ಕೋವಿಡ್ ಎರಡನೇ ಅಲೆ: ಸಭೆ, ಸಮಾರಂಭಕ್ಕೆ ನಿಷೇಧ.!

ಬೆಂಗಳೂರು: ಕೋವಿಡ್ ಎರಡನೇ ಅಲೆಯನ್ನು ತಡೆಯುವ ಉದ್ದೇಶದಿಂದ ಡಿಸೆಂಬರ್ 20ರಿಂದ ಜನವರಿ 2ರವರೆಗೆ ರಾಜ್ಯದಾದ್ಯಂತ ಎಲ್ಲ ರೀತಿಯ ಸಭೆ, ಸಮಾರಂಭಗಳಿಗೆ ನಿಷೇಧ ಹೇರುವಂತೆ ರಾಜ್ಯ ಮಟ್ಟದ ಕೋವಿಡ್ ನಿಯಂತ್ರಣ ಸಲಹಾ ಸಮಿತಿ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದೆ.

ಶುಕ್ರವಾರ ವಿಧಾನಸೌಧದಲ್ಲಿ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಈ ಬಗ್ಗೆ ಮಾಹಿತಿ ನೀಡಿದರು.
ಹೊಸ ವರ್ಷಾಚರಣೆ ಸೇರಿದಂತೆ ಎಲ್ಲ ಬಗೆಯ ಸಭೆ, ಸಮಾರಂಭ ನಿಷೇಧಕ್ಕೆ ಸಲಹಾ ಸಮಿತಿ ಶಿಫಾರಸು ಮಾಡಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೊಂದಿಗೆ ಚರ್ಚಿಸಿದ ಬಳಿಕ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

ಜನವರಿ ಅಂತ್ಯದಿಂದ ಫೆಬ್ರುವರಿಯ ಅವಧಿಯಲ್ಲಿ ಕೋವಿಡ್ ಎರಡನೇ ಅಲೆ ಬರುವ ಸಾಧ್ಯತೆ ಇದೆ. ಅದನ್ನು ನಿಯಂತ್ರಿಸಲು ರಾಜ್ಯ ಸರ್ಕಾರ ಪೂರಕ ಸಿದ್ಧತೆಗಳನ್ನು ಕೈಗೊಳ್ಳುತ್ತಿದೆ. ಜನರು ಗುಂಪು ಸೇರಿದಂತೆ ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಮದುವೆಗಳಿಗೆ ತಲಾ 100 ಜನರು, ಧಾರ್ಮಿಕ ಮತ್ತು ರಾಜಕೀಯ ಸಭೆ, ಸಮಾರಂಭಗಳಿಗೆ 200 ಜನ ಮತ್ತು ಅಂತ್ಯಕ್ರಿಯೆಗಳಲ್ಲಿ 50 ಜನರು ಮಾತ್ರ ಭಾಗವಹಿಸಲು ಅವಕಾಶ ನೀಡುವಂತೆ ಸಮಿತಿ ಶಿಫಾರಸು ಮಾಡಿದೆ. ಈ ಕುರಿತು ಶೀಘ್ರದಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.