ಸರ್ಕಾರಿ ಉದ್ಯೋಗದಲ್ಲಿ ನೇರ ನೇಮಕಾತಿ ಬಯಸುವ ಕೊರಗ ಸಮುದಾಯದ ಬೇಡಿಕೆಯ ಕುರಿತು ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಗಳಿಗೆ ಮಂಜುನಾಥ ಭಂಡಾರಿ ಪತ್ರ

ಬೆಂಗಳೂರು: ಸರ್ಕಾರಿ ಉದ್ಯೋಗದಲ್ಲಿ ನೇರ ನೇಮಕಾತಿಗಾಗಿ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ ಕರ್ನಾಟಕ ಕೇರಳ ವತಿಯಿಂದ ಕೊರಗ ಸಮುದಾಯದವರು ಮಣಿಪಾಲದಲ್ಲಿರುವ ಉಡುಪಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಕಪ್ಪುಪಟ್ಟಿ ಧರಿಸಿ ನಡೆಸುತ್ತಿರುವ ಅಹೋರಾತ್ರಿ ಧರಣಿ ಸೋಮವಾರ 15ನೇ ದಿನಕ್ಕೆ ಕಾಲಿರಿಸಿದ್ದು, ಧರಣಿ ಇನ್ನೂ ಮುಂದುವರಿದಿದೆ.

ಈ ಕೊರಗ ಸಮುದಾಯದ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಿ ಉದ್ಯೋಗದಲ್ಲಿ ನೇರ ನೇಮಕಾತಿಗಾಗಿ ಕೊರಗ ಸಮುದಾಯದ ಬೇಡಿಕೆ ಕುರಿತು ಇಲಾಖಾ ಮಟ್ಟದಲ್ಲಿ ಪರಿಶೀಲಿಸಿ ಅಗತ್ಯ ಕ್ರಮವಹಿಸುವಂತೆ ಮತ್ತು ಈ ಮೂಲಕ ಕರಾವಳಿಯ ಮೂಲನಿವಾಸಿಗಳಾದ ಕೊರಗ ಸಮುದಾಯದ ಉನ್ನತಿಗಾಗಿ ಪರಿಣಾಮಕಾರಿ ತುರ್ತು ಸುಧಾರಣೆ ಪ್ರಕ್ರಿಯೆಯನ್ನು ಅನುಷ್ಠಾನಿಸುವಂತೆ ಇಲಾಖಾಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಶಾಸಕ ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ.

ಸದ್ರಿ ಒಕ್ಕೂಟದ ಸಂಚಾಲಕ ಕೆ. ಪುತ್ರನ್ ಮಾತನಾಡಿ ಕೊರಗ ಸಮುದಾಯದ ಯುವ ಜನರಲ್ಲಿ ಈಗಲೂ, ಹಿಂಜರಿಕೆ. ಕೀಳರಿಮೆ ಇದ್ದು ಅವರು ಕೆಲವೊಂದು ಪರೀಕ್ಷೆಗಳಲ್ಲಿ ತೇರ್ಗಡೆಯಾಗುತ್ತಿಲ್ಲ. ಈ ಕಾರಣಕ್ಕೆ ಕೊರಗರಿಗೆ ನೇರ ನೇಮಕಾತಿ ಮಾಡಬೇಕು ಎಂದು ಆಗ್ರಹಿಸಿರುತ್ತಾರೆ ಕೊರಗ ಸಮುದಾಯದ ಯುವಕರು ಪದವಿ ಸಹಿತ ಉನ್ನತ ವಿದ್ಯಾವಂತರಾಗಿದ್ದರೂ ಪುರಸಭೆಯಲ್ಲಿ ಪೌರ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. ನೇರ ನೇಮಕಾತಿ ಪಡೆದವರಿಗೆ ಉತ್ತಮ ಶಿಕ್ಷಣ ನೌಕರಿ ಸಿಗಬೇಕೆಂದು ಪ್ರತಿಭಟನೆ ಮಾಡುತ್ತಿದ್ದಾರೆ. ಈ ಹಿಂದೆ ಪ್ರತಿಭಟನೆ ನಡೆಸಿದ್ದಾಗ ನೇಮಕಾತಿ ನಡೆಸುವ ಭರವಸೆಯನ್ನು ಸರಕಾರ ನೀಡಿದ್ದರೂ ಅದು ಇದುವರೆಗೂ ಈಡೇರಿಲ್ಲವೆಂದು ನಿರಾಸೆ ವ್ಯಕ್ತಪಡಿಸಿದ್ದಾರೆ.

ಇಂದಿನ ಸ್ಪರ್ಧಾತ್ಮಕ ಸಂದರ್ಭದಲ್ಲಿ ಉದ್ಯೋಗ ಪಡೆಯುವುದು ಹೇಗೆ ಎಂಬುದೇ ಕೊರಗ ಸಮುದಾಯದವರಿಗೆ ಗೊತ್ತಾಗುತ್ತಿಲ್ಲ. ಖಾಸಗಿಯವರೂ ಕೆಲಸ ಕೊಡುವುದಿಲ್ಲ. ಸರ್ಕಾರಿ ಉದ್ಯೋಗವೂ ಸಿಗುವುದಿಲ್ಲ ಎಂದು ಸಮುದಾಯದ ಪ್ರವೀಣ್ ತಿಳಿಸಿರುವ ಬಗ್ಗೆ ಮಾದ್ಯಮಗಳಲ್ಲಿ ವರದಿಯಾಗಿದೆ. ಹಾಗಾಗಿ ಈ ಸಮುದಾಯದ ಬೇಡಿಕೆಗಳನ್ನು ಈಡೇರಿಸಬೇಕು ಎಂದವರು ಮುಖ್ಯಮಂತ್ರಿಗಳಲ್ಲಿ ವಿನಂತಿಸಿದ್ದಾರೆ.