ಎಂದು ನಿಯೋಗಕ್ಕೆ ತಿಳಿಸಿರುವುದಾಗಿ ಹೇಳಿದರು.

ಎಲ್ಲಾ ಧರ್ಮೀಯರನ್ನು, ಸಮಾಜದ ಎಲ್ಲರನ್ನೂ ಸಮಾನವಾಗಿ ಕಾಣಬೇಕು. ರಾಜಕೀಯ ಮತ್ತು ಧರ್ಮ ವನ್ನು ಪ್ರತ್ಯೇಕವಾಗಿ ಕಾಣಬೇಕು. ರಾಜಕೀಯದಲ್ಲಿ ಧರ್ಮದ ವಿಚಾರಗಳು ಬರಬಾರದು. ಧರ್ಮದಲ್ಲಿ ರಾಜಕೀಯ ಹಸ್ತಕ್ಷೇಪ ಇರಬಾರದು. ಎಲ್ಲರೂ ಸೇರಿ ಸಂವಾದ ಮಾಡಿದಾಗ ಮಾತುಕತೆಯಿಂದ ಸೌಹಾರ್ದ ವಾತಾವರಣ ಉಂಟಾಗುತ್ತದೆ ಎಂದು ತಿಳಿಸಿರುವುದಾಗಿ ಪುತ್ತಿಗೆ ಶ್ರೀಗಳು ಹೇಳಿದರು.

ಮುಖ್ಯಮಂತ್ರಿಗೆ ಆಹ್ವಾನ:

ಮುಂದಿನ ತಿಂಗಳು ಉಡುಪಿ ಶ್ರೀಕೃಷ್ಣ ಮಠದಲ್ಲಿ ನಡೆಯುವ ಶ್ರೀಕೃಷ್ಣ ಜನ್ಮಾ ಷ್ಟಮಿಯ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಹ್ವಾನಿಸಿದ್ದೇನೆ. ಅವರು ಶ್ರೀಕೃಷ್ಣ ಮಠಕ್ಕೆ ಬಂದರೆ ಸಮಾಜಕ್ಕೆ ಉತ್ತಮ ಸಂದೇಶ ಹೋಗುತ್ತದೆ ಎಂದು ಹೇಳಿರುವುದಾಗಿ ಅವರು ತಿಳಿಸಿದರು.ನಿಯೋಗ ಬಳಿಕ ರಥಬೀದಿಯಲ್ಲಿರುವ ಪೇಜಾವರ ಮಠಕ್ಕೆ ಭೇಟಿ ನೀಡಿ ಶ್ರೀವಿಶ್ವಪ್ರಸನ್ನ ತೀರ್ಥರೊಂದಿಗೆ ಕರಾವಳಿಯಲ್ಲಿ ಮತ್ತೆ ಸೌಹಾರ್ದ ವಾತಾವರಣ ಮೂಡಿಸಲು ಕೈಗೊಳ್ಳಬೇಕಾದ ಕ್ರಮದ ಕುರಿತು ಚರ್ಚಿ ಸಿತು. ಈ ಸಂದರ್ಭದಲ್ಲಿ ಪೇಜಾವರ ಶ್ರೀಗಳು ಈ ಕುರಿತು ತಮ್ಮ ಅಭಿಪ್ರಾಯಗಳನ್ನು ಮುಕ್ತ ಮನಸ್ಸಿ ನಿಂದ ತಿಳಿಸಿದರು ಎಂದು ನಿಯೋಗದಲ್ಲಿದ್ದ ಸದಸ್ಯರೊಬ್ಬರು ತಿಳಿಸಿದರು.

ಉಡುಪಿ ಬಿಷಪ್ ಭೇಟಿ:

ನಿಯೋಗ ಇಂದು ಮದರ್ ಆಪ್ ಸಾರೋಸ್ ಚರ್ಚ್ ಆವರಣದಲ್ಲಿರುವ ಅವೆ ಮಾರಿಯಾ ಹಾಲ್‌ನಲ್ಲಿ ಉಡಡುಪಿ ಧರ್ಮಾಧ್ಯಕ್ಷ ಅ.ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ ಅವರ ನೇತೃತ್ವದಲ್ಲಿ ಜಿಲ್ಲೆಯ ಕ್ರೈಸ್ತ ಮುಖಂಡರೊಂದಿಗೆ ಕರಾವಳಿಯಲ್ಲಿ ಸೌಹಾರ್ದತೆಯನ್ನು ಮರು ಸ್ಥಾಪಿಸುವ ವಿಷಯದ ಕುರಿತು ಚರ್ಚಿಸಿತು.

ಬಿಷಪ್ ವಂ.ಡಾ.ಲೋಬೋ ಅವರು ಮಾತನಾಡಿ, ಪ್ರತಿ ಶಾಲಾ ಮಟ್ಟದಲ್ಲಿ ಶಾಂತಿ ಕ್ಲಬ್‌ಗಳನ್ನು ಸ್ಥಾಪಿಸಿ ವಿದ್ಯಾರ್ಥಿಗಳಿಗೆ ಸೌಹಾರ್ದತೆ ಕುರಿತು ಜಾಗೃತಿ ಮೂಡಿಸಬೇಕು. ಅದೇ ರೀತಿ ಗ್ರಾಪಂ, ತಾಪಂ ಹಾಗೂ ಜಿಪಂ ಮಟ್ಟದಲ್ಲಿ ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತ ಆಗಾಗ ಶಾಂತಿ ಸಭೆಗಳನ್ನು ಕರೆದು ಈ ಕುರಿತು ಜನರೊಂದಿಗೆ ಚರ್ಚಿಸಬೇಕು ಎಂದು ಸಲಹೆ ನೀಡಿದರು.

ಪ್ರಶಾಂತ್ ಜತ್ತನ್ನ ಮಾತನಾಡಿ, ಮುಸ್ಲಿಂ ಹಾಗೂ ಕ್ರೈಸ್ತರ ವಿರುದ್ಧ ಲವ್ ಜೆಹಾದ್, ಮತಾಂತರದಂಥ ದೂರುಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಿ ಪೊಲೀಸರು ದೂರು ದಾಖಲಿಸಿಕೊಳ್ಳಬೇಕು. ಇಲ್ಲದಿದ್ದರೆ ಅನಗತ್ಯವಾಗಿ ಸಮಾಜದ ಮೇಲೆ ಕೆಟ್ಟ ಪರಿಣಾಮ ಬೀರುತ್ತೆ ಎಂದು ವಿವರಿಸಿದರು.

ಬಳಿಕ ನಿಯೋಗ ಜಾಮಿಯಾ ಮಸೀದಿಗೆ ಭೇಟಿ ನೀಡಿ ಅಲ್ಲಿ ಮುಸ್ಲಿಂ ಸಮುದಾಯದ ಧರ್ಮಗುರುಗಳು ಹಾಗೂ ಇತರೊಂದಿಗೆ ಚರ್ಚಿಸಿತು.