ಶಾಲಾ ಕಾಲೇಜುಗಳಲ್ಲಿ ಸರಣಿ ಕಳ್ಳತನ ಪ್ರಕರಣ: ಆರೋಪಿಗಳ ಬಂಧನ

ಕೋಟ: ಶಾಲಾ ಕಾಲೇಜುಗಳಲ್ಲಿನ ಕಳವು ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಕೋಟ ಪೊಲೀಸರು ಸೋಮವಾರ ಆವರ್ಸೆ ಗ್ರಾಮದ ಬಳಿಯಿಂದ ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ತಮಿಳುನಾಡು ರಾಜ್ಯದ ಸೇಲಂ ನಿವಾಸಿ ಕುಮಾರಸ್ವಾಮಿ(59) ಹಾಗೂ ಪಡುಬಿದ್ರಿ ಹೆಜಮಾಡಿ ಎಸ್.ಎಸ್ ರಸ್ತೆಯ ಜಾಹೀದ್ ಸಿನಾನ್(32) ಎಂದು ಗುರುತಿಸಲಾಗಿದೆ.

ಆರೋಪಿಗಳಿಂದ ಬೈಕ್, ಮೊಬೈಲ್ ಹಾಗೂ10,000ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಕಳೆದ 5-6 ತಿಂಗಳಿನಿಂದ

ಶಾಲಾ ಕಾಲೇಜುಗಳಿಗೆ ನುಗ್ಗಿ ಹಣ ಹಾಗೂ ಸೊತ್ತುಗಳನ್ನು ಕಳ್ಳತನ ಮಾಡುತ್ತಿರುವ ಬಗ್ಗೆ ಉಡುಪಿ ಜಿಲ್ಲೆಯ ಪ್ರತ್ಯೇಕ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದ್ದವು. ಈ ಬಗ್ಗೆ ವಿಶೇಷ ತಂಡ ರಚಿಸಿ ಆರೋಪಿಗಳ ಪತ್ತೆಗೆ ಇಲಾಖೆ ಇಳಿದಿದ್ದು ಶಾಲಾ ಕಾಲೇಜುಗಳ ಮಾಹಿತಿ, ಅಪರಾಧ ನಡೆದ ದಿನಾಂಕ ಹಾಗೂ ಇನ್ನಿತರ ಮಾಹಿತಿಯನ್ನು ಸಂಗ್ರಹಿಸಿ, ಸಿಸಿ ಟಿವಿ ಕ್ಯಾಮೆರಾ , ಲಾಡ್ಜ್ , ಜೈಲಿನಿಂದ ಬಿಡುಗಡೆಯಾದ ಕಳ್ಳತನ ಪ್ರಕರಣದ ಆರೋಪಿಗಳ ಮಾಹಿತಿ ಮತ್ತು ಇತರ ತಾಂತ್ರಿಕ ಮಾಹಿತಿ ಕಲೆಹಾಕಿ ಆರೋಪಿಗಳನ್ನು ಬಂಧಿಸಲಾಗಿದೆ.

ಆರೋಪಿ ಕುಮಾರಸ್ವಾಮಿ ಭಟ್ಕಳ ನಗರ ಠಾಣೆಯಲ್ಲಿ 5 ಮನೆಗಳಲ್ಲಿ ಕಳ್ಳತನ, ಹೊನ್ನಾವರ ಠಾಣೆಯಲ್ಲಿ 4 ಮನೆಗಳಲ್ಲಿ ಕಳ್ಳತನ, ಹಾಸನ ಜಿಲ್ಲೆ ಬೇಲೂರು ಠಾಣೆಯಲ್ಲಿ 4 ಮನೆಗಳಲ್ಲಿ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದು, ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯದಿಂದ ಶಿಕ್ಷೆಗೆ ಒಳಪಟ್ಟು 2014 ರಿಂದ 2021 ರವರೆಗೆ ಸುಮಾರು 7 ವರ್ಷಗಳ ಕಾಲ ಕಾರವಾರ ಜೈಲಿನಲ್ಲಿದ್ದು ಶಿಕ್ಷೆ ಅನುಭವಿಸಿದ್ದಾನೆ.

ಮತ್ತೊಬ್ಬ ಆರೋಪಿ ಜಾಹೀದ ಸಿನಾನ್ ಕಳ್ಳತನ ನಡೆಸುವುದಕ್ಕಾಗಿಯೇ ಉಡುಪಿ ಸಂತೆಕಟ್ಟೆ ಬಳಿ ಬಾಡಿಗೆ ಮನೆಯನ್ನು ಮಾಡಿಕೊಂಡಿದ್ದನು. ಹಳೇ ಕಳ್ಳ ಕುಮಾರಸ್ವಾಮಿ ಜೊತೆ ಸೇರಿ ಕಳ್ಳತನ ಮಾಡುತ್ತಿದ್ದನು.

ಕುಮಾರಸ್ವಾಮಿ 2021ರಲ್ಲಿ ಕಾರವಾರ ಜೈಲಿನಿಂದ ಬಿಡುಗಡೆಯಾದ ನಂತರ ಹೆಜಮಾಡಿಯ ಜಾಹೀದ್ ಸಿನಾನ್ ಜೊತೆ ಸೇರಿ ಉಡುಪಿ, ಉತ್ತರ ಕನ್ನಡ ಶಿವಮೊಗ್ಗ , ದಕ್ಷಿಣ ಕನ್ನಡದಲ್ಲಿ ಸುಮಾರು 37 ಕಡೆ ಶಾಲಾ- ಕಾಲೇಜಿಗಳಿಗೆ ನುಗ್ಗಿ ಕಳ್ಳತನ ಮಾಡಿದ್ದನು.

ಇಬ್ಬರೂ ಉಡುಪಿ ಜಿಲ್ಲೆಯ ಬೈಂದೂರು, ಕೊಲ್ಲೂರು, ಶಂಕರನಾರಾಯಣ, ಕುಂದಾಪುರ, ಬ್ರಹ್ಮಾವರ, ಹಿರಿಯಡ್ಕ, ಉಡುಪಿ ನಗರ, ಮಲ್ಪೆ, ಕಾರ್ಕಳ, ಪಡುಬಿದ್ರೆ ಠಾಣಾ ವ್ಯಾಪ್ತಿಯ ಒಟ್ಟು 27 ಕಡೆ ಶಾಲಾ ಕಾಲೇಜುಗಳಿಗೆ ನುಗ್ಗಿ ಕಳ್ಳತನ ನಡೆಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ ಠಾಣೆಯಲ್ಲಿ 2 ಪ್ರಕರಣ, ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ, ಹೊಸನಗರ, ರಿಪ್ಪನಪೇಟೆ, ನಗರ ಠಾಣೆಗಳಲ್ಲಿ 6 ಪ್ರಕರಣ, ಉತ್ತರ ಕನ್ನಡ ಜಿಲ್ಲೆಯ ಮುರ್ಡೇಶ್ವರ ಠಾಣೆಯಲ್ಲಿ 2 ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿ ಎಲ್ಲ ಪ್ರಕರಣಗಳನ್ನು ಭೇದಿಸಿದ್ದಾರೆ.