ಮಲ್ಪೆ: ಈ ಬಾರಿಯ ರಾಜ್ಯೋತ್ಸವ ಸಂದರ್ಭದಲ್ಲಿ ನಾಡು ನುಡಿಯ ಜಾಗೃತಿಗಾಗಿ ಕೋಟಿ ಕಂಠ ಗಾಯನವನ್ನು ಹಮ್ಮಿಕೊಳ್ಳಲಾಗಿದ್ದು, ಜಿಲ್ಲೆಯಾದ್ಯಂತ ಕಚೇರಿ ಕಟ್ಟಡ ಮೈದಾನವೆನ್ನದೆ ಎಲ್ಲೆಲ್ಲೂ ಕನ್ನಡದ ಶಂಖನಾದ ಮೊಳಗಿದೆ. ಈ ಉತ್ಸಾಹ ಕೇವಲ ನೆಲಕ್ಕೆ ಮಾತ್ರ ಸೀಮಿತವಾಗಿರದೆ ಸಾಗರದ ಮಧ್ಯೆಯೂ ಕನ್ನಡದ ಡಿಂಡಿಮವನ್ನು ಬಾರಿಸಲಾಗಿದೆ.
ದ.ಕ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್, ಮಹಾಲಕ್ಷ್ಮೀ ಕೋ.ಆಪರೇಟಿವ್ ಬ್ಯಾಂಕ್ ಉಡುಪಿ, ಉಡುಪಿ ಜಿಲ್ಲಾಡಳಿತ ಮತ್ತು ಮಲ್ಪೆ ಮೀನುಗಾರರ ಸಂಘದ ಸಹಕಾರದೊಂದಿಗೆ ಮಲ್ಪೆಯ ಸಮುದ್ರ ಮದ್ಯದಲ್ಲಿ ಹತ್ತಾರು ದೋಣಿಗಳನ್ನು ನಿಲ್ಲಿಸಿ ಅದರೊಳಗೆ ನೂರಾರು ಜನರು ಕನ್ನಡದ ಹಾಡುಗಳನ್ನು ಹಾಡಿ ಸಂಭ್ರಮಿಸಿದ್ದಾರೆ. ಕನ್ನಡಾಂಬೆಯ ಧ್ವಜವನ್ನು ಕೈಯಲ್ಲಿ ಹಿಡಿದು ಮೀನುಗಾರರು ಕುಣಿದಾಡಿದ್ದಾರೆ.
ಮೀನುಗಾರಿಕಾ ಇಲಾಖೆ ಮತ್ತು ಮೀನುಗಾರಿಕಾ ಫೆಡರೇಶನ್ ನೇತೃತ್ವದಲ್ಲಿ ಕೋಟಿ ಕಂಠ ಗಾಯನ ಹಮ್ಮಿಕೊಂಡಿದ್ದು, ಜಿಲ್ಲಾಧಿಕಾರಿ ಕೂರ್ಮರಾವ್, ಮೀನುಗಾರಿಕಾ ಫೆಡರೇಶನ್ ಅಧ್ಯಕ್ಷ ಯಶಪಾಲ್ ಸುವರ್ಣ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.












