ಕೋಟಿಗೆ ತೂಗುವ ತಿಮಿಂಗಿಲ ಮಂಜುನಾಥಯ್ಯ ಎಸಿಬಿ ಅಧಿಕಾರಿಗಳ ಬಲೆಗೆ

ಉಡುಪಿ: ಉಡುಪಿಯ ಮಾಜಿ ನಗರಸಭೆಯ ಆಯುಕ್ತ ಹಾಗೂ ಮಂಗಳೂರು ಸರ್ಕಾರಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದ ರೀಡರ್ ಡಿ. ಮಂಜುನಾಥಯ್ಯ ಅವರಿಗೆ ಸೇರಿದ ಮಣಿಪಾಲದ ಫ್ಲ್ಯಾಟ್ ಗೆ ಶುಕ್ರವಾರ ಬೆಳ್ಳಂಬೆಳಗ್ಗೆ ದಾಳಿ ನಡೆಸಿದ ಎಸಿಬಿ  ಅಧಿಕಾರಿಗಳ ತಂಡ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಹಾಗೂ ಪ್ರಮುಖ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಮುಂಜಾನೆ 6ಗಂಟೆ ಸುಮಾರಿಗೆ ಪಶ್ಚಿಮ ವಲಯ ಎಸಿಬಿ ಎಸ್ಪಿ ಶೃತಿ ನೇತೃತ್ವದ 15 ಮಂದಿ ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡ ಮಣಿಪಾಲ ಪ್ರಿಯದರ್ಶಿನಿ ಎನ್‌ಕ್ಲೈವ್ ಫ್ಲಾೃಟ್ ಸಂಖ್ಯೆ 302 ನಿವಾಸದ ಮೇಲೆ ದಾಳಿ ನಡೆಸಿದ್ದಾರೆ. ಎಸಿಬಿ ಅಧಿಕಾರಿಗಳ ದಿಢೀರ್ ದಾಳಿಯಿಂದ  ಮಂಜುನಾಥಯ್ಯ ಹಾಗೂ ಆತನ ಕುಟುಂಬದವರು ಬೆಚ್ಚಿಬಿದ್ದಿದ್ದರು. ಬರೇ ಚಡ್ಡಿ ಹಾಗೂ ಬನಿಯಾನ್ ನಲ್ಲಿದ್ದ ಮಂಜುನಾಥಯ್ಯ, ಎಸಿಬಿ ಅಧಿಕಾರಿಗಳನ್ನು ಕಂಡು ತಬ್ಬಿಬ್ಬಾಗಿದ್ದಾನೆ. ಏನೂ ಏನೂ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದ ಮಾಜಿ ಆಯುಕ್ತ, ಎಸಿಬಿ ಅಧಿಕಾರಿಗಳೆಂದು ತಿಳಿದೊಡನೆ ಶಾಕ್ ಗೆ ಒಳಗಾಗಿದ್ದಾನೆ. ಮನೆಯ ಮೂಲೆ ಮೂಲೆಗಳನ್ನು ಜಾಲಾಡಿದ ಪೊಲೀಸರು, ಕೆಲ ಪ್ರಮುಖ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.
ಅಧಿಕಾರಿಗಳಿಗೆ ಸಿಕ್ಕಿದ್ದೇನು..?
ಎಸಿಬಿ ತಂಡಕ್ಕೆ ಮಂಜುನಾಥಯ್ಯನ ಮನೆಯಲ್ಲಿ 12 ಲಕ್ಷ ರೂ. ನಗದು ಮತ್ತು ಲಕ್ಷಾಂತರ ಮೌಲ್ಯದ ಚಿನ್ನ ಹಾಗೂ ಬೆಳ್ಳಿಯ ಆಭರಣಗಳು ಸಿಕ್ಕಿದೆಂದು ಹೇಳಲಾಗುತ್ತಿದೆ. ಇದರ ಜೊತೆಗೆ ಹಣಕಾಸು ಮತ್ತು ಆಸ್ತಿ ದಾಖಲೆ ಪತ್ರವನ್ನು ಎಸಿಬಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದು, ಮಣಿಪಾಲದಲ್ಲಿ 2 ಫ್ಲ್ಯಾಟ್, ಹಣಕಾಸು ವ್ಯವಹಾರ ಮತ್ತು ಆಸ್ತಿಗೆ ಸಂಬಂಧಿಸಿದ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡು ತನಿಖೆ ನಡೆಸುತಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.
ಚೆನ್ನಗಿರಿ, ಕಡೂರಿನಲ್ಲೂ ದಾಳಿ:
ದಾವಣಗೆರೆ ಜಿಲ್ಲೆ ಚೆನ್ನಗಿರಿ ಮತ್ತು ಚಿಕ್ಕಮಗಳೂರಿನ ಕಡೂರಿನಲ್ಲಿರುವ ಮಂಜುನಾಥಯ್ಯನ  ಸಂಬಂಧಿಕರ ಮನೆಗಳ ಮೇಲು ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು, ಶೋಧಾ ಕಾರ್ಯ ಮುಂದುವರೆದಿದೆ ಎಂದು ಎಸಿಬಿ ಮೂಲಗಳಿಂದ ತಿಳಿದುಬಂದಿದೆ.
ಹಲವಾರುಗಳಿಂದ ಉಡುಪಿಯಲ್ಲೇ ಠಿಕಾಣಿ:
ಉಡುಪಿ ಜಿಲ್ಲೆಯ ಪ್ರತಿಷ್ಠಿತ ಉದ್ಯಮಿಯೊಬ್ಬರ (ಗುತ್ತಿಗೆದಾರ) ಪ್ರಭಾವ ಬಳಿಸಿಕೊಂಡು ಉಡುಪಿಯಲ್ಲೇ ಠಿಕಾಣಿ ಹೂಡಿದ್ದ ಮಂಜುನಾಥಯ್ಯ, ತನ್ನ ಅಧಿಕಾರ ವ್ಯಾಪ್ತಿಯನ್ನು ಮೀರಿ ವರ್ತಿಸುತ್ತಿದ್ದ. ತನ್ನ ಕೈಕೆಳಗಿನ ಅಧಿಕಾರಿಗಳನ್ನು ದುರುಪಯೋಗ ಪಡಿಸಿಕೊಂಡು ಉದ್ಯಮಿಗಳಿಂದ ಲಕ್ಷಾಂತರ ರೂಪಾಯಿ ಲಂಚ ಪಡೆದು ಅವರ ಕೆಲಸ ಮಾಡಿಕೊಡುತ್ತಿದ್ದ.
ಮೊದಲು ಶಿಕ್ಷಣ ಇಲಾಖೆಯಲ್ಲಿ ಅಧಿಕಾರಿಯಾಗಿದ್ದ ಮಂಜುನಾಥಯ್ಯ, ನಂತರ ದಿನಗಳಲ್ಲಿ ರಾಜಕೀಯ ಪ್ರಭಾವ ಬಳಸಿಕೊಂಡು ಉಡುಪಿ ನಗರಸಭೆಯ ಆಯುಕ್ತ ಹುದ್ದೆಗೆ ಏರಿದ್ದ. ಬಳಿಕ ನಾನು ಆಡಿದ್ದೇ ಆಟ ಎಂಬ ರೀತಿಯಲ್ಲಿ ಇಡೀ ನಗರಸಭೆಯನ್ನೇ ಗುಡಿಸಿಗುಂಡಾಂತರ ಮಾಡಿದ್ದ. ಈತನ ಭ್ರಷ್ಟಾಚಾರಕ್ಕೆ ಆಡಳಿತದಲ್ಲಿದ್ದ ಕಾಂಗ್ರೆಸ್ ಕೂಡ ಸಾಥ್ ನೀಡಿತ್ತು. ಈ ಹಿಂದೆ ಉಸ್ತುವಾರಿ ಸಚಿವರಾಗಿದ್ದ ಪ್ರಮೋದ್ ಮಧ್ವರಾಜ್ ಅನ್ನು ಬುಟ್ಟಿಗೆ ಹಾಕಿಕೊಂಡು ತನೊಬ್ಬ ಜನಪ್ರತಿನಿಧಿಯಂತೆ ವರ್ತಿಸುತ್ತಿದ್ದನು. ಇವನ ಭ್ರಷ್ಟಾಚಾರದ ಹಗರಣದಿಂದಲೇ ಈ ಬಾರಿಯ ನಗರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋಲ ಬೇಕಾಯಿತು.
ಭ್ರಷ್ಟಾಚಾತದಿಂದಲೇ ಕೋಟ್ಯಾಂತರ ರೂಪಾಯಿ ಸಂಪಾದಿಸಿದ್ದ ಈತ ಉಡುಪಿ ಸೇರಿದಂತೆ ಇತರೆ ಕಡೆಗಳಲ್ಲಿ ಆಸ್ತಿ ಮಾಡಿದ್ದಾನೆ. ತನ್ನ ಮಕ್ಕಳು ಹಾಗೂ ಕುಟುಂಬದವರವಹೆಸರಿನಲ್ಲಿ ಸಾಕಷ್ಟು ಆಸ್ತಿ ಮಾಡಿರುವ ಸಂಶಯ ವ್ಯಕ್ತವಾಗಿದ್ದು, ಈ ಹಿನ್ನೆಲೆಯಲ್ಲಿ ಎಸಿಬಿ ಅಧಿಕಾರಿಗಳು ನಡೆಸಿದ್ದಾರೆ.
ಸಾರ್ವಜನಿಕ ವಲಯದಲ್ಲಿ ಪೌರಾಯುಕ್ತ ಮಂಜುನಾಥಯ್ಯ ಅವರ ವಿರುದ್ದ ಹಲವು ಭಾರಿ ಭ್ರಷ್ಟಚಾರದ ಆರೋಪ ಕೇಳಿ ಬಂದಿತ್ತು. ಚುನಾವಣೆ ಸಂದರ್ಭ ವರ್ಗಾವಣೆ ಮಾಡಿದ ಬಳಿಕ ಮಂಜುನಾಥಯ್ಯನಿಗೆ ಪುನಃ ಪೌರಾಯುಕ್ತ ಗದ್ದುಗೆಗೆ ಏರಲು ಸಾಧ್ಯವಾಗಿರಲಿಲ್ಲ.
ದಾಳಿ ವೇಳೆ ಸಿಕ್ಕಿದ ಸೊತ್ತು:
* ಒಂದು ಕೇಜಿ ಬೆಳ್ಳಿ
* 443 ಗ್ರಾಂ ಚಿನ್ನಾಭರಣ
* ಮಣಿಪಾಲದಲ್ಲಿ ಬೇನಾಮಿ ಹೆಸರಿನಲ್ಲಿ 2 ಫ್ಲ್ಯಾಟ್.
* ಶಿವಮೊಗ್ಗದಲ್ಲಿ ಪತ್ನಿ ಹೆಸರಲ್ಲಿ ಫ್ಲ್ಯಾಟ್
* ಶಿವಮೊಗ್ಗದಲ್ಲಿ ಮಂಜುನಾಥಯ್ಯ ಹೆಸರಲ್ಲಿ ನಿವೇಶನ
* ಲಕ್ಷಾಂತರ ಮೌಲ್ಯದ ಡಸ್ಟರ್ ಮತ್ತು ಇಕೊ ಸ್ಪೋರ್ಟ್ಸ್ ಕಾರು (ಒಂದು ಮಗನ ಹೆಸರಲ್ಲಿ ಒಂದು ಬೇನಾಮಿ)
* ಎರಡು ದ್ವಿಚಕ್ರ ವಾಹನ
ಎಸಿಬಿ ಎಸ್‌ಪಿ ಶೃತಿ, ಉಡುಪಿ ಡಿವೈಎಸ್‌ಪಿ ದಿನಕರ ಶೆಟ್ಟಿ, ಕಾರವಾರ ಡಿವೈಎಸ್‌ಪಿ ಗಿರೀಶ್, ಚಿಕ್ಕಮಗಳೂರು ಡಿವೈಎಸ್‌ಪಿ ನಾಗೇಶ್ ಶೆಟ್ಟಿ, ಉಡುಪಿ ಎಸಿಬಿ ನಿರೀಕ್ಷಕರಾದ ಸತೀಶ್, ಯೊಗೀಶ್, ಜಯರಾಮ್ ಗೌಡ, ರಮೇಶ್ ಮತ್ತು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.