ಕುಂದಾಪುರ: ಇಡೀ ಜಿಲ್ಲೆಯನ್ನೇ ಬೆಚ್ಚಿಬೀಳಿಸಿದ್ದ ಕೋಟ ಜೋಡಿ ಕೊಲೆ ಪ್ರಕರಣದಲ್ಲಿ ಸಂಚು ರೂಪಿಸಿದ ಆರೋಪ ಮೇಲೆ ಜೈಲುವಾಸ ಅನುಭವಿಸಿ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದ ಜಿಲ್ಲಾ ಪಂಚಾಯತ್ ಸದಸ್ಯ ಆರೋಪಿ ರಾಘವೇಂದ್ರ ಕಾಂಚನ್ ಬಾರಿಕೆರೆ ಮತ್ತೆ ಜೈಲು ಸೇರಿದ್ದಾನೆ.
ಈ ಹಿಂದೆ ಆರೋಪಿ ರಾಘವೇಂದ್ರ ಕಾಂಚನ್ ಪಡೆದ ಜಾಮೀನು ಸರ್ವೋಚ್ಚ ನ್ಯಾಯಾಲಯದಲ್ಲಿ ವಜಾಗೊಂಡಿತ್ತು. ಆದೇಶವಾಗಿ ಹದಿನೈದು ದಿನ ಕಳೆದರೂ ಪೊಲೀಸರು ಆತನನ್ನು ಬಂಧಿಸಿರಲಿಲ್ಲ. ಈ ಬಗ್ಗೆ ಮೃತರ ಮನೆಯವರು ಹೋರಾಟದ ಎಚ್ಚರಿಕೆ ನೀಡಿದ್ದರು. ಶುಕ್ರವಾರ ಕುಂದಾಪುರ ವಿಚಾರಣೆಗಾಗಿ ಜೋಡಿ ಕೊಲೆ ಪ್ರಕರಣದ ಎಲ್ಲಾ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಈ ವೇಳೆಯಲ್ಲಿ ವಕೀಲರ ಮೂಲಕ ಆಗಮಿಸಿದ ರಾಘವೇಂದ್ರ ಕಾಂಚನ್ ನ್ಯಾಯಾಲಯಕ್ಕೆ ಶರಣಾಗಿದ್ದಾನೆ. ಆರೋಪಿ ರಾಘವೇಂದ್ರ ಕಾಂಚನ್‌ಗೆ ನ್ಯಾಯಾಂಗ ಬಂಧನ ವಿಧಿಸಲಾಗಿದ್ದು, ಆತನನ್ನು ಹಿರಿಯಡ್ಕ ಕಾರಾಗೃಹಕ್ಕೆ ರವಾನಿಸಲಾಗಿದೆ.
ಕಳೆದ ವರ್ಷ ಜನವರಿ ೨೬ರಂದು ರಾತ್ರಿ ಸುಮಾರು ೧೦.೩೦ರ ಸುಮಾರಿಗೆ ಭರತ್ ಮತ್ತು ಆತನ ಸ್ನೇಹಿತ ಯತೀಶನನ್ನು ಕೊಲೆ ಮಾಡಲಾಗಿತ್ತು. ಇದರಲ್ಲಿ ಭಾಗಿಯಾದ ೧೮ ಮಂದಿ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಕೆಲವು ಆರೋಪಿಗಳು ನ್ಯಾಯಾಲಯದಲ್ಲಿ ಜಾಮೀನು ಪಡೆದಿದ್ದರು. ಅಲ್ಲದೇ ಜಿಲ್ಲಾ ಪಂಚಾಯತ್ ಸದಸ್ಯನಾದ ರಾಘವೇಂದ್ರ ಕಾಂಚನ್ ಉಚ್ಛ ನ್ಯಾಯಾಲಯದಲ್ಲಿ ಜಾಮೀನು ಪಡೆದಿದ್ದನು. ಜೋಡಿ ಕೊಲೆಯ ಪ್ರಕರಣಕ್ಕೆ ಸಂಬಂಧಿಸಿ ಸಂಚು ರೂಪಿಸಿದ್ದಾರೆ ಎನ್ನುವ ಬಲವಾದ ಕಾರಣವಿದ್ದರೂ ಹೈಕೋರ್ಟಿನಲ್ಲಿ ಜಾಮೀನು ನೀಡಿದ್ದನ್ನು ಪ್ರಶ್ನಿಸಿ ಹತ್ಯೆಯಾದ ಭರತ್ ತಾಯಿ ಸರ್ವೋಚ್ಛ ನ್ಯಾಯಾಲಯದ ಮೆಟ್ಟಿಲೇರಿದ್ದರು. ಪ್ರಕರಣದ ತನಿಖೆ ನಡೆಸಿದ್ದ ನ್ಯಾಯಮೂರ್ತಿಗಳ ದ್ವಿಸದಸ್ಯ ಪೀಠ ರಾಘವೇಂದ್ರ ಕಾಂಚನ್ ಬಾರಿಕೆರೆ ಅವರ ಜಾಮೀನು ತಿರಸ್ಕೃತಗೊಳಿಸಿತು. ಅಲ್ಲದೇ ರಾಘವೇಂದ್ರ ಕಾಂಚನ್‌ನನ್ನು ಬಂಧಿಸುವಂತೆ ಪೊಲೀಸರಿಗೆ ನ್ಯಾಯಾಲಯ ಸೂಚನೆಯನ್ನು ನೀಡಿತ್ತು.
ಸುಪ್ರೀಂ ಕೋರ್ಟ್‌ನಲ್ಲಿ ಜಾಮೀನು ಅರ್ಜಿ ತಿರಸ್ಕೃತಗೊಂಡ ಬೆನ್ನಲ್ಲೇ ಆರೋಪಿ ರಾಘವೇಂದ್ರ ಕಾಂಚನ್ ತಲೆಮರೆಸಿಕೊಂಡಿದ್ದು, ಪೊಲೀಸರು ಆತನಿಗಾಗಿ ತೀವ್ರ ಶೋಧ ನಡೆಸಿದ್ದರು. ಆರೋಪಿಯನ್ನು ರಾಜಕೀಯ ಒತ್ತಡದಿಂದ ಪೊಲೀಸರು ಬಂಧಿಸಿಲ್ಲ ಎಂದು ಕೊಲೆಯಾದ ಯುವಕರ ಕುಟುಂಬಿಕರು ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದರು. ಅಲ್ಲದೆ ಫೆ.೭ರೊಳಗೆ ಆರೋಪಿಯನ್ನು ಬಂಧಿಸದಿದ್ದರೆ ಉಡುಪಿ ಎಸ್ಪಿ ಕಚೇರಿಯೆದುರು ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸುವ ಎಚ್ಚರಿಕೆ ಕೂಡ ನೀಡಿದ್ದರು.
ಇದೀಗ ಎಲ್ಲಾ ಆರೋಪಿಗಳ ವಿಚಾರಣೆಯ ದಿನವಾದ ಶುಕ್ರವಾರ ನ್ಯಾಯವಾದಿ ರವಿಕಿರಣ್ ಮುರ್ಡೇಶ್ವರ್ ಅವರ ಮೂಲಕ ರಾಘವೇಂದ್ರ ಬಾರಿಕೆರೆ ನ್ಯಾಯಾಲಯಕ್ಕೆ ಶರಣಾಗಿದ್ದಾನೆ. ನ್ಯಾಯಾಲಯವು ಎಪ್ರಿಲ್ ೧ರಂದು ಮತ್ತೆ ವಿಚಾರಣೆ ದಿನಾಂಕ ನಿಗಧಿಪಡಿಸಿದ್ದು, ಅಲ್ಲಿಯವರೆಗೆ ಆತನಿಗೆ ನ್ಯಾಯಾಂಗ ಬಂಧನ ವಿಧಿಸಿ ಹಿರಿಯಡ್ಕ ಜೈಲಿಗೆ ಕಳುಹಿಸಲಾಗಿದೆ.
ಈ ವೇಳೆಯಲ್ಲಿ ಉಡುಪಿ ಡಿವೈಎಸ್‌ಪಿ ಜೈಶಂಕರ್, ಬ್ರಹ್ಮಾವರ ಸರ್ಕಲ್ ಇನ್ಸ್‌ಪೆಕ್ಟರ್ ಅನಂತ ಪದ್ಮನಾಭ, ಕೋಟ ಎಸ್‌ಐ ನಿತ್ಯಾನಂದ ಗೌಡ ಇದ್ದರು.












