ಕೊಲ್ಲೂರು: ಬೀಡಾಡಿ ದನವನ್ನು ಕಾರಿನಲ್ಲಿ ಹಿಂಸಾತ್ಮಕವಾಗಿ ತುಂಬಿಕೊಂಡು ಪರಾರಿ: ಆರೋಪಿ ಬಂಧನ

ಉಡುಪಿ: ಕೊಲ್ಲೂರು ಠಾಣಾ ವ್ಯಾಪ್ತಿಯಲ್ಲಿ ರಸ್ತೆ ಬದಿಯಲ್ಲಿದ್ದ ಬೀಡಾಡಿ ದನವನ್ನು ಬಿಳಿ ಬಣ್ಣದ ಸ್ವೀಫ್ಟ್‌ ಡಿಸೈರ್‌ ಕಾರಿನಲ್ಲಿ ಹಿಂಸಾತ್ಮಕವಾಗಿ ಎಳೆದುಕೊಂಡು ಹೋಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲ್ಲೂರು ಪೊಲೀಸರು ಪ್ರಮುಖ ಆರೋಪಿಯನ್ನು ಬಂಧಿಸಿದ್ದಾರೆ.

ಸೆ.29ರಂದು ಮಧ್ಯಾಹ್ನ ಸುಮಾರು 1.30ಕ್ಕೆ ಘಟನೆ ನಡೆದಿದ್ದು, ಕೃತ್ಯದ ಸಿಸಿ ಕ್ಯಾಮೆರಾ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದವು. ಈ ಹಿನ್ನೆಲೆಯಲ್ಲಿ ಸ್ಥಳೀಯರು ನೀಡಿದ ದೂರಿನ ಆಧಾರದಲ್ಲಿ ಕೊಲ್ಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ತನಿಖೆ ನಡೆಸಿದ ಪೊಲೀಸರು ಕೃತ್ಯಕ್ಕೆ ಬಳಸಿದ ಕಾರನ್ನು ವಶಪಡಿಸಿಕೊಂಡಿದ್ದು, ಕುಂದಾಪುರ ತಾಲ್ಲೂಕಿನ ಗುಲ್ವಾಡಿ ಗ್ರಾಮದ ತೋಟದ ಮನೆ ನಿವಾಸಿ ಮೊಹಮ್ಮದ್‌ ಸಿನಾನ್‌ (20) ಎಂಬಾತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಪ್ರಕರಣದಲ್ಲಿ ಇನ್ನಿಬ್ಬರು ಭಾಗಿಯಾಗಿರುವ ಶಂಕೆ ಇದ್ದು, ಅವರ ಪತ್ತೆಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಕುಂದಾಪುರ ಉಪವಿಭಾಗದ ಡಿವೈಎಸ್‌ಪಿ ಎಚ್‌.ಡಿ. ಕುಲಕರ್ಣಿ ಅವರ ಮಾರ್ಗದರ್ಶನದಲ್ಲಿ ಬೈಂದೂರು ವೃತ್ತ ನಿರೀಕ್ಷಕ ಶಿವಕುಮಾರ್‌ ಅವರ ಉಸ್ತುವಾರಿಯಲ್ಲಿ ಕೊಲ್ಲೂರು ಠಾಣೆಯ ಉಪನಿರೀಕ್ಷಕ ವಿನಯ್‌ ಎಂ. ಕೊರ್ಲಹಳ್ಳಿ ಹಾಗೂ ಸಿಬ್ಬಂದಿ ಹೆಡ್‌ಕಾನ್‌ಸ್ಟೆಬಲ್‌ ನಾಗೇಂದ್ರ, ಕಾನ್‌ಸ್ಟೆಬಲ್‌ಗಳಾದ ರುದ್ರೇಶ, ನವೀನ್‌ ಕುಮಾರ್‌, ವಿಲಾಸ್‌ ರಾಠೋಡ ಮತ್ತು ನಾಗರಾಜ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಇದೇ ಆರೋಪಿಯು ಕುಂದಾಪುರ ಉಪವಿಭಾಗದ ವಿವಿಧ ಠಾಣೆಗಳಲ್ಲಿ ದಾಖಲಾಗಿರುವ ಐದು ದನ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವುದು ತನಿಖೆಯಿಂದ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.