ಉಡುಪಿ: ಗುಣಮಟ್ಟದ ವಸ್ತುಗಳನ್ನು ನ್ಯಾಯೋಚಿತ ಬೆಲೆಗೆ ಸಂತೆಗೆ ಬರುವ ಗ್ರಾಹಕರಿಗೆ ನೀಡಿ ವಿಶ್ವಾಸಗಳಿಸಿ ಎಂದು ಅಲೆವೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಪುಷ್ಪಾ ಅಂಚನ್ ವ್ಯಾಪಾರಿಗಳಿಗೆ ಸಲಹೆ ನೀಡಿದರು.
ಅಲೆವೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊರಂಗ್ರಪಾಡಿ ವಿಜಯ ಬ್ಯಾಂಕ್ ಬಳಿ ಪ್ರತಿ ಮಂಗಳವಾರ ನಡೆಯಲಿರುವ ವಾರದ ಸಂತೆಯನ್ನು ಇಂದು ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಮಾತನಾಡಿ, ಅಭಿವೃದ್ಧಿ ಹೊಂದುತ್ತಿರುವ ಕೊರಂಗ್ರಪಾಡಿ ಗ್ರಾಮದಲ್ಲಿ ಗ್ರಾಪಂ ನೂತನ ಆಡಳಿತ ಇನ್ನಷ್ಟು ಮಾದರಿ, ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ನಗರಸಭಾ ಸದಸ್ಯ ವಿಜಯ ಪೂಜಾರಿ, ಅಲೆವೂರು ಗ್ರಾಪಂ ಉಪಾಧ್ಯಕ್ಷ ಸುಧಾಕರ ಪೂಜಾರಿ, ಮಾಜಿ ಅಧ್ಯಕ್ಷ ಅಲೆವೂರು ಹರೀಶ್ ಕಿಣಿ, ಸದಸ್ಯರಾದ ಪ್ರವೀಣ್ ಶೆಟ್ಟಿ, ಶ್ಯಾಮಲ ಸುಧಾಕರ್, ಮನಮೋಹನ್, ಲಿಸ್ವಿಟಾ ಡೇಸಿ ಅಮ್ಮನ್ನ, ಅಮೃತಾ ಯು. ಪೂಜಾರಿ, ಯತೀಶ್ ಕುಮಾರ್, ಜಲೇಶ್ ಶೆಟ್ಟಿ, ರೂಪೇಶ್ ದೇವಾಡಿಗ, ಶಬರೀಶ್ ಸುವರ್ಣ, ರೇಣುಕ ಶೆಟ್ಟಿ, ಗೀತಾ ಶೆಟ್ಟಿಗಾರ್ ಸ್ಥಳೀಯ ಪ್ರಮುಖರಾದ ರಾಘ ಕೋಟ್ಯಾನ್, ವಸಂತ ಕೋಟ್ಯಾನ್, ಬೇಬಿ ಮೊದಲಾದವರು ಉಪಸ್ಥಿತರಿದ್ದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ದಯಾನಂದ ಬೆನ್ನೂರ್ ಕಾರ್ಯಕ್ರಮ ನಿರೂಪಿಸಿದರು.