ಶ್ರೀಮತಿ ಐರಿನ್ ಪಿಂಟೋ ಇವರಿಗೆ ಕೊಂಕಣಿ ಲೇಖಕ ಸಂಘ ಪ್ರಶಸ್ತಿ

ಮಂಗಳೂರು: ಇಲ್ಲಿನ ಬಲ್ಮಠದಲ್ಲಿ ಕಾರ್ಯನಿರ್ವಹಿಸುತ್ತಿರುವ ಕೊಂಕಣಿ ಲೇಖಕರ ಸಂಘವು ಕೊಡಮಾಡುವ ಕೊಂಕಣಿ ಲೇಖಕ ಸಂಘ ಪ್ರಶಸ್ತಿ-2023 ಅನ್ನು ಕೊಂಕಣಿ ಲೇಖಕಿ ಶ್ರೀಮತಿ ಐರಿನ್ ಪಿಂಟೋ ಇವರಿಗೆ ನಂತೂರು ಬಜ್ಜೋಡಿಯಲ್ಲಿರುವ ಸಂದೇಶ ಪ್ರತಿಷ್ಠಾನ ಸಭಾಂಗಣಾದಲ್ಲಿ ಫೆ.25 ರಂದು ಸಂಜೆ 6.30 ಕ್ಕೆ ನೀಡಲಾಗುವುದು ಎಂದು ಕಾರ್ಯಕ್ರಮದ ಸಂಚಾಲಕ ರಿಚರ್ಡ್ ಮೋರಾಸ್ ತಿಳಿಸಿದರು.

ಅವರು ಮಂಗಳವಾರದಂದು ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಪ್ರಶಸ್ತಿಯು 25000 ರೂ ನಗದು, ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆಯನ್ನು ಒಳಗೊಂಡಿದೆ ಎಂದು ತಿಳಿಸಿದರು.

‘ರಾಕ್ಣೋ’ ವಾರ ಪತ್ರಿಕೆಯ ಮಾಜಿ ಸಂಪಾದಕ ರೆ.ಫಾ ಫ್ರಾನ್ಸಿಸ್ ರೊಡ್ರಿಗಸ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ಕಾಸರಗೋಡು ಸರ್ಕಾರಿ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ. ರಾಧಾಕೃಷ್ಣ ಎನ್ ಬೆಳ್ಳೂರು ಗೌರವ ಅತಿಥಿಗಳಾಗಿ ಉಪಸ್ಥಿತರಿರಲಿದ್ದಾರೆ ಎಂದರು.

ಕೋರ್ ಕಮಿಟಿ ಸದಸ್ಯರಾದ ಡಾಲ್ಫಿ ಎಫ್ ಲೋಬೋ, ಜೆ.ಎಫ್ ಡಿಸೋಜಾ, ಡಾ.ಜೆರಾಲ್ಡ್ ಪಿಂಟೋ ಹಾಗೂ ಟೈಟಸ್ ನೊರೋನ್ಹಾ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.