ಕೋಟ: ನೀರಿನ ತೋಡಿಗೆ ಬಿದ್ದು ಕೃಷಿ ಕಾರ್ಮಿಕ ಮೃತ್ಯು.

ಕುಂದಾಪುರ: ತೆಂಗಿನ ತೋಟದಲ್ಲಿ ಕಾಯಿ‌ ಕೊಯ್ದು ಸಾಗಾಟ ಮಾಡುವ ಕಾರ್ಯ ನಿರ್ವಹಿಸುತ್ತಿದ್ದ ಕಾರ್ಮಿಕ ಮಳೆಯಿಂದ ನೀರು ತುಂಬಿದ್ದ ತೋಡಿಗೆ ಕಾಲು ಜಾರಿ ಬಿದ್ದು ಮೃತಪಟ್ಟ ಘಟನೆ ಬೇಳೂರು ಗ್ರಾಮದ ಚಾಮ್ತಾಡಿ ಕೈಲೇರಿ ಸಮೀಪ ಬುಧವಾರ ನಡೆದಿದೆ.

ಮೃತಪಟ್ಟವರನ್ನು ಅಚ್ಲಾಡಿ ಅಂಬೇಡ್ಕರ್ ಕಾಲನಿ ನಿವಾಸಿ ಶರತ್ (32) ಎಂದು ಗುರುತಿಸಿದೆ. ಈತ ಸಹೋದರಿ, ತಾಯಿಯನ್ನು ಅಗಲಿದ್ದಾನೆ.

ಇವನು ಬುಧವಾರ ಮನೆ ಸಮೀಪದ ತೆಂಗಿನಕಾಯಿ ಗುತ್ತಿಗೆದಾರರ ಜತೆ ಅಚ್ಲಾಡಿಯ ತೋಟವೊಂದಕ್ಕೆ ಕೆಲಸಕ್ಕೆ ತೆರಳಿದ್ದು ಮರದಿಂದ ಕಾಯಿ ಕೊಯ್ದು ಟೆಂಪೋಗೆ ಲೋಡ್ ಮಾಡುವ ಸಂದರ್ಭದಲ್ಲಿ ನಾಪತ್ತೆಯಾಗಿದ್ದ ಹಾಗೂ ಎಲ್ಲ ಕಡೆ ಹುಡಯಕಿದರು ಪತ್ತೆಯಾಗಿರಲಿಲ್ಲ. ಅನಂತರ ಗುರುವಾರ ಅಪರಾಹ್ನ ಕೈಲೇರಿ ಸಮೀಪ ತೋಡಿನಲ್ಲಿ ಈತನ ಶವ ಪತ್ತೆಯಾಗಿದೆ. ಬುಧವಾರ ವಿಫರೀತ ಮಳೆ ಇದ್ದ ಕಾರಣ ತೋಡು ತುಂಬಿ ಹರಿಯುತ್ತಿತ್ತು. ಈ ಭಾಗದಲ್ಲಿ ರಸ್ತೆ ಕೂಡ ಮಳೆಯಿಂದ ಕೆಸರುಮಯವಾಗಿದ್ದು ಸಂಚರಿಸಲು ಅಸಾಧ್ಯ ಸ್ಥಿತಿ ಇದೆ. ಹೀಗಾಗಿ ಕಾಯಿ ಕೊಯ್ದು ಟೆಂಪೋಗೆ ಸಾಗಿಸುತ್ತಿದ್ದ ಶರತ್ ಕಾಲು ಜಾರಿ ತೋಡಿಗೆ ಬಿದ್ದಿದ್ದು ಯಾರೂ ಗಮನಿಸದೆ ಮುಳುಗಿ ಮೃತಪಟ್ಟಿದ್ದಾನೆ.