ಒಳ್ಳೆಯ ಕೆಲಸವನ್ನು ಹೊಗಳಲು ಸಿದ್ದರಾಮಯ್ಯನವರಿಗೆ ಮನಸ್ಸಿಲ್ಲ :ಕೋಟ ಶ್ರೀನಿವಾಸ ಪೂಜಾರಿ

ಉಡುಪಿ: ಸಿಎಂ ಯಡಿಯೂರಪ್ಪನವರ ಕಾರ್ಯವೈಖರಿಯನ್ನು ಕಂಡು ಸಿದ್ದರಾಮಯ್ಯನವರಿಗೆ
ಅರಗಿಸಿಕೊಳ್ಳಲಾಗುತ್ತಿಲ್ಲ. ಅವರಿಗೆ ಒಳ್ಳೆಯ ಕೆಲಸವನ್ನು ಹೊಗಳಲು ಮನಸ್ಸಿಲ್ಲ. ಅದಕ್ಕೆ ಸಿಎಂ ಕಾರ್ಯವನ್ನು ಕಂಡು ಹೊಟ್ಟೆಕಿಚ್ಚಿನಿಂದ ಬಯ್ಯುತ್ತಿದ್ದಾರೆ ಎಂದು ಮುಜರಾಯಿ, ಮೀನುಗಾರಿಕೆ ಹಾಗೂ ಬಂದರು ಸಚಿವ ಕೋಟ ಶ್ರೀನಿವಾಸ ಪೂಜಾರಿ ಟೀಕಿಸಿದರು.

ಉಡುಪಿಯ ಜೀವನದಿ ಸ್ವರ್ಣ ನದಿಗೆ ಗುರುವಾರ ಬಾಗಿನ ಅರ್ಪಿಸಿ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ  ಮಾತನಾಡಿದ ಅವರು, ಸಿಎಂ ನೆರೆ ಸಂತ್ರಸ್ತರ ಸ್ಥಳಗಳಿಗೆ  ಓಡಾಡುತ್ತಿದ್ದು, ಪರಿಹಾರ ವಿತರಣೆ ಕಾರ್ಯದಲ್ಲಿ ನಿರತರಾಗಿದ್ದಾರೆ. ನೆರೆ ಸಂತ್ರಸ್ತರ ಅಳಲು ಕೇಳುತ್ತಿದ್ದಾರೆ. ಆದರೆ ನೆರೆ ಸಂತ್ರಸ್ತರು ಸಂಕಟದಲ್ಲಿದ್ದಾಗ ಸಿದ್ದರಾಮಯ್ಯ, ಕುಮಾರಸ್ವಾಮಿ ಯಾರೂ ಬಂದಿಲ್ಲ. ಈಗ ಸಿದ್ದರಾಮಯ್ಯಗೆ ಸಿಎಂ ಕಾರ್ಯವನ್ನು ಸಹಿಸಿಕೊಳ್ಳಲಾಗುತ್ತಿಲ್ಲ ಎಂದು ದೂರಿದರು.

ರಾಜ್ಯದಲ್ಲಿ ಅಮಿತ್‌ ಶಾ ಆಡಳಿತ, ಬಿಎಸ್‌ವೈ ಡೆಲ್ಲಿ ಸಿಎಂ ಎಂಬ ಹೇಳಿಕೆಗೆ ತಿರುಗೇಟು ನೀಡಿದ ಕೋಟ, ರಾಜ್ಯದ ಸಿಎಂಗೆ ಹೈಕಮಾಂಡ್‌, ಪ್ರಧಾನಿ, ಗೃಹ ಸಚಿವರು ಸಲಹೆ ನೀಡುವುದು ಸಹಜ. ಸಲಹೆಗಳು ಸಮಷ್ಟಿಹಿತ, ರಾಜ್ಯದ ಹಿತಕ್ಕೆ ಪೂರಕ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ರಾಹುಲ್‌ ಗಾಂಧಿ ಸಲಹೆ ಪಡೆದಿಲ್ವಾ ಎಂದು ಪ್ರಶ್ನಿಸಿದರು.

ಜಿಲ್ಲಾ ಉಸ್ತುವಾರಿ ಸಚಿವರ ನೇಮಕದಲ್ಲಿ ಯಾವುದೇ ಗೊಂದಲ ಇಲ್ಲ. ಮೂವರು ಡಿಸಿಎಂ ನೇಮಕದಿಂದ ಪ್ರವಾಹ ನಿರ್ವಹಣೆಗೆ ಅನುಕೂಲ ಆಗುತ್ತದೆ. ಮೂರು ಮಂದಿ ಡಿಸಿಎಂ ನೇಮಕಕ್ಕೆ ಸಂಸದ ಶ್ರೀನಿವಾಸ ಪ್ರಸಾದ್‌ ಆಕ್ಷೇಪಿಸಿಲ್ಲ, ತಮ್ಮ ಭಾವನೆಯನ್ನು ಬಿಚ್ಚಿಟ್ಟಿದ್ದಾರೆ ಅಷ್ಟೇ ಎಂದರು.

ಮೀನುಗಾರರನ್ನು ಅಸಂಘಟಿತ ಕಾರ್ಮಿಕ ವಲಯಕ್ಕೆ ತರಲು ಚಿಂತನೆ ಮಾಡಿದ್ದೇವೆ. ಈ ಬಗ್ಗೆ ಕಾರ್ಮಿಕ ಇಲಾಖೆ ಅಧಿಕಾರಿಗಳ ಜತೆಗೆ ಸಭೆ ನಡೆಸಲಾಗಿದೆ ಎಂದು ತಿಳಿಸಿದರು.