ಕೊಲ್ಲೂರು ಶ್ರೀ ಮೂಕಾಂಬಿಕೆ ಸನ್ನಿಧಾನದಲ್ಲಿ ಗಾನಗಂಧರ್ವ ಡಾ.ಕೆ.ಜೆ.ಯೇಸುದಾಸ್‌ ಹುಟ್ಟುಹಬ್ಬ ಆಚರಣೆ

ಕುಂದಾಪುರ : ದಕ್ಷಿಣ ಭಾರತದ ಪ್ರಸಿದ್ದ ಹಿನ್ನೆಲೆ ಗಾಯಕ ಪದ್ಮಭೂಷಣ ಡಾ.ಕೆ.ಜೆ.ಯೇಸುದಾಸ್‌ ಶುಕ್ರವಾರ ಕೊಲ್ಲೂರು ಶ್ರೀ ಮೂಕಾಂಬಿಕೆ ಸನ್ನಿಧಾನದಲ್ಲಿ ಅತ್ಯಂತ ಸರಳವಾಗಿ ತಮ್ಮ 80 ನೇ ಹುಟ್ಟು ಹಬ್ಬವನ್ನು ಆಚರಿಸಿಕೊಂಡರು.

ಗುರುವಾರ ಸಂಜೆ ಪತ್ನಿ ಪ್ರಭಾ ಯೇಸುದಾಸ್‌, ಪುತ್ರರಾದ ವಿಜಯ್‌ ಯೇಸುದಾಸ್‌, ವಿನೋದ್‌ ಯೇಸುದಾಸ್‌ ಹಾಗೂ ಕುಟುಂಬ ಸದಸ್ಯರೊಂದಿಗೆ ಕೊಲ್ಲೂರಿಗೆ ಬಂದಿದ್ದ ಅವರು, ಕ್ಷೇತ್ರದ ಅರ್ಚಕ ಎನ್‌.ಗೋವಿಂದ ಅಡಿಗ ಅವರ ಮಾರ್ಗದರ್ಶನದಲ್ಲಿ ಬೆಳಿಗ್ಗೆಯಿಂದಲೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಪ್ರತಿ ಬಾರಿಯಂತೆ ಈ ಬಾರಿಯೂ  ದೇವಿಗೆ ಚಂಡಿಕಾ ಹೋಮದ ಸೇವೆಯನ್ನು ಅರ್ಪಿಸಿದ್ದ ಅವರು, ಬಳಿಕ ಶ್ರೀ ದೇವಿಯ ದರ್ಶನ ಪಡೆದುಕೊಂಡು ಪ್ರಾರ್ಥನೆ ಸಲ್ಲಿಸಿದರು.

 

ದೇಗುಲದ ಗೌರವವನ್ನು ಸ್ವೀಕರಿಸಿ ಮಾತನಾಡಿದ ಅವರು, ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಬರುವುದರಿಂದ  ನನ್ನಲ್ಲಿ ಇರುವ ಶಕ್ತಿ ವೃದ್ಧಿಯಾಗುತ್ತದೆ. ನನ್ನಲ್ಲಿಯ ಶುದ್ಧವಾದ ಭಾಷೆ ಹಾಗೂ ಕಂಠ ಸಿರಿಗೆ ಶ್ರೀ ದೇವಿಯ ಅನುಗ್ರಹವೇ ಕಾರಣ. ನಿಷ್ಕಳಂಕ ಭಕ್ತಿ ಹಾಗೂ ಪ್ರೀತಿ ಇರುವಲ್ಲಿ ಭಗವಂತ ಇರುತ್ತಾನೆ. ದೇವರು, ಭಕ್ತರಿಂದ ಭಕ್ತಿಯನ್ನಲ್ಲದೆ, ನೀವು ಹುಂಡಿಕೆ ಎಷ್ಟು ಹಣ ಹುಂಡಿಗೆ ಹಾಕಿದ್ದೀರಿ ಎನ್ನುವುದನ್ನ ಕೇಳುವುದಿಲ್ಲ. ಜೀವನದಲ್ಲಿ ನಡೆ, ನುಡಿ ಎಲ್ಲವೂ ಶುದ್ಧವಾಗಿರಿಸಿಕೊಳ್ಳುವುದರಿಂದ ಸಾಧನೆಯನ್ನು ಮಾಡಿ, ಸಾಧಕರಾಗಲು ಸಾಧ್ಯ. ಸಂಕಲ್ಪಿಸಿದ ಕಾರ್ಯಗಳು ಸಿದ್ಧಿಸಬೇಕಾದರೆ ಭಗವಂತನಲ್ಲಿ ಪವಿತ್ರವಾದ ನಂಬಿಕೆಗಳನ್ನು ಇಡಬೇಕು. ಧರ್ಮ ಮಾರ್ಗವನ್ನು ಬಿಟ್ಟು ಅಧರ್ಮದಲ್ಲಿ ನಡೆದು, ಬಳಿಕ ಭಗವಂತನಲ್ಲಿ ಬಂದು ಪ್ರಾರ್ಥನೆಯನ್ನು ಸಲ್ಲಿಸುವುದರಿಂದ ಸಿದ್ಧಿ ಪಡೆಯಲು ಸಾಧ್ಯವಿಲ್ಲ. ಕೊಲ್ಲೂರಿನ ಮೂಕಾಂಬಿಕೆಯ ಸಾನಿಧ್ಯದಲ್ಲಿ ಶುದ್ಧವಾದ ಭಕ್ತಿಯನ್ನ ಇಡಿ ಎಂದು ಹೇಳಿದರು.

ಡಾ,ಯೇಸುದಾಸ್‌ ಅವರ 80 ನೇ ಜನ್ಮದಿನಾಚರಣೆಯ  ಅಂಗವಾಗಿ ಸಂಗೀತ ರತ್ನ ಕಾಞಂಗಾಡು ಡಾ.ರಾಮಚಂದ್ರನ್ ಹಾಗೂ ಇತರ ಕಲಾವಿದರ ಹಿಮ್ಮೇಳನದಲ್ಲಿ ದೇವಸ್ಥಾನದಲ್ಲಿ ಸಂಗೀತ ಕಚೇರಿ ನಡೆಯಿತು.

ದೇವಸ್ಥಾನದ ವತಿಯಿಂದ ಡಾ.ಯೇಸುದಾಸ್‌ ಅವರನ್ನು ವ್ಯವಸ್ಥಾಪನಾ ಸಮಿತಿ ಸದಸ್ಯ ಡಾ.ಪಿ.ವಿ.ಅಭಿಲಾಷ್‌ ಗೌರವಿಸಿದರು. ಸಹಾಯಕ ಕಾರ್ಯನಿರ್ವಹಣಾಧಿಕಾರಿ ಕೃಷ್ಣಮೂರ್ತಿ, ಅರ್ಚಕ ಎನ್‌.ಗೋವಿಂದ ಅಡಿಗ , ಅಧೀಕ್ಷಕ ರಾಮಕೃಷ್ಣ ಅಡಿಗ ಇದ್ದರು./