ಶ್ರೀಕೃಷ್ಣ ಮಠದಲ್ಲಿ ಕೊಟಿ ತುಳಸಿ ಅರ್ಚನೆ ಹಾಗೂ ಶ್ರೀಲಕ್ಷ್ಮೀ ಶೋಭಾನೆ ಪಠಣ


ಉಡುಪಿ: ರಜತಪೀಠಪುರವೆಂದೇ ಪ್ರಖ್ಯಾತಿ ಪಡೆದಿರುವ ಉಡುಪಿ, ಜಗದ್ಗುರುಗಳಾದ ಮಧ್ವಾಚಾರ್ಯರಿಂದ ಪ್ರತಿಷ್ಠಾಪಿಸಲ್ಪಟ್ಟ ರುಕ್ಮಿಣಿ ಕರಾರ್ಚಿತ ಶ್ರೀ ಕೃಷ್ಣ ಹಾಗೂ ಅವನ ಸನ್ನಿಧಾನದ ಶ್ರೀ ಕೃಷ್ಣ ಮಠದಿಂದಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ವಿಶೇಷವಾದ ಮನ್ನಣೆಯನ್ನು ಪಡೆದಿದೆ. 

ಸದಾ ತಪೋನಿರತರಾದ ಅಷ್ಟಮಠದ ಯತಿಗಳಿಂದ ನಿರಂತರ ಪೂಜೆಯನ್ನು ಕೈಗೊಳ್ಳುತ್ತಿರುವ ಶ್ರೀ ಕೃಷ್ಣನ ಸನ್ನಿಧಿಯಲ್ಲಿ ಸುಗುಣೇಂದ್ರತೀರ್ಥ ಶ್ರೀಪಾದರ ಹಾಗೂ ಪರಮ ಪೂಜ್ಯ ಸುಶ್ರೀ೦ದ್ರತೀರ್ಥ ಶ್ರೀಪಾದರ ಆಶಯದಂತೆ  24 ನೇ ಶನಿವಾರ ಬೆಳಿಗ್ಗೆ 7-30 ರಿಂದ ಉಡುಪಿ ತಾಲೂಕು ಬ್ರಾಹ್ಮಣ ಮಹಾಸಭಾ (ರಿ) ಉಡುಪಿ, ಇದರ ರಜತ ಮಹೋತ್ಸವದ ಅಂಗವಾಗಿ ನಾಡಿನ ಎಲ್ಲಾ ವಿಪ್ರ ಸಂಘಟನೆಗಳ ಹಾಗೂ ವಿಪ್ರ ಬಂಧುಗಳ ಸಹಕಾರದೊಂದಿಗೆ ವಿಷ್ಣು ಸಹಸ್ರನಾಮಾವಳಿ ಸಹಿತ ಕೋಟಿ ತುಳಸಿ ಆರ್ಚನೆ ಹಾಗೂ ವಿಶ್ವ ಮಹಿಳೆಯರಿಂದ ಸಾಮೂಹಿಕ ಲಕ್ಷ್ಮೀಶೋಭಾನೆ ಪಠಣ ಕಾರ್ಯಕ್ರಮ ನಡೆಯಲಿದೆ.

ಉಡುಪಿ ತಾಲೂಕು ಬ್ರಾಹ್ಮಣ ಮಹಾ ಸಭಾವು ಸುಮಾರು 27 ವರ್ಷಗಳ ಹಿಂದೆ ಕೀರ್ತಿಶೇಷ ವಿದ್ವಾನ್ ಹರಿದಾಸ ಉಪಾಧ್ಯಾಯರಿಂದ ಸಮಾನ ಮನಸ್ಕರ ಸಹಕಾರದೊಂದಿಗೆ ಸ್ಥಾಪಿಸಲ್ಪಟ್ಟು ಅಂದಿನಿಂದ ಇಂದಿನವರೆಗೂ ಅಧ್ಯಾತ್ಮಿಕವಾಗಿ, ಸಾಮಾಜಿಕವಾಗಿ ನಿರಂತರ ಕೆಲಸಗಳನ್ನು ಮಾಡುತ್ತಾ ಬರುತ್ತಿದೆ. ಉಡುಪಿ ತಾಲೂಕಿನಲ್ಲಿ 24 ಬ್ರಾಹ್ಮಣ ವಲಯಗಳನ್ನು ಸ್ಥಾಪಿಸಿ, ಆ ವಲಯಗಳ ಸಹಕಾರದಿಂದ ನಿರಂತರ ಆರೋಗ್ಯ ಸೇವೆ, ಉಚಿತ ಆರೋಗ್ಯ ಶಿಬಿರ, ಆಶಕ್ತರಿಗೆ ಧನ ಸಹಾಯ, ವಿದ್ಯಾರ್ಥಿಗಳಿಗೆ ಉಚಿತ ಮಾರ್ಗದರ್ಶನ, ಗೊಸೇವೆ, ಹೀಗೆ ಸಮಾಜದಲ್ಲಿ ನೊಂದವರ ಪಾಲಿನ ಆಶಾಕಿರಣವಾಗಿ ಬೆಳೆದು ನಿಂತಿದೆ. ಪ್ರಸ್ತುತ ರಜತ ಮಹೋತ್ಸವ ಸಂದರ್ಭದಲ್ಲಿ ವರ್ಷಪೂರ್ತಿ 25 ಕಾರ್ಯಕ್ರಮಗಳನ್ನು ಕೈಗೊಳ್ಳುವುದರ ಮೂಲಕ ರಜತ ಮಹೋತ್ಸವವನ್ನು ಬಹಳ ವಿಜೃಂಭಣೆಯಿಂದ ಆಚರಿಸಬೇಕೆಂದು ನಮ್ಮ ಸಂಕಲ್ಪವಾಗಿದೆ.

ಒಟ್ಟು 17 ಕಾರ್ಯಕ್ರಮಗಳನ್ನು ತಾಲೂಕು ಮಟ್ಟದಲ್ಲಿ ನಡೆದಿದೆ. ಒಟ್ಟು 20 ಕಾರ್ಯಕ್ರಮಗಳನ್ನು ಬಹಳ ಉತ್ತಮ ರೀತಿಯಲ್ಲಿ ಪೂರ್ಣಗೊಳಿಸಿದ್ದೇವೆ. 21ನೇ ಧಾರ್ಮಿಕ ಕಾರ್ಯಕ್ರಮವನ್ನು ವಿಷ್ಣು ಸಹಸ್ರನಾಮಾವಳಿ ಸಹಿತ ಕೋಟಿ ತುಳಸೀ ಅರ್ಚನೆ ಮತ್ತು  ಲಕ್ಷ್ಮೀ ಶೋಭಾನೆ ಪಠಣದೊಂದಿಗೆ ನಡೆಸಬೇಕೆಂದು ನಿಶ್ಚಯಿಸಿದ್ದೇವೆ. ಈಗಿನ ಅಧ್ಯಕ್ಷರಾಗಿರುವ ಮಂಜುನಾಥ ಉಪಾಧ್ಯಾಯ ಹಾಗೂ ರಜತ ಮಹೋತ್ಸವ ಅಧ್ಯಕ್ಷ ಶ್ರೀನಿವಾಸ ಬಲ್ಲಾಳರ ಮುಂದಾಳ್ತನದಲ್ಲಿ ನಡೆಯುತ್ತಿದೆ. 

ತಾ 24-02-24ನೇ ಶನಿವಾರ ಬೆಳಿಗ್ಗೆ 7-30 ಕ್ಕೆ ಶ್ರೀ ಕೃಷ್ಣ ದೇವರ ಸನ್ನಿಧಿಯಲ್ಲಿ ಪರ್ಯಾಯ ಶ್ರೀಗಳವರ ಉಪಸ್ಥಿತಿಯಲ್ಲಿ ಎಲ್ಲಾ ಬ್ರಾಹ್ಮಣ ಬಂಧುಗಳು ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿ, ನಂತರ ಶ್ರೀ ಕೃಷ್ಣ ದೇವರ ಮೂರ್ತಿಯನ್ನು ತುಳಸಿ ಸಹಿತವಾಗಿ ಪಲ್ಲಕ್ಕಿಯಲ್ಲಿಟ್ಟು ನೂರಾರು ಬುಟ್ಟಿ ತುಳಸಿ ಯೊಂದಿಗೆ ರಥಬೀದಿಯಲ್ಲಿ ಪ್ರದಕ್ಷಿಣೆ ಬಂದು ಶ್ರೀ ಕೃಷ್ಣ ಮಠದ ರಾಜಾಂಗಣಕ್ಕೆ ತರಲಾಗುವುದು. ಅಲ್ಲಿ ಪೂಜ್ಯ ಶ್ರೀಗಳೊಂದಿಗೆ ವಿಪ್ರ ಬಂಧುಗಳು 4 ಆವರ್ತಿ ಸಾಮೂಹಿಕ ವಿಷ್ಣುಸಹಸ್ರನಾಮಾವಳಿ ಪಠಣ ಪೂರ್ವಕ ಕೋಟಿ ತುಳಸಿ ಅರ್ಚನೆ ಮಾಡಲಿದ್ದಾರೆ. 

ಇದೇ ಸಮಯಕ್ಕೆ ವಿಪ್ರ ಮಹಿಳೆಯರಿಂದ ಸಾಮೂಹಿಕ ಲಕ್ಷ್ಮೀ ಶೋಭಾನೆ ಪಠಣ ನಡೆಯಲಿದೆ. ಬಳಿಕ ಬ್ರಾಹ್ಮಣ ಸಂಘಟನೆಗಳನ್ನು ಬಲಪಡಿಸುವ ಉದ್ದೇಶದಿಂದ ಪರಮ ಪೂಜ್ಯ ಶ್ರೀಗಳವರ ಅನುಗ್ರಹದೊಂದಿಗೆ ಅಧ್ಯಕ್ಷ  ಮಂಜುನಾಥ್ ಉಪಾಧ್ಯಾಯ ಮತ್ತು ರಜತ ಮಹೋತ್ಸವ ಅಧ್ಯಕ್ಷ  ಶ್ರೀನಿವಾಸ್‌ ಬಲ್ಲಾಳ್ ಹಾಗೂ ಸಂಚಾಲಕ  ಶ್ರೀಕಾಂತ್ ಉಪಾಧ್ಯರ ಉಪಸ್ಥಿತಿಯಲ್ಲಿ ಸಭಾ ಕಾರ್ಯಕ್ರಮ ಜರಗಲಿದೆ. ಈ ಕಾರ್ಯಕ್ರಮದಲ್ಲಿ ಮುಖ್ಯ ಅಭ್ಯಾಗತರಾಗಿ ಹಿಂದೂ ಧಾರ್ಮಿಕ ಮುಖಂಡ  ಅರುಣ್ ಕುಮಾರ್ ಪುತ್ತಿಲ, ವಿಧಾನ ಪರಿಷತ್ ಸದಸ್ಯರಾದ ಯು. ಬಿ. ವೆಂಕಟೇಶ್, ವಿಶ್ವ ಹಿಂದು ಪರಿಷತ್ ಕರ್ನಾಟಕ ಘಟಕದ ಅಧ್ಯಕ್ಷ  ಎಂ. ಬಿ. ಪುರಾಣಿಕ್, ಮಾಜಿ ಶಾಸಕರು ಹಾಗೂ ಜಾತ್ಯತೀತ ಜನತಾದಳ ಇದರ ರಾಜ್ಯ ಉಪಾಧ್ಯಕ್ಷರು ಆಗಿರುವ  ಕೆ. ಬಿ. ಪ್ರಸನ್ನಕುಮಾರ್, ಉಡುಪಿಯ ಪ್ರಸಿದ್ಧ ನ್ಯಾಯವಾದಿ ಎಚ್. ಜಯಪ್ರಕಾಶ್ ಕೆದ್ಲಾಯ, ಹೋಟೆಲ್ ಅಯೋಧ್ಯಾ ಹುಬ್ಬಳ್ಳಿ ಇದರ ಮಾಲಕರಾಗಿರುವ ಶ್ರೀಕಾಂತ್ ಭಟ್ ಕೆಸ್ತೂರು, ನಗರಸಭಾ ಸದಸ್ಯ ಮತ್ತು ಉದ್ಯಮಿ ಶ್ರೀ ಕೃಷ್ಣ ರಾವ್ ಕೊಡಂಚ, ಉಡುಪಿ ಜಿಲ್ಲಾ ಬ್ರಾಹ್ಮಣ ಮಹಾಸಭಾ ಇದರ ಗೌರವ ಅಧ್ಯಕ್ಷರಾಗಿರುವ ಶ್ರೀ ಕೃಷ್ಣಾನಂದ ಛಾತ್ರ ಭಾಗವಹಿಸಲಿದ್ದಾರೆ. ಸಭಾ ಕಾರ್ಯಕ್ರಮದ ಬಳಿಕ ಸರ್ವರಿಗೂ ಶ್ರೀಗಳವರಿಂದ ಅನುಗ್ರಹ ಮಂತ್ರಾಕ್ಷತೆ ಮತ್ತು ಕೃಷ್ಣ ದೇವರ ಭೋಜನ ಪ್ರಸಾದ ವಿತರಣೆಯಾಗಲಿದೆ. 

ವಿಷ್ಣು ಸಹಸ್ರನಾಮಾವಳಿ ಸಹಿತ ಕೋಟಿ ತುಳಸೀ ಅರ್ಚನೆಗೆ ಸುಮಾರು 2,000 ವಿಪ್ರ ಬಂಧುಗಳು ಮತ್ತು ಶ್ರೀ ಲಕ್ಷ್ಮೀ ಶೋಭಾನೆ ಪಠಣೆಗೆ 1,000 ವಿಪ್ರ ಮಹಿಳೆಯರು ಭಾಗವಹಿಸುವರು ಎಂದು ತಾಲೂಕು ಅಧ್ಯಕ್ಷ ಮಂಜುನಾಥ ಉಪಾಧ್ಯ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು. 

ಈ ಸಂದರ್ಭದಲ್ಲಿ ಮಠದ ದಿವಾನ ನಾಗರಾಜ ಆಚಾರ್ಯ, ಎಂ. ಶ್ರೀನಿವಾಸ ಬಲ್ಲಾಳ್, ಶ್ರೀಕಾಂತ ಉಪಾಧ್ಯ, ರಮೇಶ್ ಭಟ್, ಯು. ಬಿ ಶ್ರೀನಿವಾಸ ಪಿತ್ರೋಡಿ, ಜನಾರ್ದನ್ ಭಟ್, ಜಯರಾಮ ಆಚಾರ್ಯ, ನಾಗರಾಜ ಆಚಾರ್ಯ, ನಾರಾಯಣ ದಾಸ್ ಉಡುಪ ಹಾಗು ನಾಗರಾಜ ಉಪಾಧ್ಯ ಉಪಸ್ಥಿತರಿದ್ದರು.