ನವದೆಹಲಿ: ಕೊಟಕ್ ಮಹೀಂದ್ರಾ ಬ್ಯಾಂಕ್‌ನ ಸಂಸ್ಥಾಪಕ ಉದಯ್ ಕೊಟಕ್ ಅವರು ತಮ್ಮ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಹುದ್ದೆಗೆ ದಿಢೀರ್ ರಾಜೀನಾಮೆ ನೀಡಿದ್ದಾರೆ.ಸರಿಯಾದ ಸಮಯದಲ್ಲಿ ನಾನು ಹುದ್ದೆಯಿಂದ ಕೆಳಗಿಳಿಯುತ್ತಿದ್ದೇನೆ ಎಂದು ಅವರು ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.ಕೊಟಕ್ ಮಹೀಂದ್ರಾ ಬ್ಯಾಂಕ್‌ನ ಸಿಇಒ, ಎಂಡಿ ಸ್ಥಾನಕ್ಕೆ ಉದಯ್ ಕೊಟಕ್ ಅವರು ರಾಜೀನಾಮೆ ನೀಡಿದ್ದಾರೆ.
.ಎಕ್ಸ್ನಲ್ಲಿ (ಹಿಂದಿನ ಟ್ವಿಟ್ಟರ್) ಈ ಬಗ್ಗೆ ಮಾಹಿತಿ ನೀಡಿರುವ ಉದಯ್ ಕೊಟಕ್ ಅವರು, ಕೋಟಕ್ ಮಹೀಂದ್ರಾ ಬ್ಯಾಂಕ್‌ನ ಉತ್ತರಾಧಿಕಾರದ ಕಾಲ ಇದಾಗಿದೆ. ಬ್ಯಾಂಕ್‌ನ ಅಧ್ಯಕ್ಷರು, ನಾನು ಮತ್ತು ಜಂಟಿ ಎಂಡಿ ಎಲ್ಲರೂ ವರ್ಷಾಂತ್ಯದಲ್ಲಿ ಕೆಳಗಿಳಿಯಬೇಕಾಗಿದೆ. ಈ ನಿರ್ಗಮನದಿಂದ ಬ್ಯಾಂಕ್‌ನ ಸುಗಮ ವ್ಯವಹಾರ ಸಾಧ್ಯವಾಗಲಿದೆ. ನಾನು ಬ್ಯಾಂಕ್ನಿಂದ ಹೊರಬರಲು ಇದು ಸಕಾಲವಾಗಿದೆ. ಹೀಗಾಗಿ ನಾನಾಗಿಯೇ ಸ್ವಯಂಪ್ರೇರಣೆಯಿಂದ ಸಿಇಒ ಮತ್ತು ಎಂಡಿ ಹುದ್ದೆಯನ್ನು ತ್ಯಜಿಸುತ್ತಿದ್ದೇನೆ ಎಂದು ಅವರು ಬರೆದುಕೊಂಡಿದ್ದಾರೆ. ತಾವೇ ಕೈಬರಹದಿಂದ ಬರೆದ ಪತ್ರವನ್ನು ಹಂಚಿಕೊಂಡಿದ್ದಾರೆ.
ಅತ್ಯುತ್ತಮ ನಿರ್ವಹಣಾ ತಂಡವಿದೆ: ಸಂಸ್ಥಾಪಕನಾಗಿ ಕೊಟಕ್ ಅನ್ನು ಬ್ರ್ಯಾಂಡ್ ಆಗಿ ಪರಿವರ್ತಿಸಿದ ಖುಷಿ ಇದೆ. ಸಂಸ್ಥೆಯ ಮಹತ್ವದ ಹುದ್ದೆಯಿಂದ ಇಳಿದಿದ್ದರೂ, ಬ್ಯಾಂಕ್‌ನ ಕಾರ್ಯನಿರ್ವಾಹಕೇತರ ನಿರ್ದೇಶಕ ಮತ್ತು ಷೇರುದಾರನಾಗಿ ಸೇವೆ ಸಲ್ಲಿಸುವುದನ್ನು ಮುಂದುವರಿಸುತ್ತೇನೆ. ಬ್ಯಾಂಕ್‌ನ ಈಗಿನ ಸ್ಥಿತಿಯನ್ನು ಮುಂದುವರಿಸಿಕೊಂಡು ಸಾಗಲು ನಾವು ಅತ್ಯುತ್ತಮ ನಿರ್ವಹಣಾ ತಂಡವನ್ನು ಹೊಂದಿದ್ದೇವೆ. ನಾವು ದೂರವಾದರೂ ಸಂಸ್ಥೆಯು ಶಾಶ್ವತವಾಗಿ ಬೆಳೆಯುತ್ತದೆ ಎಂದು ಅವರು ಹೇಳಿದ್ದಾರೆ.
ತಮ್ಮ ಅಧಿಕಾರದ ಅವಧಿ ಈ ವರ್ಷದ ಡಿಸೆಂಬರ್ 31ರ ವರೆಗೂ ಇದ್ದರೂ, ಅದಕ್ಕೂ ಮುಂಚಿತವಾಗಿ ಸೆಪ್ಟೆಂಬರ್ 1 ರಿಂದಲೇ ಅನ್ವಯವಾಗುವಂತೆ ರಾಜೀನಾಮೆ ನೀಡಿದ್ದಾಗಿ ಅವರು ತಿಳಿಸಿದ್ದಾರೆ. ಎಂಡಿ ಸ್ಥಾನದಿಂದ ಉದಯ್ ಹಿಂದಡಿ ಇಟ್ಟಿದ್ದರೂ, ಬ್ಯಾಂಕ್‌ನ ಕಾರ್ಯನಿರ್ವಾಹಕೇತರ ನಿರ್ದೇಶಕರಾಗಿ ಮುಂದುವರಿಯಲಿದ್ದಾರೆ
ದೀಪಕ್ ಗುಪ್ತಾ ಮುಂದಿನ ಸಿಇಒ: ಉದಯ್ ಕೊಟಕ್ ಅವರಿಂದ ತೆರವಾದ ಸ್ಥಾನಕ್ಕೆ ಸದ್ಯಕ್ಕೆ ದೀಪಕ್ ಗುಪ್ತಾ ಅವರನ್ನು ಮಧ್ಯಂತರ ಎಂಡಿ ಮತ್ತು ಸಿಇಒ ಆಗಿ ಕಾರ್ಯ ನಿರ್ವಹಿಸಲಿದ್ದಾರೆ. ಭಾರತೀಯ ರಿಸರ್ವ್ ಬ್ಯಾಂಕ್(ಆರ್ಬಿಐ) ಮತ್ತು ಬ್ಯಾಂಕ್ ಸದಸ್ಯರ ಅನುಮೋದನೆಯ ಬಳಿಕ ಡಿಸೆಂಬರ್ 31 ರವರೆಗೂ ಅವರೇ ಈ ಹುದ್ದೆಗಳನ್ನು ನಿರ್ವಹಿಸಲಿದ್ದಾರೆ ಎಂದು ಹೇಳಿಕೆಯಲ್ಲಿ ಉಲ್ಲೇಖ ಮಾಡಲಾಗಿದೆ.
ಜೆಪಿ ಮೋರ್ಗಾನ್ ಮತ್ತು ಗೋಲ್ಡ್‌ಮನ್ ಸ್ಯಾಚ್‌ಗಳಂತಹ ಸಂಸ್ಥೆಗಳು ಆರ್ಥಿಕ ಜಗತ್ತಿನಲ್ಲಿ ಪ್ರಾಬಲ್ಯ ಸಾಧಿಸುವುದನ್ನು ನೋಡಿದ್ದೆ. ಭಾರತದಲ್ಲಿ ಅಂತಹ ಸಂಸ್ಥೆಯನ್ನು ರಚಿಸುವ ಕನಸು ಕಂಡೆ. ಈ ಕನಸಿನೊಂದಿಗೆ ನಾನು 38 ವರ್ಷಗಳ ಹಿಂದೆ ಕೊಟಕ್ ಮಹೀಂದ್ರಾವನ್ನು ಪ್ರಾರಂಭಿಸಿದೆ. ಮುಂಬೈನ ಫೋರ್ಟ್‌ನಲ್ಲಿರುವ 300 ಚದರ್ ಅಡಿ ಕಚೇರಿಯಲ್ಲಿ 3 ಉದ್ಯೋಗಿಗಳೊಂದಿಗೆ ಬ್ಯಾಂಕ್ ಆರಂಭಿಸಿದೆ. ಇದೀಗ ಆಳವಾದ ಬೇರುಗಳನ್ನು ಬಿಟ್ಟು ಬೆಳೆದಿದೆ ಎಂದು ಅವರು ತಿಳಿಸಿದ್ದಾರೆ












