ಕೊಲ್ಲೂರು: ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ಸಮೀಪದ ಸೌರ್ಪಣಿಕ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ ಬೆಂಗಳೂರು ಮೂಲದ ಮಹಿಳೆಯ ಮೃತದೇಹ ಇಂದು ಮಧ್ಯಾಹ್ನ ವೇಳೆ ಮಾವಿನಕಾರು ಬಳಿ ಪತ್ತೆಯಾಗಿದೆ.
ಮೃತರನ್ನು ಬೆಂಗಳೂರಿನ ತ್ಯಾಗರಾಜ ನಗರದ ಗೋವಿಂದರಾಜು ಎಂಬವರ ಮಗಳು ವಸುಧ ಚಕ್ರವರ್ತಿ(45) ಎಂದು ಗುರುತಿಸಲಾಗಿದೆ. ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಇವರು ಆ.27ರಂದು ಕೊಲ್ಲೂರಿಗೆ ಆಗಮಿಸಿದ್ದು, ಇದೇ ಚಿಂತೆಯಲ್ಲಿ ಸೌಪರ್ಕಣಿಕ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ತಿಳಿದುಬಂದಿದೆ.
ನೀರಿನ ರಭಸಕ್ಕೆ ಮೃತದೇಹ ಕೊಚ್ಚಿಕೊಂಡು ಹೋಗಿದ್ದು, ಕಳೆದ ಎರಡು ದಿನಗಳಿಂದ ಕೊಲ್ಲೂರು ಪೊಲೀಸರು, ಮುಳುಗು ತಜ್ಞ ಈಶ್ವರ ಮಲ್ಪೆ ತಂಡ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಹುಡುಕಾಟ ನಡೆಸುತ್ತಿದ್ದರು. ಇಂದು ಮಧ್ಯಾಹ್ನ ವಸುಧ ನದಿಗೆ ಹಾರಿದ ಸ್ಥಳದಿಂದ ಸುಮಾರು 3ಕಿ.ಮೀ. ದೂರದಲ್ಲಿ ಮೃತದೇಹ ಪತ್ತೆಯಾಗಿದೆ. ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












