ಕೋಟ ಅಮೃತೇಶ್ವರೀ ಮೇಳದ ಪ್ರಥಮ ದೇವರ ಸೇವೆ ಆಟ

ಉಡುಪಿ: ಶತಮಾನಗಳ ಇತಿಹಾಸ ಹೊಂದಿರುವ ಕೋಟ ಶ್ರೀಕ್ಷೇತ್ರದ ಅಮೃತೇಶ್ವರೀ ಹಲವು ಮಕ್ಕಳ ತಾಯಿ ಯಕ್ಷಗಾನ ಮೇಳದ ಪ್ರಥಮ ದೇವರ ಸೇವೆ ಆಟ ಶ್ರೀಕ್ಷೇತ್ರದಲ್ಲಿ ಭಕ್ತಿಭಾವದಿಂದ ನೆರವೇರಿತು.
ಬೆಳಿಗ್ಗೆ ಗಣಹೋಮ, ರಾತ್ರಿ ಗಣಪತಿ ಪೂಜೆ ಹಾಗೂ ಪ್ರಥಮ ದೇವರ ಸೇವೆ ನಡೆಯಿತು.

ಈ ಸಂದರ್ಭದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಕ್ಷೇತ್ರದ ವತಿಯಿಂದ ನೀಡಲಾಗುವ ದಿ. ನಾರ್ಣಪ್ಪ ಉಳ್ಳೂರ ಪ್ರಶಸ್ತಿಯನ್ನು ಬಿಳಾಲು ಕೊಪ್ಪದ ಸದಾನಂದ ಹೆಬ್ಬಾರ್ ಅವರಿಗೆ ಪ್ರದಾನ ಮಾಡಲಾಯಿತು. ಕೋಟ ವೈಕುಂಠ ಸ್ಮರಣಾರ್ಥ ಉಮೇಶ್ ರಾಜ್ ಬೆಂಗಳೂರು ಅವರು ನೀಡುವ ಕೋಟ ವೈಕುಂಠ ಪುರಸ್ಕಾರವನ್ನು ಹಳ್ಳಾಡಿ ಬಾಬು ಕುಲಾಲ್ ಅವರಿಗೆ ನೀಡಿ ಗೌರವಿಸಲಾಯಿತು.

ನಾಲ್ಕು ವರ್ಷಗಳವರೆಗೆ ಆಟಗಳಿಗೆ ಬುಕ್ಕಿಂಗ್:
ಅಮೃತೇಶ್ವರೀ ಮೇಳಕ್ಕೆ ಶತಮಾನಗಳ ಇತಿಹಾಸವಿದ್ದು, ಸಂತಾನ ಭಾಗ್ಯ, ಆರೋಗ್ಯ, ಶಿಕ್ಷಣ, ಉದ್ಯೋಗ ಹಾಗೂ ಕೌಟುಂಬಿಕ ನೆಮ್ಮದಿ ಸೇರಿದಂತೆ ವಿವಿಧ ಹರಕೆಗಳನ್ನು ಭಕ್ತರು ಮೇಳದ ಆಟದ ಮೂಲಕ ಸಮರ್ಪಿಸುತ್ತಾರೆ. ತಾಯಿಯ ಅನುಗ್ರಹದಿಂದ ತಮ್ಮ ಇಷ್ಟಾರ್ಥಗಳು ಈಡೇರಿದ ಹಿನ್ನೆಲೆಯಲ್ಲಿ ಭಕ್ತರು ಹರಿಕೆ ಆಟಗಳನ್ನು ಸೇವೆಯ ರೂಪದಲ್ಲಿ ಸಲ್ಲಿಸುತ್ತಿದ್ದಾರೆ.

ಪ್ರಸ್ತುತ ಮೇಳಕ್ಕೆ ಈಗಾಗಲೇ ನಾಲ್ಕು ವರ್ಷಗಳ ಅವಧಿಗೆ ಅನ್ವಯಿಸುವಂತೆ 600ಕ್ಕೂ ಅಧಿಕ ಆಟಗಳು ಬುಕ್ ಆಗಿವೆ. ಮುಂದಿನ ನಾಲ್ಕೈದು ವರ್ಷಗಳ ಬಳಿಕ ಬೆಳಕಿನ ಸೇವೆಯ ಯಕ್ಷಗಾನ ಬಯಲಾಟ ಆಡಿಸುವ ಉದ್ದೇಶ ಹೊಂದಿರುವ ಭಕ್ತರು ಈಗಲೇ ದಿನಾಂಕ ಕಾಯ್ದಿರಿಸಿಕೊಳ್ಳುವುದು ಸೂಕ್ತ. ಹರಿಕೆ ಆಟ ಸಲ್ಲಿಸಲಿಚ್ಛಿಸುವವರು ಶೀಘ್ರವಾಗಿ ದಿನಾಂಕ ಕಾಯ್ದಿರಿಸಿಕೊಳ್ಳುವಂತೆ ಕ್ಷೇತ್ರದ ವ್ಯವಸ್ಥಾಪನ ಸಮಿತಿ ತಿಳಿಸಿದೆ.