ಅಪಘಾತದಲ್ಲಿ ಅಗಲಿದ ಕಲಾವಿದರ ಕುಟುಂಬದ ನೆರವಿಗೆ ಫೆ. 3 ರಂದು ದಾನದೀವಿಗೆ

ಕೋಟ : ಇತ್ತೀಚೆಗೆ ರಸ್ತೆ ಅಪಘಾತದಲ್ಲಿ  ಅಗಲಿದ ಯಕ್ಷಗಾನ ಕಲಾವಿದರಾದ ರವಿರಾಜ ಜನ್ಸಾಲೆ, ಪ್ರಸನ್ನ ಆಚಾರ್ಯ ಹಾಗೂ ದಿನೇಶ್ ಹೆನ್ನಾಬೈಲು ಇವರ ಕುಟುಂಬಗಳಿಗೆ ಆರ್ಥಿಕ ಸಹಕಾರ ನೀಡುವ ನಿಟ್ಟಿನಲ್ಲಿ ಕರಾವಳಿ ಯಕ್ಷ ಸಂಘಟಕ ಮಿತ್ರರ ಆಶ್ರಯದಲ್ಲಿ ಫೆ.3 ರಂದು ರಾತ್ರಿ 8.30 ರಿಂದ  ಕೋಟೇಶ್ವರದಲ್ಲಿ ದಾನದೀವಿಗೆ ಎನ್ನುವ ವಿಶಿಷ್ಠ ಕಾರ್ಯಕ್ರಮ ನಡೆಯಲಿದೆ  ಎಂದು ಕಾರ್ಯಕ್ರಮದ ಸಂಘಟಕರಾದ ವಿಜಯ ಕುಮಾರ್ ಶೆಟ್ಟಿ ಯಳಂತೂರು ಬ್ರಹ್ಮಾವರದಲ್ಲಿ ನಡೆದ  ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ರವಿರಾಜ್ ಜನ್ಸಾಲೆ ಕಮಲಶಿಲೆ ಮೇಳದ ಸಂಗೀತಗಾರರಾಗಿದ್ದು ಕೋಟೇಶ್ವರದ ಸಮೀಪ ನಡೆದ ರಸ್ತೆ ದುರಂತದಲ್ಲಿ ಮೃತ ಪಟ್ಟಿದ್ದಾರೆ ಹಾಗೂ ಪ್ರಸನ್ನ ಆಚಾರ್‍ಯ ೧೩ವರ್ಷದಿಂದ ಸೌಕೂರು ಮೇಳದಲ್ಲಿ ದುಡಿಯುತ್ತಿದ್ದರು ಮತ್ತು ದಿನೇಶ್ ಹೆನ್ನಾಬಲು ಕೂಡ ಸೌಕೂರು ಮೇಳದಲ್ಲಿ ಸ್ತ್ರೀಪಾತ್ರಧಾರಿಯಾಗಿದ್ದು ಇವರಿಬ್ಬರು ಹೊನ್ನಾವರದ ಸಮೀಪ ನಡೆದ ರಸ್ತೆ ದುರಂತದಲ್ಲಿ  ಜತೆಯಾಗಿ ಸಾವನ್ನಪ್ಪಿದ್ದಾರೆ. ಮೃತ ಕಲಾವಿದರು  ಮನೆಗೆ ಆಧಾರಸ್ತಂಭದಂತಿದ್ದು, ಇದೀಗ ಇವರ ಕುಟುಂಬ ಸಂಕಷ್ಟಕ್ಕೆ ಸಿಲುಕಿದೆ. ಹೀಗಾಗಿ ಸಹಾಯ ಮಾಡುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಅಂದು ಯಕ್ಷರಂಗದ ಇತಿಹಾಸದಲ್ಲೇ ಪ್ರಥಮ ಬಾರಿಗೆ ಸಾಲಿಗ್ರಾಮ ಮೇಳ, ಜಲವಳ್ಳಿ ಮೇಳಗಳ ಕಲಾವಿದರು ಹಾಗೂ ಬಡಗಿನ ಪ್ರಸಿದ್ದ ೧೦೦ಕ್ಕೂ ಹೆಚ್ಚು ಕಲಾವಿದರ ಕೂಡುವಿಕೆಯಲ್ಲಿ  ಯಕ್ಷಗಾನ ಪ್ರದರ್ಶನ ನಡೆಯಲಿದೆ. ಇಲ್ಲಿ ಸಂಗ್ರಹವಾಗುವ ಹಣವನ್ನು ಸಂಪೂರ್ಣವಾಗಿ ಈ ಕಲಾವಿದರ ಕುಟುಂಬಕ್ಕೆ ನೀಡಲಾಗುತ್ತದೆ ಎಂದು ಸಂಘಟಕರಾದ ಉದಯ ಶೆಟ್ಟಿ ಪಡುಕರೆ ತಿಳಿಸಿದರು.

ಇದೊಂದು ಮಾನವೀಯ ನೆಲೆಯ ಕಾರ್ಯಕ್ರಮವಾಗಿದ್ದು  ಸಹಕಾರ ನೀಡುವವರು ಕರ್ಣಾಟಕ ಬ್ಯಾಂಕ್ ಗೋಳಿಯಂಗಡಿ – ಹಿಲಿಯಾಣ ಶಾಖೆಯ ದಾನದೀವಿಗೆ ಖಾತೆ ಸಂಖ್ಯೆ  -2742500100354101   ಗೆ   ಜಮಾ ಮಾಡಬಹುದು ಎಂದು ತಿಳಿಸಿದರು.

 ಪತ್ರಿಕಾಗೋಷ್ಟಿಯಲ್ಲಿ ವೈಕು ಸುಂದರ ಎತ್ತಿನಟ್ಟಿ, ರಾಘವೇಂದ್ರ ಚಾತ್ರಮಕ್ಕಿ,ಗಜೇಂದ್ರ ಆಚಾರ್ ಕೋಣಿ,  ಪ್ರಶಾಂತ ಮಲ್ಯಾಡಿ,  ಶ್ರೀಕಾಂತ್ ಆಚಾರ್ಯ ಕೋಟೇಶ್ವರ, ಅವಿನಾಶ್ ಶೆಟ್ಟಿ ದೊಡ್ಮನೆ  ಉಪಸ್ಥಿತರಿದ್ದರು.