ಕೋಟ ಶ್ರೀನಿವಾಸ ಪೂಜಾರಿಯವರಿಗೆ ಜಿಲ್ಲಾ ಉಸ್ತುವಾರಿ ಕೊಟ್ಟರೆ ಚೆನ್ನಾಗಿತ್ತು: ಜಯಪ್ರಕಾಶ್ ಹೆಗ್ಡೆ

ಕುಂದಾಪುರ: ಸ್ಥಳೀಯರಿಗೆ ಉಡುಪಿ ಜಿಲ್ಲಾ ಉಸ್ತುವಾರಿ ಕೊಟ್ಟಿದ್ದರೆ ಚೆನ್ನಾಗಿರುತ್ತಿತ್ತು. ಕೋಟ ಶ್ರೀನಿವಾಸ ಪೂಜಾರಿ ಸ್ಥಳೀಯರಾಗಿದ್ದು, ಅವರು ಉಡುಪಿ, ದಕ್ಷಿಣ ಕನ್ನಡ ಎರಡೂ ಜಿಲ್ಲೆಗಳನ್ನು ಪ್ರತಿನಿಧಿಸುತ್ತಿರುವುದರಿಂದ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗೆ ಅವರನ್ನೇ ಉಸ್ತುವಾರಿಯನ್ನಾಗಿ ನೇಮಿಸಬೇಕಿತ್ತು ಎಂದು ಮಾಜಿ ಸಚಿವ, ಬಿಜೆಪಿ ಮುಖಂಡ ಕೆ. ಜಯಪ್ರಕಾಶ್ ಹೆಗ್ಡೆ ಹೇಳಿದ್ದಾರೆ.

ಅವರು ಬುಧವಾರ ಹೆಮ್ಮಾಡಿ ಸಮೀಪದ ಬಾಳಿಕೆರೆಯಲ್ಲಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ ಮಾತನಾಡುತ್ತಾ, ಅದೇ ಜಿಲ್ಲೆಯವರೇ ಉಸ್ತುವಾರಿ ಮಂತ್ರಿಗಳಾದರೆ ಜನರಿಗೆ ತುಂಬಾ ಅನುಕೂಲವಾಗುತ್ತದೆ. ಪ್ರಸ್ತುತ ಉಡುಪಿ ಉಸ್ತುವಾರಿ ಸಚಿವರಿಗೆ ಗೃಹ ಖಾತೆಯಿದ್ದು ಅವರು ಹೆಚ್ಚಿನ ಸಮಯವನ್ನು ಬೆಂಗಳೂರಿನಲ್ಲಿ ಕಳೆಯಬೇಕಾಗುತ್ತದೆ. ಉಸ್ತುವಾರಿ ಜವಾಬ್ದಾರಿ ದೂರದ ಜಿಲ್ಲೆಗೆ ಕೊಟ್ಟಾಗ ಕಷ್ಟವಾಗುತ್ತದೆ ಎಂದು ಜೆ‌ಪಿ ಹೆಗ್ಡೆ ಅಭಿಪ್ರಾಯಪಟ್ಟರು.

ಇನ್ನು ದೇವಸ್ಥಾನ ವ್ಯವಸ್ಥಾಪನ ಸಮಿತಿ ರದ್ದು ವಿಚಾರದ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಅವರು, ಇದು ಸರಕಾರದ ತೀರ್ಮಾನವಾಗಿದೆ. ಧಾರ್ಮಿಕ ಪರಿಷತ್ ಆಯ್ಕೆ ಮಾಡಿದ್ದು ನ್ಯಾಯಾಲಯದ ತೀರ್ಮಾನಕ್ಕೆ ಬಿಟ್ಟಿದ್ದಾಗಿದ್ದು ಆದೇಶದಲ್ಲಿ ಯಾವ ರೀತಿ ಉಲ್ಲೇಖವಿದೆಯೆಂಬುದರ ಮೇಲೆ ತೀರ್ಮಾನವಾಗುತ್ತದೆ ಎಂದ ಜೆ.ಪಿ ಹೆಗ್ಡೆ ಇತ್ತೀಚೆನ ರಾಜಕೀಯದಲ್ಲಿ ಯಾವುದು ಒಳ್ಳೇದು ಯಾವುದು ಕೆಟ್ಟದು ಅರ್ಥವಾಗ್ತಿಲ್ಲ. ಜನಾಭಿಪ್ರಾಯ ಯಾರ ಮೇಲಿರುತ್ತೋ ಗೊತ್ತಾಗೋದು ಇಲ್ಲ ಎಂದು ಮಾರ್ಮಿಕವಾಗಿ ನುಡಿದರು.

ಬಿಜೆಪಿ ಸರ್ಕಾರದಲ್ಲಿ ಏನಾದರೂ ಸ್ಥಾನಮಾನಗಳ ನಿರೀಕ್ಷೆ ಇದೆಯಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಮಾನ ಮೊದಲಿನಿಂದಲೂ ಇದೆ. ಸ್ಥಾನ‌ ಕೇಳಿ ಪಡೆದು ಮಾನ ಕಳೆದುಕೊಳ್ಳುವ ಕೆಲಸಕ್ಕೆ ನಾನು ಹೋಗಲ್ಲ. ಸ್ಥಾನ ಕೇಳಿ ಪಡೆದುಕೊಂಡರೆ ಅದಕ್ಕೆ ಅರ್ಥವೇ ಇಲ್ಲ ಎಂದು ಜಯಪ್ರಕಾಶ್ ಹೆಗ್ಡೆ ಮಂದಹಾಸ ಬೀರುತ್ತಲೇ ಪ್ರತಿಕ್ರಿಯೆ ನೀಡಿದರು.