ಉಡುಪಿ ಶಾಸಕರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲೇ ಕೋವಿಡ್ ನಿಯಮ ಉಲ್ಲಂಘನೆ: ವ್ಯಾಪಕ ಟೀಕೆ

ಉಡುಪಿ: ಜಿಲ್ಲೆಯಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಬರುತ್ತಿರುವಾಗಲೇ ಉಡುಪಿ ಶಾಸಕ ಕೆ. ರಘುಪತಿ ಭಟ್ ನೇತೃತ್ವದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಕೋವಿಡ್-19 ಲಾಕ್‌ಡೌನ್ ನಿಯಮಗಳನ್ನು ಉಲ್ಲಂಘಿಸಿರುವ ಘಟನೆ ನಡೆದಿದೆ.

ಹೌದು, ಕೇದಾರೋತ್ಥಾನ ಟ್ರಸ್ಟ್ ವತಿಯಿಂದ ಇಂದು ಕೆಮ್ಮಣ್ಣು ಗ್ರಾಪಂ ವ್ಯಾಪ್ತಿಯ ಪಡುತೋನ್ಸೆ ಯಾಳಕೆರೆ ಮನೆ ಬಳಿ 15 ಎಕರೆ ಹಡಿಲು ಕೃಷಿ ಭೂಮಿಯಲ್ಲಿ ನಾಟಿ ಕಾರ್ಯಕ್ಕೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ 200ಕ್ಕೂ ಅಧಿಕ ಮಂದಿ ಯಾವುದೇ ಸುರಕ್ಷಿತ ಅಂತರ ಕಾಪಾಡದೆ ಕೋವಿಡ್-19 ಲಾಕ್‌ಡೌನ್ ನಿಯಮಗಳನ್ನು ಉಲ್ಲಂಘಿಸಿದ್ದಾರೆ. ಅಲ್ಲದೆ, ಈ ಕಾರ್ಯಕ್ರಮದಲ್ಲಿ ಉನ್ನತಾಧಿಕಾರಿಗಳು, ಜಿಪಂ ಸಿಇಓಗಳೇ ಭಾಗವಹಿಸಿರುವುದು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಜನಸ್ತೋಮದ ಮಧ್ಯೆ ಸೋದೆ ಮಠದ ವಿಶ್ವವಲ್ಲಭ ಸ್ವಾಮೀಜಿ ಹಾಗೂ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನವೀನ್ ಭಟ್ ಅವರೊಂದಿಗೆ ಶಾಸಕ ಕೆ. ರಘುಪತಿ ಭಟ್ ಕೋಣಗಳಿಗೆ ಪೂಜೆ ಮಾಡಿ ನಾಟಿ ಕಾರ್ಯಕ್ಕೆ ಚಾಲನೆ ನೀಡಿದರು. ಬಳಿಕ ಇವರೆಲ್ಲರು ಸ್ಥಳೀಯರೊಂದಿಗೆ ಗದ್ದೆಗಳಿದು ನೇಜಿ ನೆಟ್ಟರು.

ಕೊರೊನಾ ಹರಡುವ ಭೀತಿ:
ಕೋವಿಡ್ ಎರಡನೇ ಅಲೆಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ವ್ಯಾಪಾಕವಾಗಿ ಕೊರೊನಾ ಹರಡಿದ್ದು, ಇದೀಗ ನಿಯಂತ್ರಣಕ್ಕೆ ಬರುತ್ತಿರುವಾಗಲೇ ಈ ರೀತಿ ನೂರಾರು ಜನರನ್ನು ಸೇರಿಸಿ ಕಾರ್ಯಕ್ರಮ ನಡೆಸುತ್ತಿರುವ ಬಗ್ಗೆ ಭಾರೀ ಟೀಕೆಗಳು ವ್ಯಕ್ತವಾಗಿವೆ. ಇಂತಹ ಕಾರ್ಯಕ್ರಮಗಳಿಂದ ಸ್ಥಳೀಯವಾಗಿ ಕೊರೊನಾ ಸೋಂಕು ಹಬ್ಬುವ ಆತಂಕ ಎದುರಾಗಿದೆ. ಕ್ರಮ ತೆಗೆದುಕೊಳ್ಳಬೇಕಾದ ಅಧಿಕಾರಿಗಳೇ ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿರುವುದು ವ್ಯಾಪಕ ಟೀಕೆಗೆ ಕಾರಣವಾಗಿದೆ.

ಕೃಷಿಗೆ ಯಾವುದೇ ನಿರ್ಬಂಧವಿಲ್ಲ: ಡಿಸಿ
ಲಾಕ್ ಡೌನ್ ವೇಳೆ ಕೃಷಿ ಚಟುವಟಿಕೆಗಳಿಗೆ ಯಾವುದೇ ನಿರ್ಬಂಧವಿಲ್ಲ. ಆದರೆ ಹಡಿಲು ಕೃಷಿ ಭೂಮಿ ಕಾರ್ಯಕ್ರಮಕ್ಕೆ ಚಾಲನೆ ನೀಡುವ ಸಂದರ್ಭದಲ್ಲಿ ಜನ ಸೇರಿಸಿ ಕಾರ್ಯಕ್ರಮ ನಡೆಸಲು ಅವಕಾಶ ನೀಡದಂತೆ ಶಾಸಕರಿಗೆ ತಿಳಿಸುತ್ತೇನೆ ಎಂದು ಡಿಸಿ ಜಿ. ಜಗದೀಶ್ ಹೇಳಿದ್ದಾರೆ.