ಸೋಮೇಶ್ವರ- ಕೋಟೇಶ್ವರ ರಸ್ತೆ ಕಾಮಗಾರಿ: ಸಂಚಾರದಲ್ಲಿ ತಾತ್ಕಾಲಿಕ ಬದಲಾವಣೆ

ಉಡುಪಿ: ಕುಂದಾಪುರ ತಾಲೂಕು ಸೋಮೇಶ್ವರ- ಕೋಟೇಶ್ವರ (ಹಾಲಾಡಿ- ಕೋಟೇಶ್ವರ ರಸ್ತೆ) ರಸ್ತೆ ಕಾಂಕ್ರೀಟೀಕರಣ ಕಾಮಗಾರಿ ನಡೆಸಬೇಕಾಗಿರುವುದರಿಂದ ಮೇ 16 ರಿಂದ ಜುಲೈ 16 ರ ವರೆಗೆ ಸೋಮೇಶ್ವರ- ಕೋಟೇಶ್ವರ (ಹಾಲಾಡಿ- ಕೋಟೇಶ್ವರ ರಸ್ತೆ) ರಸ್ತೆಯಲ್ಲಿ ಸಂಚರಿಸುವ ಭಾರೀ ವಾಹನ ಹಾಗೂ ಬಸ್ಸುಗಳ ಸಂಚಾರದ ವ್ಯವಸ್ಥೆಯಲ್ಲಿ ತಾತ್ಕಾಲಿಕ ಬದಲಾವಣೆ ಮಾಡಿ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಆದೇಶ ಹೊರಡಿಸಿದ್ದಾರೆ.

    ಈ ಆದೇಶದನ್ವಯ ಕುಂದಾಪುರ ಹಾಗೂ ಉಡುಪಿ ಕಡೆಯಿಂದ ಹಾಲಾಡಿ ಕಡೆಗೆ ಹೋಗುವ ಬಸ್‍ಗಳು ಹಾಗೂ ಇತರೆ ವಾಹನಗಳಿಗೆ ಹಳೆ ಗೋಪಾಡಿ ಪಂಚಾಯತ್ (ಹೂವಿನಕೆರೆ ಸ್ವಾಗತ ಗೋಪುರ) ಮುಖೇನ ರಾ. ಹೆ.66 ಯಿಂದ ಪೂರ್ವ ದಿಕ್ಕಿಗೆ ಚಲಿಸಿ ಬೀಜಾಡಿ- ವಕ್ವಾಡಿ-ಕಾಳಾವರ ರಸ್ತೆಯಲ್ಲಿ ಚಲಿಸಿ, ವಕ್ವಾಡಿಯ ಗುರುಕುಲ ಶಾಲೆಗೆ ಹೋಗುವ ಕಾಂಕ್ರೀಟ್ ರಸ್ತೆಗೆ (ರಸ್ತೆ ಎಡಕ್ಕೆ) ಚಲಿಸಿದಲ್ಲಿ ಗುರುಕುಲ ಶಾಲೆಯ ಬಳಿ 2 ರಸ್ತೆಗಳು ಕವಲೊಡೆದು ಹೋಗುತ್ತಿದ್ದು, ಈ ಎರಡು ರಸ್ತೆಗಳ ಪೈಕಿ ರಸ್ತೆಯ ಎಡಕ್ಕೆ (ಪಶ್ಚಿಮ) ಚಲಿಸಿದರೆ ಸನ್‍ರೈಸ್ ಫ್ಯಾಕ್ಟರಿಯ ಬಳಿಯ ಯುವ ಮೆರಿಡಿಯನ್ ಹಾಲ್‍ಗೆ ಸಂಪರ್ಕಿಸಿದರೆ, ಬಲಕ್ಕೆ (ಪೂರ್ವ) ವಾಹನಗಳು ಚಲಿಸಿ ಮುಂದೆ ಕಾಳಾವರ ಬಸ್ ಸ್ಟಾಪ್ ಸಂಪರ್ಕಿಸುವ ಕೋಟೇಶ್ವರ-ಹಾಲಾಡಿ-ಸೋಮೇಶ್ವರ ರಸ್ತೆಗೆ ಸಂಪರ್ಕ ಮಾಡಲು ಅನುಕೂಲವಾಗುತ್ತದೆ.

    ಗುರುಕುಲ ಶಾಲೆಯ ಬಳಿ ಎರಡು ರಸ್ತೆಗಳ ಪೈಕಿ ರಸ್ತೆಯ ಬಲಕ್ಕೆ (ಪೂರ್ವ ದಿಕ್ಕಿಗೆ) ಘನ ವಾಹನಗಳು ಚಲಿಸಿ ಕಾಳಾವರ ಬಸ್‍ಸ್ಟಾಪ್ (ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಜಂಕ್ಷನ್) ನಲ್ಲಿ ಕೋಟೇಶ್ವರ-ಹಾಲಾಡಿ-ಸೋಮೇಶ್ವರ ರಸ್ತೆ ಸಂಪರ್ಕಿಸಿದ್ದು, ಹಾಲಾಡಿ- ಸೋಮೇಶ್ವರ ಕಡೆ ವಾಹನಗಳಿಗೆ ಸಂಚರಿಸಲು ಯೋಗ್ಯವಾದ ಮಾರ್ಗವಾಗಿರುತ್ತದೆ. ಅಲ್ಲದೇ ಬೀಜಾಡಿ-ವಕ್ವಾಡಿ-ಕಾಳಾವರ ರಸ್ತೆಯಲ್ಲಿ ಚಲಿಸಿ ಬಂದ ವಾಹನಗಳು ವಕ್ವಾಡಿ ರಸ್ತೆಯಲ್ಲಿ ನೇರವಾಗಿ ಬಂದು ಚಾರುಕೊಟ್ಟಿಯಿಂದಾಗಿ ಸಂಚರಿಸಿದರೆ ಕೋಟೇಶ್ವರ-ಹಾಲಾಡಿ-ಸೋಮೇಶ್ವರ ರಸ್ತೆ ಸಂಪರ್ಕಿಸುತ್ತದೆ. ಸದ್ರಿ ರಸ್ತೆಯು ತೆಕ್ಕಟ್ಟೆ, ಕೆದೂರು ಕಡೆಗೆ ಹೋಗುವ ವಾಹನಗಳಿಗೆ ಅನುಕೂಲವಾಗುವ ಮಾರ್ಗವಾಗಿರುತ್ತದೆ.

     ಕುಂದಾಪುರ, ತಲ್ಲೂರು, ಹೆಮ್ಮಾಡಿ. ಬೈಂದೂರು ಕಡೆಯಿಂದ ಹುಣ್ಸೆಮಕ್ಕಿ, ಬಿದ್ಕಲ್‍ಕಟ್ಟೆ, ಹಾಲಾಡಿ-ಸೋಮೇಶ್ವರ ಕಡೆಗೆ ತೆರಳುವ ಭಾರಿ ವಾಹನ ಹಾಗೂ ಬಸ್ಸುಗಳಿಗೆ ಬಸ್ರೂರು ಮೂರು ಕೈ ಜಂಕ್ಷನ್‍ನಲ್ಲಿ ರಾ.ಹೆ. 66 ರಸ್ತೆಯಲ್ಲಿ ಪೂರ್ವಕ್ಕೆ ಚಲಿಸಿ ಕೋಣಿ, ಬಸ್ರೂರು, ಬಿ.ಹೆಚ್. ಕ್ರಾಸ್ ಮಾರ್ಗವಾಗಿ ಜಪ್ತಿ ಮುಖೇನ ಸಂಚರಿಸಿ, ಹುಣ್ಸೆಮಕ್ಕಿ ತಲುಪಿದರೆ ಕೋಟೇಶ್ವರ-ಹಾಲಾಡಿ-ಸೋಮೇಶ್ವರ ರಸ್ತೆ ಸಂಪರ್ಕಿಸುತ್ತದೆ. ಸದ್ರಿ ರಸ್ತೆಯು ಮೇಲೆ ತಿಳಿಸಿದ ಸ್ಥಳಗಳಿಂದ ಬರುವ ವಾಹನಗಳಿಗೆ ಅತ್ಯಂತ ಸೂಕ್ತವಾದ ಮಾರ್ಗವಾಗಿರುತ್ತದೆ.

      ಕುಂದಾಪುರ, ತಲ್ಲೂರು, ಹೆಮ್ಮಾಡಿ, ಬೈಂದೂರು ಕಡೆಯಿಂದ ಹುಣ್ಸೆಮಕ್ಕಿ, ಬಿದ್ಕಲ್‍ಕಟ್ಟೆ, ಹಾಲಾಡಿ-ಸೋಮೇಶ್ವರ ಕಡೆಗೆ ಹೋಗುವ ಲಘು ವಾಹನಗಳಿಗೆ (ಬಸ್ಸುಗಳಿಗೆ) ಮೇಲೆ ತಿಳಿಸಿದ ಮಾರ್ಗವಲ್ಲದೇ ಕೋಣಿ ಶಾಲೆ ಹಾಗೂ ಹೆಚ್.ಎಮ್.ಟಿ ರಸ್ತೆ ಮುಖೇನ ಚಲಿಸಿ ಕಟ್ಗೆರೆ ಕಡೆಗೆ ಸಂಚರಿಸಿದರೆ ಕೋಟೇಶ್ವರ-ಹಾಲಾಡಿ-ಸೋಮೇಶ್ವರ ರಸ್ತೆ ಸಂಪರ್ಕಿಸುತ್ತದೆ. ಸದ್ರಿ ರಸ್ತೆಯು ಲಘು ವಾಹನಗಳಿಗೆ ಸೂಕ್ತವಾದ ಮಾರ್ಗವಾಗಿರುತ್ತದೆ.