ಎ.26ಕ್ಕೆ ಉದ್ಯಾವರದಲ್ಲಿ ಕೊಂಕಣಿ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ, ಪುಸ್ತಕ ಪುರಸ್ಕಾರ ಪ್ರದಾನ ಕಾರ್ಯಕ್ರಮ

ಉಡುಪಿ: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ 2025ನೇ ಸಾಲಿನ ಗೌರವ ಪ್ರಶಸ್ತಿ ಹಾಗೂ ಪುಸ್ತಕ ಪುರಸ್ಕಾರ ಪ್ರದಾನ ಕಾರ್ಯಕ್ರಮವು ಇದೇ ಎ.26ರಂದು ಸಂಜೆ 5 ಗಂಟೆಗೆ ಉದ್ಯಾವರ ಚರ್ಚ್ ವಠಾರದಲ್ಲಿ ನಡೆಯಲಿದೆ ಎಂದು ಅಕಾಡೆಮಿ ಅಧ್ಯಕ್ಷ ಜೋಕಿಂ ಸ್ಟ್ಯಾನಿ ಅಲ್ವಾರಿಸ್ ಹೇಳಿದರು.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ್ ಎಸ್ ತಂಗಡಗಿ ಕಾರ್ಯಕ್ರಮ ಉದ್ಘಾಟಿಸಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಹಾಗೂ ಉಡುಪಿ ಕಥೊಲಿಕ್ ಧರ್ಮಪ್ರಾಂತ್ಯದ ನಿವೃತ್ತ ಧರ್ಮಾಧ್ಯಕ್ಷ ಡಾ. ಜೆರಾಲ್ಡ್ ಐಸಾಕ್ ಲೋಬೊ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.

2025ನೇ ಸಾಲಿನ ಗೌರವ ಪ್ರಶಸ್ತಿಗೆ ಕೊಂಕಣಿ ಸಾಹಿತ್ಯ ವಿಭಾಗದಲ್ಲಿ ರೊನ್ ರೊಚ್ ಕಾಸ್ಸಿಯಾ, ಕೊಂಕಣಿ ಕಲೆ ವಿಭಾಗದಲ್ಲಿ ರಾಮದಾಸ ದತ್ತಾತ್ರೇಯ ಗುಲ್ವಾಡಿ ಹಾಗೂ ಕೊಂಕಣಿ ಜಾನಪದ ವಿಭಾಗದಲ್ಲಿ ಸೈರು (ಮುರಳೀಧರ) ಪುತ್ತು ನಾಯ್ಕ್ ಅವರು ಆಯ್ಕೆಯಾಗಿದ್ದಾರೆ.

2025ನೇ ಸಾಲಿನ ಪುಸ್ತಕ ಪುರಸ್ಕಾರಕ್ಕೆ ಕೊಂಕಣಿ ಕವನ ವಿಭಾಗದಲ್ಲಿ ಕವಿ – ಅಂದ್ರೂ ಎಲ್. ಡಿಕುನ್ಹಾ ಅವರ ‘ಉಜ್ವಾಡಾಚ್ಯೆ ವೆಂಗೆಂತ್’ ಪುಸ್ತಕ, ಕೊಂಕಣಿ ಲೇಖನ ವಿಭಾಗದಲ್ಲಿ ರೋಶನ್ ಮೆಲ್ಕಿ ಸಿಕ್ಕೇರಾ ಅವರ ‘ಕೊಂಕ್ಣಿ ಸರ್ಕಸ್’ ಪುಸ್ತಕಕೊಂಕಣಿ ಸಣ್ಣಕಥೆಗಳ ವಿಭಾಗದಲ್ಲಿ ರಿಚರ್ಡ್ ಅಲ್ವಾರಿಸ್ ಅವರ “ಫಿತುರಿ” ಪುಸ್ತಕ ಆಯ್ಕೆಯಾಗಿದೆ.

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಖಾರ್ವಿ, ಸಿದ್ದಿ, ಕುಡುಬಿ ಸಮುದಾಯದ ಸಾಂಸ್ಕೃತಿಕ ನೃತ್ಯ, ಬ್ರಾಸ್ ಬ್ಯಾಂಡ್ ಹಾಗೂ ಕೊಂಕಣಿ ಸಂಗೀತ ರಸಮಂಜರಿ ಕಾರ್ಯಕ್ರಮ ಜರುಗಲಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಅಕಾಡೆಮಿ ಸದಸ್ಯರಾದ ನವೀನ್ ಲೋಬೊ, ಪರಿಚಯ ಸಂಘಟನೆಯ ಪ್ರಕಾಶ್ ನೊರೊನ್ಹಾ, ನಿರಂತರ್ ಉದ್ಯಾವರ ಸಂಘಟನೆಯ ಸ್ಟೀವನ್ ಕುಲಾಸೊ, ಉದ್ಯಾವರ ಚರ್ಚಿನ ಉಪಾಧ್ಯಕ್ಷರಾದ ಮೆಲ್ವಿನ್ ನೊರೊನ್ಹಾ, ಕಾರ್ಯದರ್ಶಿ ವಿಲ್ಫ್ರೇಡ್ ಡಿಸೋಜಾ ಉಪಸ್ಥಿತರಿದ್ದರು.