ದೇವರಾಜ್ ಅರಸ್ ಹೆಜ್ಜೆ ಗುರುತಿನಲ್ಲಿ ಸಾಗುತ್ತಿರುವ ಕೋಟ ಶ್ರೀನಿವಾಸ್ ಪೂಜಾರಿಯವರ ನಡೆ ಅನುಕರಣೀಯ- ವಿಜಯ್ ಕೊಡವೂರು.

ಉಡುಪಿ: ಉಡುಪಿ ಜಿಲ್ಲಾಡಳಿತ ವತಿಯಿಂದ ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ಆಗಸ್ಟ್ 20 ರಂದು ದೇವರಾಜ್ ಅರಸುರವರ 127 ನೇ ಜಯಂತಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ದೇವರಾಜ ಅರಸು ಪ್ರಶಸ್ತಿ ಸಮಿತಿಯ ಸದಸ್ಯ ಮತ್ತು ಉಡುಪಿ ನಗರಸಭೆಯ ಸದಸ್ಯ ವಿಜಯ್ ಕೊಡವೂರು ಮಾತನಾಡಿ, ಹಿಂದುಳಿದ ವರ್ಗದ ಅಭಿವೃದ್ಧಿಗಾಗಿ ನಿಸ್ವಾರ್ಥವಾಗಿ ಯೋಚನೆ ಮಾಡಿರುವ ಮಾಜಿ ಮುಖ್ಯಮಂತ್ರಿ ದೇವರಾಜ್ ಅರಸುರವರು ನಡೆದ ದಾರಿಯಯಲ್ಲಿ ಕೋಟ ಶ್ರೀನಿವಾಸ್ ಪೂಜಾರಿಯವರು ಕೂಡಾ ನಡೆಯುತ್ತಿದ್ದಾರೆ. ಉಡುಪಿ ಜಿಲ್ಲೆ ಕಂಡ ಪ್ರಾಮಾಣಿಕ ಸರಳ ಸಜ್ಜನ ಸಚಿವರಾದ ಕೋಟ ಶ್ರೀನಿವಾಸ್ ಪೂಜಾರಿಯವರ ರೀತಿ ನಾವೆಲ್ಲರೂ ಹಿರಿಯರು ನಡೆದಂತಹ ದಾರಿಯಲ್ಲಿ ನಡೆಯುವ ಅವಶ್ಯಕತೆ ಇದೆ. ಮಹಾಪುರುಷರ ದಿನಾಚರಣೆಯನ್ನು ಕೇವಲ ಕಾರ್ಯಕ್ರಮಕ್ಕಾಗಿ ಅಥವಾ ಆಡಂಬರಕ್ಕಾಗಿ ಮಾಡಬಾರದು ಅವರು ನಡೆದ ದಾರಿಯಲ್ಲಿ ನಡೆಯಬೇಕು ಎಂದರು.

ಈ ದೇಶದ ದೊಡ್ಡ ಸಮಸ್ಯೆಯಾದ ಭ್ರಷ್ಟಾಚಾರವನ್ನು ದೂರ ಮಾಡಬೇಕಾದರೆ ನಾವು ಈಗಿನಿಂದಲೇ ಪ್ರಾಮಾಣಿಕತೆಯನ್ನು ಮೈಗೂಡಿಸಿಕೊಳ್ಳಬೇಕು. ಪರರ ಹಣ, ಆಸ್ತಿಯಿಂದ ನಾವು ದೂರ ಇರಬೇಕು. ಅದರ ಮೇಲೆ ಆಸೆ ಪಟ್ಟರೆ ನಾವು ಭ್ರಷ್ಟಾಚಾರಿಗಳಾಗುತ್ತೇವೆ. ರಾಜಕೀಯ ಕ್ಷೇತ್ರ ನಿಸ್ವಾರ್ಥ ಪರವಾದಾಗ ಸಹಕಾರ ಸಾಧ್ಯವಿದೆ. ಈ ಮೂಲಕ ದೇಶಕ್ಕೋಸ್ಕರ ಜೀವ ಮತ್ತು ಜೀವನ ಕೊಟ್ಟವರ ದಿನಾಚರಣೆಯನ್ನು ನೆನಪು ಮಾಡುವುದರಲ್ಲಿ ಸಾರ್ಥಕತೆ ಕಾಣಬೇಕು ಎಂದರು.

ಈ ಸಂದರ್ಭದಲ್ಲಿ ಹಿಂದುಳಿದ ವರ್ಗದ ಕಲ್ಯಾಣಾಧಿಕಾರಿ ಸಚಿನ್ ಕುಮಾರ್, ಜಿ ಶಂಕರ್ ಕಾಲೇಜಿನ ಪ್ರಾಂಶುಪಾಲ ಭಾಸ್ಕರ್, ಸಮಿತಿಯ ಸದಸ್ಯ ತಿಮ್ಮಪ್ಪ ಮಾಸ್ಟರ್ ಹಾಗೂ ಹಿಂದುಳಿದ ವರ್ಗದ ಮಂಜುನಾಥ್ ಉಪಸ್ಥಿತರಿದ್ದರು.