ಶಿವಮೊಗ್ಗ: ಶಿವಮೊಗ್ಗದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಾಲ್ಕು ದಿನಗಳ ಕಾಲ ಸಂಪೂರ್ಣ ಕಟ್ಟುನಿಟ್ಟಿನ ಲಾಕ್ ಡೌನ್ಗೆ ಘೋಷಣೆ ಮಾಡಲಾಗಿದೆ.
ಇಂದು ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಮಾಹಿತಿ ನೀಡಿದರು. ಮೇ 13ರಿಂದ ಮೇ 16 ರವೆಗೆ ಶಿವಮೊಗ್ಗ ನಗರಕ್ಕೆ ಸೀಮಿತವಾಗಿ ಲಾಕ್ ಡೌನ್ ಮಾಡಲಾಗುತ್ತಿದೆ. ಸ್ಥಳೀಯ ಏರಿಯಾವನ್ನು ಬಿಟ್ಟು ಯಾರು ಹೊರಬರುವಂತಿಲ್ಲ . ದಿನಸಿ ಸೇರಿದಂತೆ ಏನೇ ಅಗತ್ಯ ವಸ್ತು ಬೇಕಾದರೂ ನಾಳೆಯೇ ಖರೀದಿ ಮಾಡಿಟ್ಟುಕೊಳ್ಳಿ ಎಂದು ಸೂಚಿಸಿದರು.
ಏನಿದೆ? ಏನಿಲ್ಲ?
ಗುರುವಾರದಿಂದ ಭಾನುವಾರದವರೆಗೆ ಸಂಪೂರ್ಣ ಲಾಕ್ ಡೌನ್ ಜಾರಿಯರಲಿದ್ದು, ಈ ಅವಧಿಯಲ್ಲಿ ಯಾವುದೆ ಖರೀದಿಗೆ ಅವಕಾಶ ಇಲ್ಲ. ಮೆಡಿಕಲ್ ಶಾಪ್ ಮಾತ್ರ ಓಪನ್ ಇರಲಿದೆ. ಕೈಗಾರಿಕೆಗಳು ಸಂಪೂರ್ಣ ಬಂದ್ ಆಗಲಿವೆ. ಹೋಲ್ಸೇಲ್ ದಿನಸಿ, ಗಾಂಧಿ ಬಜಾರ್ ಪೂರ್ಣವಾಗಿ ಬಂದ್ ಮಾಡಲಾಗಿದೆ. ಎಪಿಎಂಸಿಯನ್ನು ಕೂಡ ಬಂದ್ ಮಾಡಲು ನಿರ್ಧರಿಸಲಾಗಿದೆ. ಸ್ಥಳೀಯವಾಗಿ ದಿನಸಿ, ತರಕಾರಿ ಅಂಗಡಿಗಳಿರುತ್ತವೆ. ವಾಹನಗಳ ಬಳಕೆಯನ್ನೂ ಸಂಪೂರ್ಣವಾಗಿ ನಿಷೇಧಸಲಾಗಿದೆ. ಹೊಟೇಲ್ನಲ್ಲಿ ಪಾರ್ಸಲ್ಗೆ ಮಾತ್ರ ಅನುಮತಿ ನೀಡಲಾಗಿದೆ. ಮಟನ್, ಚಿಕನ್ ಅಂಗಡಿ ಕೂಡ ಬಂದ್ ಮಾಡಲಾಗಿದೆ ಎಂದು ತಿಳಿಸಿದರು.