ಕುಂದಾಪುರ : ರಾಜ್ಯದ ಮುಜರಾಯಿ ಇಲಾಖೆಯ ಅಧೀನದಲ್ಲಿ ಇರುವ ದೇವಸ್ಥಾನಗಳ ಸಹಕಾರವನ್ನು ಪಡೆದುಕೊಂಡು ಪ್ರತಿ ವರ್ಷ 1,000 ಜೋಡಿಗೆ ಉಚಿತ ಸಾಮೂಹಿಕ ವಿವಾಹ ಮಾಡಿಸಬೇಕು ಎನ್ನುವ ಸಂಕಲ್ಪ ಮಾಡಲಾಗಿದೆ. ರಾಜ್ಯದಲ್ಲಿ ಅಧಿಕ ಆದಾಯ ಇರುವ ಕೊಲ್ಲೂರಿನಂತಹ ದೇವಾಲಯದಲ್ಲಿ ಕನಿಷ್ಠ 100 ಜೋಡಿಗೆ ಕಂಕಣ ಭಾಗ್ಯ ತೊಡಗಿಸಬೇಕು ಎನ್ನುವ ನಿರೀಕ್ಷೆಯನ್ನು ಇಟ್ಟುಕೊಳ್ಳಲಾಗಿದೆ ಎಂದು ರಾಜ್ಯ ಮುಜರಾಯಿ, ಬಂದರು ಹಾಗೂ ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕೊಲ್ಲೂರಿನಲ್ಲಿ ಬುಧವಾರ 21 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾದ ಶ್ರೀ ಮೂಕಾಂಬಿಕಾ ಅನ್ನಪ್ರಸಾದ ಭೋಜನ ಶಾಲೆಯ ಕಟ್ಟಡವನ್ನು ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.
ರಾಜ್ಯದಲ್ಲಿ ಅಂದಾಜು 190 ಕ್ಕಿಂತಲೂ ಹೆಚ್ಚು ’ಎ’ ದರ್ಜೆಯ ದೇವಾಲಯಗಳಿವೆ. ದಿನದಿಂದ ದಿನಕ್ಕೆ ದೇವಾಲಯಕ್ಕೆ ಬರುವ ಭಕ್ತಾಧಿಗಳ ಸಂಖ್ಯೆ ಹೆಚ್ಚಳವಾಗುತ್ತಿರುವುದರಿಂದ ಈ ಸಂಖ್ಯೆ ಸದ್ಯದಲ್ಲಿಯೇ 250 ಕ್ಕಿಂತ ಹೆಚ್ಚಾಗುವ ಸಾಧ್ಯತೆ ಇದೆ. ದೇವರ ಮೇಲೆ ಭಕ್ತರು ನಂಬಿಕೆ ಇಟ್ಟು ನೀಡುವ ಕಾಣಿಕೆ ಹಾಗೂ ಸೇವೆಯ ಹಣಗಳು ಸದ್ವೀನಿಯೋಗವಾಗಬೇಕು ಎಂದರು.
ಇದಕ್ಕಾಗಿ ಯೋಜನಾಬದ್ಧ ಯೋಜನೆಗಳನ್ನು ರೂಪಿಸಿ ಧಾರ್ಮಿಕ ಕ್ಷೇತ್ರಗಳನ್ನು ಸಮಾಜಮುಖಿಯಾಗಿ ಬೆಳೆಸಬೇಕು. ಮುಜರಾಯಿ ಇಲಾಖೆಯ ಅಡಿಯಲ್ಲಿ ಬರುವ ದೇವಾಲಯಗಳಲ್ಲಿ ಸೇವೆಗಳನ್ನು ’ಆನ್ ಲೈನ್’ ವ್ಯವಸ್ಥೆಗೆ ತರುವ ಬಗ್ಗೆ ಚಂತನೆ ನಡೆಸಲಾಗಿದೆ. ಮುಜರಾಯಿ ಇಲಾಖೆಯಲ್ಲಿನ ಸಿಬ್ಬಂದಿಗಳ ಕೊರತೆ ನಿವಾರಿಸಲು 1,000 ಮಂದಿಯ ನೇಮಕಾತಿಗಾಗಿ ಆರ್ಥಿಕ ಇಲಾಖೆಗೆ ಪ್ರಾಸ್ತಾವನೆ ಸಲ್ಲಿಸಲಾಗಿದೆ. ರಾಜ್ಯದ 30 ಜಿಲ್ಲೆಗಳಲ್ಲಿಯೂ ದೇವಾಲಯಗಳ ವ್ಯಾಪ್ತಿಯಲ್ಲಿ ವ್ಯವಸ್ಥಿತ ಗೋಶಾಲೆ ನಿರ್ಮಾಣಕ್ಕಾಗಿ ಜಾಗ ಗುರುತಿಸುವಂತೆ ಕಂದಾಯ ಇಲಾಖೆಗೆ ಸೂಚಿಸಲಾಗಿದೆ ಎಂದವರು ತಿಳಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಬೈಂದೂರು ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಅವರು, ಹಿಂದೆ ಕೊಲ್ಲೂರು ದೇವಸ್ಥಾನದ ಆಡಳಿತ ಮೊಕ್ತೇಸರನಾಗಿ ಬರುವ ಕೋಟ್ಯಾಂತರ ರೂಪಾಯಿ ಆದಾಯ ಇದ್ದ ನಾನು ಅವಧಿ ಮುಗಿಸಿ ಹೋಗುವಾಗ ನನ್ನ ಬ್ಯಾಂಕ್ ಬ್ಯಾಲೇನ್ಸ್ ಖಾಲಿಯಾಗಿತ್ತು. ಶ್ರೀ ದೇವಿಯ ಸೇವೆಯನ್ನು ಆತ್ಮ ಪೂರ್ವಕವಾಗಿ ಮಾಡಿದ ಸಂತೃಪ್ತಿ ಇದೆ. ರಾಜ್ಯದಲ್ಲಿಯೇ 24 ಕ್ಯಾರೆಟ್ ಚಿನ್ನದಲ್ಲಿ ನಿರ್ಮಾಣವಾದ ಚಿನ್ನದ ರಥ ಎನ್ನುವ ಹೆಗ್ಗಳಿಕೆ ಕೊಲ್ಲೂರಿನ ಚಿನ್ನದ ರಥಕ್ಕೆ ಇದೆ.
ರಾಜ್ಯದಲ್ಲಿ ಮೊದಲ ಬಾರಿ ಬಿಸಿಯೂಟ ಪ್ರಾರಂಭಿಸಿದ ಕೀರ್ತಿ ಕೊಲ್ಲೂರು ದೇಗುಲಕ್ಕೆ ಇದೆ. ದೇವಸ್ಥಾನದಲ್ಲಿ ಲಂಚ ಹಾಗೂ ಭಕ್ತರಿಂದ ದುಡ್ಡು ವಸೂಲು ಮಾಡುವುದನ್ನು ನಾನು ವಯಕ್ತಿಕವಾಗಿ ವಿರೋಧಿಸುತ್ತೇನೆ. ಪುಣ್ಯ ನದಿ ಸೌಪರ್ಣಿಕೆಯ ಗಬ್ಬು ವಾಸನೆಗೆ ಶಾಶ್ವತ ಕಾಯಕಲ್ಪವಾಗಬೇಕು. ಇಲ್ಲಿನ ಸಿಬ್ಬಂದಿಗಳು ದೇವರ ಇಚ್ಚೆಗೆ ವಿರುದ್ದವಾಗಿ 2ನೇ ನಂಬರ್ ದಂಧೆಗೆ ಇಳಿದಲ್ಲಿ ದೇವಿಯ ಕೋಪವನ್ನು ಎದುರಿಸಬೇಕಾಗುತ್ತದೆ ಎಂದು ಕಿವಿ ಮಾತು ಹೇಳಿದರು.
ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್, ಅಪರ ಜಿಲ್ಲಾಧಿಕಾರಿ ಬಿ.ಸದಾಶಿವ ಪ್ರಭು, ಕೊಲ್ಲೂರು ದೇವಸ್ಥಾನದ ಕಾರ್ಯ ನಿರ್ವಹಣಾಧಿಕಾರಿ ಹೆಚ್.ಕೃಷ್ಣಮೂರ್ತಿ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಕೆ.ವಿ.ಶ್ರೀಧರ ಅಡಿಗ, ನರಸಿಂಹ ಹಳಗೇರಿ, ಜಯಂತಿ ವಿಜಯಕೃಷ್ಣ ಪಡುಕೋಣೆ, ರಾಜೇಶ್ ಕಾರಂತ್, ಅಭಿಲಾಷ್ ಪಿ.ವಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಎಸ್.ಕುಮಾರ, ತಾಲ್ಲೂಕು ಪಂಚಾಯಿತಿ ಸದಸ್ಯೆ ಗ್ರೀಷ್ಮಾ ಭೀಡೆ, ಬೈಂದೂರು ತಹಶೀಲ್ದಾರ್ ಬಿ.ಪಿ.ಪೂಜಾರ್ ಇದ್ದರು.
ಈ ಸಂದರ್ಭದಲ್ಲಿ ಹಿಂದಿನ ಕಾರ್ಯನಿರ್ವಹಣಾಧಿಕಾರಿಯಾಗಿದ್ದ ಸದಾಶಿವ ಪ್ರಭು, ಗ್ರಹ ಮಂಡಳಿಯ ಅಭಯಂತರ ಫಯಾಜುದ್ದೀನ್, ಗುತ್ತಿಗೆದಾರ ಕಾಪು ವಾಸುದೇವ ಶೆಟ್ಟಿ, ಯೋಗೀಶ್ವಂದ್ರ ರಾವ್ ಹಾಗೂ ವಿಜಯ್ಕುಮಾರ ಅವರನ್ನು ಗೌರವಿಸಲಾಯಿತು.
ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ಕುಮಾರ ಎಂ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ವಂಡಬಳ್ಳಿ ಜಯರಾಮ್ ಶೆಟ್ಟಿ ಸ್ವಾಗತಿಸಿದರು, ರಮೇಶ್ ಗಾಣಿಗ ಕೊಲ್ಲೂರು ವಂದಿಸಿದರು, ಶಿಕ್ಷಕರಾದ ಸಚಿನ್ ಶೆಟ್ಟಿ ಹುಂಚಣಿ ಹಾಗೂ ಸುಕೇಶ್ ಶೆಟ್ಟಿ ಹೊಸ್ಮಠ ನಿರೂಪಿಸಿದರು.