ಕೊಲ್ಲೂರು ಮೂಕಾಂಬಿಕೆಯ ಸನ್ನಿಧಿಯಲ್ಲಿ ಜೇಸುದಾಸ್ ಹುಟ್ಟುಹಬ್ಬ ಆಚರಣೆ :ಭಕ್ತಿ-ರಾಗದಲ್ಲಿ ಮುಳುಗೆದ್ದ ಜೇಸುದಾಸ್ ಅಭಿಮಾನಿಗಳು

ಕುಂದಾಪುರ: ಶಾಸ್ತ್ರೀಯ ಸಂಗೀತಗಾರ, ದಕ್ಷಿಣ ಭಾರತದ ಸುಪ್ರಸಿದ್ದ ಗಾಯಕ, ಪದ್ಮಭೂಷಣ ಡಾ. ಕೆ.ಜೆ ಯೇಸುದಾಸ್ ಗುರುವಾರ ತಮ್ಮ ೭೯ನೇ ಹುಟ್ಟುಹಬ್ಬವನ್ನು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ದೇವಿಗೆ ಚಂಡಿಕಾ ಹೋಮ ನೆರವೇರಿಸುವುದರ ಮೂಲಕ ಆಚರಿಸಿಕೊಂಡರು.

 ಬುಧವಾರ ಸಂಜೆ ತಮ್ಮ ಕುಟುಂಬಿಕರೊಂದಿಗೆ ಕೊಲ್ಲೂರಿಗೆ ಆಗಮಿಸಿದ ಅವರು ಗುರುವಾರ ಬೆಳಗ್ಗೆ ದೇವರ ದರ್ಶನ ಪಡೆದರು. ವರ್ಷಂಪ್ರತಿ ಕೊಲ್ಲೂರಿನಲ್ಲಿ ಜೇಸುದಾಸ್ ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳುವ ಹಿನ್ನೆಲೆಯಲ್ಲಿ ಕೇರಳ, ಕರ್ನಾಟಕ, ಮಹರಾಷ್ಟ್ರ ಹಾಗೂ ಇತರ ರಾಜ್ಯಗಳ ಜೇಸುದಾಸ್ ಅಭಿಮಾನಿಗಳು ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದು, ತಮ್ಮ ನೆಚ್ಚಿನ ಗಾಯಕನನ್ನು ಹತ್ತಿರದಿಂದ ನೋಡಿ ಸಂಭ್ರಮಪಟ್ಟರು.

 ದೇವಳದ ಅರ್ಚಕ ಗೋವಿಂದ ಅಡಿಗರ ನೇತತದ್ವಲ್ಲಿ ಧಾರ್ಮಿಕ ವಿಧಿವಿಧಾನ ನೆರವೇರಿತು. ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಹರೀಶ್ ಕುಮಾರ್ ಶೆಟ್ಟಿ ಜೇಸುದಾಸ್ ಅವರನ್ನು ದೇವಳದ ವತಿಯಿಂದ ಗೌರವಿಸಿದರು. ಈ ಸಂದರ್ಭದಲ್ಲಿ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಕೃಷ್ಣಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.

ಸಂಗೀತ ಸುಧೆ:

ಜೇಸುದಾಸ್ ಶಿಷ್ಯ ಹಾಗೂ ಅಭಿಮಾನಿ ಕಾಂಞಗಾಡ್ ರಾಮಚಂದ್ರನ್ ಅವರ ನೇತೃತ್ವದಲ್ಲಿ ಸತತ ೧೭ನೇ ವರ್ಷದಲ್ಲಿ ದೇವಸ್ಥಾನದ ಸ್ವರ್ಣಮುಖಿ ಸಭಾಭವನದಲ್ಲಿ ಬೆಳಗಿನಿಂದ ಸಂಜೆಯವರೆಗೆ ಸಂಗೀತ ಸುಧೆ  ನಡೆಯಿತು. ಈ ಸಂಗೀತೋತ್ಸವಕ್ಕೆ ಸ್ವತಃ ಜೇಸುದಾಸ್ ಭಕ್ತಿಗೀತೆ ಹಾಡುವ ಮೂಲಕ ಚಾಲನೆ ನೀಡಿದರು. ಬಳಿಕ ಸಂಗೀತದ ಕುರಿತು ಮಾತನಾಡಿದರು. ಸಾವಿರಾರು ಅಭಿಮಾನಿಗಳು ಭಕ್ತಿ ಸಾಗರದಲ್ಲಿ ಮಿಂದೆದ್ದರು.