ಕಾರ್ಕಳದಲ್ಲಿ ಕೊಂಕಣಿ ಸಾಹಿತ್ಯ ಅಕಾಡೆಮಿಯ ರಜತ ಮಹೋತ್ಸವ ಕಾರ್ಯಕ್ರಮ ಉದ್ಘಾಟನೆ

ಕಾರ್ಕಳ: ಯಾವುದೇ ಭಾಷೆಯ ಬಗ್ಗೆ , ಭಾಷೆಯನ್ನು ಮಾತನಾಡುವ ಜನರು ನಿರಭಿಮಾನ ಬೆಳೆಸಿಕೊಂಡಲ್ಲಿ ಆ ಭಾಷೆಯ ಅಳಿವು ಪ್ರಾರಂಭವಾಗಲಿದೆ  ಆದ್ದರಿಂದ ಜನರು ತಮ್ಮ ತಾವಾಡುವ ಭಾಷೆಯ ಬಗ್ಗೆ ಅಭಿಮಾನ ಬೆಳಸಿಕೊಳ್ಳಬೇಕು ಎಂದು ರಾಜ್ಯದ ಕನ್ನಡ ಮತ್ತು ಸಂಸ್ಕøತಿ ಸಚಿವ ಸಿ.ಟಿ. ರವಿ ಹೇಳಿದ್ದಾರೆ.

ಅವರು ಶನಿವಾರ, ಕಾರ್ಕಳದ ಎಸ್.ವಿ.ಟಿ. ವಿದ್ಯಾಸಂಸ್ಥೆ ಆವರಣದಲ್ಲಿ  ನಡೆದ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ರಜತ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಭಾಷೆ ಮತ್ತು ಸಂಸ್ಕøತಿ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ, ಭಾಷೆಯ ಉಳಿವಿನಿಂದ  ಸಂಸ್ಕøತಿ ಉಳಿಯಲಿದೆ, ಭಾರತದಲ್ಲಿ 1200 ಭಾಷೆಗಳಿದ್ದು, ಈ ಯಾವುದೇ ಭಾಷೆಗಳು ಒಂದರ ಬೆಳವಣಿಗೆಗೆ ಒಂದು ಪೂರಕವಾಗಿವೆ , ರಾಷ್ಟ್ರಾದ್ಯಂತ ಭಾಷಾ ವೈವಿಧ್ಯತೆಗಳಿದ್ದರೂ ಏಕತೆಯ ಭಾವನೆ ಇದೆ,  ಕೊಂಕಣಿ ಭಾಷೆಯನ್ನು ಕನ್ನಡ ಭಾಷೆ ಬೆಳೆಸಿದೆ, ಆದರೆ  ಜನರಲ್ಲಿನ ಇಂಗ್ಲೀಷ್ ಭಾಷೆಯ  ವ್ಯಾಮೋಹದಿಂದ ಪ್ರಾದೇಶಿಕ ಭಾಷೆಗಳಿಗೂ ಅಳಿವು ಉಳಿವಿನ ಸಮಸ್ಯೆ ಇದೆ ಎಂದು ಸಚಿವ ಸಿಟಿ ರವಿ ತಿಳಿಸಿದರು.

ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಕೊಂಕಣಿ ಭಾಷೆಯ 25 ಸಾಧಕರನ್ನು ಸನ್ಮಾನಿಸಲಾಯಿತು.

ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ, ಕಾರ್ಕಳ ಶಾಸಕ ವಿ.ಸುನೀಲ್ ಕುಮಾರ್,  ಸಮ್ಮೇಳನಾಧ್ಯಕ್ಷ , ಸಾಹಿತಿ ಗೋಕಲದಾಸ ಪ್ರಭು , ರಜತೋತ್ಸವ ಸಮಿತಿಯ ಗೌರವಾಧ್ಯಕ್ಷೆ ಸಂಧ್ಯಾ ಪೈ, ಸಾಮಾಜಿಕ ಕಾರ್ಯಕರ್ತ ದಿನೇಶ್ ಕಾಮತ್, ಅತ್ತೂರು ಸೈಂಟ್ ಲಾರೆನ್ಸ್ ಬಸಿಲಿಕಾದ ಧರ್ಮಾಧ್ಯಕ್ಷ ಜೋರ್ಜ್ ಡಿಸೋಜ, ಕೊಂಕಣಿ ಸಾಹಿತ್ಯ ಅಕಾಡೆಮಿಯ ರಿಜಿಸ್ಟ್ರಾರ್ ಕುಮಾರ ಬಾಬು ಬೆಕ್ಕೇರಿ, ಕೆ.ಪಿ.ಶೆಣೈ ಮತ್ತು ಕೊಂಕಣಿ ಸಾಹಿತ್ಯ ಅಕಾಡೆಮಿಯ ಸದಸ್ಯರುಗಳು ಉಪಸ್ಥಿತರಿದ್ದರು.

ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಡಾ.ಕೆ.ಜಗದೀಶ್ ಪೈ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು.