ಕುಂದಾಪುರ: ಕುಂದಾಪುರದಿಂದ ಕಾರವಾರದ ತನಕ ಚತುಷ್ಪತ ಹೆದ್ದಾರಿ ಕಾಮಗಾರಿ ಗುತ್ತಿಗೆ ವಹಿಸಿಕೊಂಡ ಐಆರ್‌ಬಿ ಕಂಪೆನಿ ತಲ್ಲೂರಿನಲ್ಲಿ ಅಳವಡಿಸಿರುವ ನಾಮಫಲಕ ಇದೀಗ ಕೊಲ್ಲೂರು ಯಾತ್ರಾರ್ಥಿಗಳನ್ನು ಗೊಂದಲಕ್ಕೀಡುಮಾಡಿದೆ.
ಕಳೆದ ಒಂದು ತಿಂಗಳ ಹಿಂದೆ ಹೆದ್ದಾರಿ ಗುತ್ತಿಗೆ ವಹಿಸಿಕೊಂಡಿರುವ ಐಆರ್‌ಬಿ ಕಂಪೆನಿ ಹೆಮ್ಮಾಡಿಗಿಂತ ಮೂರು ಕಿ.ಮೀ ಹಿಂದಿರುವ ತಲ್ಲೂರಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ನೇರಳಕಟ್ಟೆ-ನೆಂಪು ಮಾರ್ಗವಾಗಿ ಕೊಲ್ಲೂರಿಗೆ ಸಂಕರ್ಪ ಕಲ್ಪಿಸುವ ರಸ್ತೆಯತ್ತ ನಾಮಫಲಕ ಅಳವಡಿಸಿದ್ದರಿಂದ ಇದೀಗ ಸಮಸ್ಯೆ ಎದುರಾಗಿದೆ. ಇದರಿಂದಾಗಿ ಕೇರಳ, ತಮಿಳುನಾಡು, ಬೆಂಗಳೂರಿನಿಂದ ಕೊಲ್ಲೂರಿಗೆ ತೆರಳುವ ಯಾತ್ರಾರ್ಥಿಗಳು ತಲ್ಲೂರಿನಲ್ಲಿ ಟರ್ನ್ ಪಡೆದುಕೊಂಡು ನೇರಳಕಟ್ಟೆ ಮಾರ್ಗವಾಗಿ ನೆಂಪು ಜಂಕ್ಷನ್‌ಗೆ ಬಂದು ಮತ್ತೆ ಹೆಮ್ಮಾಡಿಯತ್ತ ವಾಪಾಸಾಗುತ್ತಿದ್ದಾರೆ. ಗೊಂದಲಕ್ಕೀಡುಮಾಡುವ ನಾಮಫಲಕದಿಂದ ಸಾಕಷ್ಟು ಸಂಖ್ಯೆಯಲ್ಲಿ ಯಾತ್ರಾರ್ಥಿಗಳು ನೇರಳಕಟ್ಟೆ-ನೆಂಪು ಮಾರ್ಗವಾಗಿ ಹೆಮ್ಮಾಡಿಗೆ ಬಂದು ಮತ್ತೆ ಅಲ್ಲಿಂದ ಕೊಲ್ಲೂರಿಗೆ ಪ್ರಯಾಣ ಬೆಳೆಸುತ್ತಿದ್ದಾರೆ. ದಿನನಿತ್ಯವೂ ಬಸ್, ಕಾರು ಸೇರಿದಂತೆ ಹತ್ತರಿಂದ-ಹದಿನೈದು ವಾಹನಗಳು ನೆಂಪುವಿನಿಂದ ಹೆಮ್ಮಾಡಿಗೆ ಬಂದು ಮತ್ತೆ ಪುನಃ ಕೊಲ್ಲೂರಿಗೆ ವಾಪಾಸಾಗುತ್ತಿದೆ.
ನಾಲ್ಕೈದು ಕಿ.ಮೀ ಹೆಚ್ಚಿಸುವ ಮಾರ್ಗ:
ಬಹಳ ಹಿಂದಿನಿಂದಲೂ ಕುಂದಾಪುರದಿಂದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ಜಂಕ್ಷನ್ ಆಗಿ ಹೆಮ್ಮಾಡಿ ಸರ್ಕಲ್ ಗುರುತಿಸಿಕೊಂಡಿದೆ. ಅಲ್ಲದೇ ಕುಂದಾಪುರದಿಂದ ಕೊಲ್ಲೂರಿಗೆ ತೆರಳುವ ಸುಲಭ ಮತ್ತು ಬಹಳ ಹತ್ತಿರದ ದಾರಿಯೂ ಇದಾಗಿದೆ. ತಲ್ಲೂರು ಸರ್ಕಲ್ ಬಳಸಿಕೊಂಡು ನೇರಳಕಟ್ಟೆ-ನೆಂಪು ಮಾರ್ಗವಾಗಿ ಕೊಲ್ಲೂರಿಗೆ ಪ್ರಯಾಣ ಬೆಳಸಿದರೆ ಹೆಮ್ಮಾಡಿಗಿಂತ ನಾಲ್ಕೈದು ಕಿ.ಮೀ ದೂರ ಹಾಗೂ ಸಮಯವೂ ಹಾಳು. ಹೀಗಾಗಿಯೇ ಕೇರಳ, ತಮಿಳುನಾಡು, ಬೆಂಗಳೂರಿನ ಯಾತ್ರಾರ್ಥಿಗಳು ಕೊಲ್ಲೂರಿಗೆ ತೆರಳಲು ಹೆಮ್ಮಾಡಿಯನ್ನೇ ನೆಚ್ಚಿಕೊಂಡಿದ್ದಾರೆ.
ಹದಿನಾರು ಕಿ.ಮೀ ಪ್ರಯಾಣ ವ್ಯರ್ಥ:
ತಲ್ಲೂರಿನಲ್ಲಿ ಐಆರ್‌ಬಿ ಕಂಪೆನಿಯ ಗೊಂದಲಕ್ಕೀಡು ಮಾಡುವ ನಾಮಫಲಕದಿಂದಾಗಿ ಇದೀಗ ಯಾತ್ರಾರ್ಥಿಗಳ ಅಮೂಲ್ಯವಾದ ಸಮಯವೂ ಹಾಳಾಗುತ್ತಿದೆ. ತಲ್ಲೂರು-ನೇರಳಕಟ್ಟೆ ಮಾರ್ಗವಾಗಿ ಬರುವ ಯಾತ್ರಾರ್ಥಿಗಳು ನೆಂಪು ಸರ್ಕಲ್‌ನಲ್ಲಿ ಸೂಕ್ತ ನಾಮಫಲಕ ಇಲ್ಲವಾದ್ದರಿಂದ ಬಲಕ್ಕೆ ತಿರುಗುವ ಬದಲು ಎಡಕ್ಕೆ ತಿರುಗಿ ಮರಳಿ ಎಂಟು ಕಿ.ಮೀ ದೂರದ ಹೆಮ್ಮಾಡಿಗೆ ಪ್ರಯಾಣ ಬೆಳೆಸುತ್ತಿದ್ದಾರೆ. ಇದರಿಂದಾಗಿ ಯಾತ್ರಾರ್ಥಿಗಳ ಹದಿನಾರು ಕಿ.ಮೀ ಪ್ರಯಾಣ ವ್ಯರ್ಥವಾಗುತ್ತಿದೆ.
ತಲ್ಲೂರಿನಲ್ಲಿ ತೆಗೆಯಬೇಕು, ಇಲ್ಲವಾದರೆ ನೆಂಪುವಿನಲ್ಲಿ ಹೊಸ ಬೋರ್ಡ್ ಅಳವಡಿಸಬೇಕು:
ದೂರದೂರು ಹಾಗೂ ಹೊರರಾಜ್ಯಗಳಿಂದ ಆಗಮಿಸುವ ಯಾತ್ರಾರ್ಥಿಗಳ ಸುಲಭ ಸಂಚಾರಕ್ಕೆ ಹೆದ್ದಾರಿ ಗುತ್ತಿಗೆ ಕಂಪೆನಿ ನಾಮಫಲಕಗಳನ್ನು ಸರಿಯಾದ ಸ್ಥಳಗಳಲ್ಲಿ ಅಳವಡಿಬೇಕಿದೆ. ಯಾತ್ರಾರ್ಥಿಗಳು ಸುತ್ತುವರಿದು ಬರಲು ತಪ್ಪಿಸಲು ಒಂದೇ ತಲ್ಲೂರಿನಲ್ಲಿ ಅಳವಡಿಸಿರುವ ನಾಮಫಲಕವನ್ನು ತೆರವುಗೊಳಿಸಬೇಕು. ಇಲ್ಲವಾದರೆ ನೆಂಪು ಸರ್ಕಲ್‌ನಲ್ಲಿ ಕೊಲ್ಲೂರು ಮಾರ್ಗಕ್ಕೆ ನಾಮಫಲಕವನ್ನು ಅಳವಡಿಸಬೇಕು ಎನ್ನುವುದು ಸ್ಥಳೀಯ ಆಗ್ರಹವಾಗಿದೆ. ಈ ಬಗ್ಗೆ ಐಆರ್‌ಬಿ ಗುತ್ತಿಗೆ ಕಂಪೆನಿಯ ಪ್ರಾಜೆಕ್ಟ್ ಇಂಜಿನಿಯರ್ ಅವರನ್ನು ಕನ್ನಡಪ್ರಭ ಪ್ರತಿನಿಧಿ ಸಂಪರ್ಕಿಸಲು ಪ್ರಯತ್ನಿಸಿದರೆ ಅವರು ಕರೆಗಳನ್ನು ಸ್ವೀಕರಿಸುತ್ತಿರಲಿಲ್ಲ.-ದಿನೇಶ್ ಕೊಠಾರಿ, ವರ್ತಕ
ಕಳೆದ ಒಂದು ತಿಂಗಳುಗಳಿಂದ ಯಾತ್ರಾರ್ಥಿಗಳು ಇದೇ ಸಮಸ್ಯೆ ಅನುಭವಿಸುತ್ತಿದ್ದಾರೆ. ದಾರಿತಪ್ಪಿ ಬಂದ ಯಾತ್ರಾರ್ಥಿಗಳನ್ನು ಕಂಡು ನಮಗೆ ಬೇಸರವೆನಿಸುತ್ತೆ. ಪ್ರತೀ ನಿತ್ಯವೂ ಹತ್ತರಿಂದ-ಹದಿನೈದು ವಾಹನಗಳು ದಾರಿತಪ್ಪಿ ಬಂದು ಮತ್ತೆ ಹೆಮ್ಮಾಡಿಯಿಂದ ಕೊಲ್ಲೂರಿಗೆ ವಾಪಾಸಾಗುತ್ತಿದ್ದಾರೆ. ಮೊದಲು ಈ ಸಮಸ್ಯೆ ಇರಲಿಲ್ಲ. ತಲ್ಲೂರಿನಲ್ಲಿ ಕೊಲ್ಲೂರು ನಾಮಫಲಕ ಅಳವಡಿಸಿದ ಬಳಿಕ ಇದೀಗ ಸಮಸ್ಯೆ ಎದುರಾಗಿದೆ.
-ರವಿ ಬುಗ್ರಿಕಡು, ಸ್ಥಳೀಯ ನಿವಾಸಿ