ನವದೆಹಲಿ: ಕೋವಿಡ್ ಎರಡನೇ ಅಲೆ ನಿಯಂತ್ರಣಕ್ಕೆ ಬರುತ್ತಿದ್ದಂತೆ ದೇಶದಲ್ಲಿ ಈಗ ಮೂರನೇ ಅಲೆ ಭೀತಿ ಉಂಟಾಗಿದೆ.
ದೇಶದಲ್ಲಿ ಮುಂದಿನ 6 ರಿಂದ 8 ವಾರಗಳಲ್ಲಿ ಕೊರೊನಾ 3ನೇ ಅಲೆ ಕಾಣಿಸಿಕೊಳ್ಳಲಿದೆ ಎಂದು ಏಮ್ಸ್ನ ಮುಖ್ಯಸ್ಥ ಡಾ.ರಂದೀಪ್ ಗುಲೇರಿಯಾ ಎಚ್ಚರಿಕೆ ನೀಡಿದ್ದಾರೆ.
ದೇಶದಲ್ಲಿ ಕೋವಿಡ್ ಅನ್ ಲಾಕ್ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆ ಕೋವಿಡ್ ನಿಯಮಗಳನ್ನು ಪಾಲಿಸುವುದು ಕಣ್ಮರೆಯಾಗುತ್ತಿದೆ. ಮೊದಲ ಮತ್ತು ಎರಡನೇ ಅಲೆಯ ನಂತರವೂ ನಾವು ಪಾಠ ಕಲಿತಿಲ್ಲ. ಇಷ್ಟೆಲ್ಲ ಆದರೂ ಜನರು ಮತ್ತೆ ಗುಂಪು ಸೇರುತ್ತಿದ್ದಾರೆ. ಇದು ಮೂರನೇ ಅಲೆಯ ಭೀತಿಗೆ ಕಾರಣವಾಗಿದೆ ಎಂದಿದ್ದಾರೆ.
ಕೋವಿಡ್ ಮೂರನೇ ಅಲೆ 6 ರಿಂದ 8 ವಾರಗಳಲ್ಲಿ ಕಾಣಿಸಿಕೊಳ್ಳಬಹುದು. ಅಥವಾ ಇನ್ನೂ ಸ್ವಲ್ಪ ಹೆಚ್ಚು ಸಮಯ ತೆಗೆದುಕೊಳ್ಳಬಹುದು. ಇದೆಲ್ಲವೂ ನಾವು ಹೇಗೆ ಕೊರೊನಾ ನಿಮಯಗಳನ್ನ ಪಾಲಿಸುತ್ತೇವೆ ಎಂಬುದರ ಮೇಲೆ ನಿರ್ಧಾರವಾಗಲಿದೆ.
ವ್ಯಾಕ್ಸಿನೇಷನ್ ನಮ್ಮ ಬಹುಮುಖ್ಯ ಸವಾಲು. ಹೊಸ ಅಲೆ ಸಾಮಾನ್ಯವಾಗಿ 3 ತಿಂಗಳ ಅಂತರದಲ್ಲಿ ಕಾಣಿಸಿಕೊಳ್ಳುತ್ತದೆ. ಅದು ಕೆಲವು ಪ್ರಮುಖ ಅಂಶಗಳ ಆಧಾರದ ಮೇಲೆ ಸಂಭವಿಸುತ್ತದೆ. ಬಹುಶಃ ಮಿನಿ ಲಾಕ್ಡೌನ್ನಂಥ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಬಹುದು ಎಂದು ಹೇಳಿದ್ದಾರೆ.
ವ್ಯಾಕ್ಸಿನೇಷನ್ ಹಾಕಿಸಿಕೊಳ್ಳದಿದ್ದರೆ ಇದರಿಂದ ನಾವು ಹೊಡೆತ ತಿನ್ನಲಿದ್ದೇವೆ. ಹಾಟ್ಸ್ಪಾಟ್ಗಳಲ್ಲಿ ಟೆಸ್ಟಿಂಗ್, ಟ್ರ್ಯಾಕಿಂಗ್, ಮತ್ತು ಟ್ರೀಟಿಂಗ್ ಹೆಚ್ಚಿಸಬೇಕಿದೆ. ವೈರಸ್ ಮ್ಯೂಟೇಟ್ ಆಗುತ್ತಿದೆ. ನಾವು ಎಚ್ಚರವಹಿಸಬೇಕಿದೆ. ಮೊದಲ ಅಲೆಯಲ್ಲಿ ಸೋಂಕು ವೇಗವಾಗಿ ಹರಡುತ್ತಿರಲಿಲ್ಲ. ಎರಡನೇ ಅಲೆಯಲ್ಲಿ ಸೋಂಕು ವೇಗ ಪಡೆದುಕೊಂಡಿತ್ತು. ಸದ್ಯ ಡೆಲ್ಟಾ ವೇರಿಯೆಂಟ್ ಇದ್ದು, ಇದು ಮತ್ತಷ್ಟು ವೇಗವಾಗಿ ಹರಡುತ್ತಿದೆ ಎಂದು ಏಮ್ಸ್ ವೈದ್ಯ ರಂದೀಪ್ ಗುಲೇರಿಯಾ ಎಚ್ಚರಿಕೆ ನೀಡಿದ್ದಾರೆ.