ಕೊಲ್ಲಂ: ರಸ್ತೆ ಬದಿ ಲಾಟರಿ ಮಾರುತ್ತಿದ್ದವನಿಗೇ ಹೊಡೆಯಿತು 12 ಕೋಟಿಯ ಬಂಪರ್ ಜಾಕ್‌ಪಾಟ್..!

ವರ್ಷಗಳಿಂದ ರಸ್ತೆ ಬದಿಯಲ್ಲಿ ಲಾಟರಿ ಟಿಕೆಟ್ ಮಾರುತ್ತಾ ಜೀವನದ ಬಂಡಿ ಸಾಗಿಸುತ್ತಿದ್ದ ಕೇರಳದ ಕೊಲ್ಲಂ ನಿವಾಸಿ ಪೊನ್ನನ್ ಅವರಿಗೆ. ಈ ಬಾರಿಯ ಪ್ರತಿಷ್ಠಿತ ‘ವಿಷು ಬಂಪರ್ ಲಾಟರಿಯಲ್ಲಿ ಬರೋಬ್ಬರಿ 12 ಕೋಟಿ ರೂಪಾಯಿಗಳ ಬಂಪರ್ ಬಹುಮಾನ ಒಲಿದಿದೆ.

ಕೇರಳ: ಕಾಲಚಕ್ರ ಉರುಳಿದರೆ ಬಡವನೂ ಬಲ್ಲಿದನಾಗಬಹುದು ಎಂಬ ಮಾತಿಗೆ ಕೇರಳದ ಕೊಲ್ಲಂ ನಿವಾಸಿ, ಲಾಟರಿ ವ್ಯಾಪಾರಿ ಪೊನ್ನನ್ ಅವರೇ ಸಾಕ್ಷಿ. ವರ್ಷಗಳಿಂದ ರಸ್ತೆ ಬದಿಯಲ್ಲಿ ಲಾಟರಿ ಟಿಕೆಟ್ ಮಾರುತ್ತಾ ಜೀವನದ ಬಂಡಿ ಸಾಗಿಸುತ್ತಿದ್ದ ಪೊನ್ನನ್ ಅವರಿಗೆ, ಈ ಬಾರಿಯ ಪ್ರತಿಷ್ಠಿತ ‘ವಿಷು ಬಂಪರ್ ಲಾಟರಿಯಲ್ಲಿ ಬರೋಬ್ಬರಿ 12 ಕೋಟಿ ರೂಪಾಯಿಗಳ ಬಂಪರ್ ಬಹುಮಾನ ಒಲಿದಿದೆ. ಶನಿವಾರ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಪೊನ್ನನ್ ಕುಟುಂಬದಲ್ಲಿ ಸಂಭ್ರಮದ ವಾತಾವರಣ ನೆಲೆಸಿದೆ.

ಮಗನ ಮದುವೆ ಚಿಂತೆ ದೂರ. ಸಾಲದಿಂದ ಮುಕ್ತಿ: ಲಕ್ಷಾಂತರ ರೂಪಾಯಿ ಸಾಲದ ಸುಳಿಯಲ್ಲಿ ಸಿಲುಕಿದ್ದ ಈ ಕುಟುಂಬಕ್ಕೆ ಈ ಬಹುಮಾನದ ಹಣ ಹೊಸ ಜೀವದಾನ ನೀಡಿದೆ. ತಮ್ಮ ಕಷ್ಟದ ದಿನಗಳನ್ನು ಸ್ಮರಿಸಿದ ಪೊನ್ನನ್, “ಬಡತನದ ಕಾರಣದಿಂದಾಗಿ ನನ್ನ ಮಗ ವಿನೋದ್‌ಗೆ ಸರಿಯಾದ ಕಂಕಣ ಕೂಡಿ ಬರುತ್ತಿರಲಿಲ್ಲ. ಬಡವ ಎಂಬ ಕಾರಣಕ್ಕೆ ಯಾರೂ ಹೆಣ್ಣು ಕೊಡಲು ಮುಂದಾಗುತ್ತಿರಲಿಲ್ಲ. ಆದರೆ ಈಗ ನಮ್ಮ ಬಳಿ ಕೋಟಿ ಕೋಟಿ ಹಣವಿದೆ. ಇನ್ಮುಂದೆಯಾದರೂ ಮಗನಿಗೆ ಒಳ್ಳೆಯ ಸಂಬಂಧ ಸಿಗಬಹುದು ಎಂಬ ನಂಬಿಕೆ ನನಗಿದೆ” ಎಂದು ಹರ್ಷ ವ್ಯಕ್ತಪಡಿಸಿದ್ದಾರೆ. ಇತ್ತ ಅವರ ಪತ್ನಿ ಕೂಡ ಸಂತಸ ಹಂಚಿಕೊಂಡಿದ್ದು, “ನನ್ನ ಪತಿ ಈಗ ಕೋಟ್ಯಾಧಿಪತಿಯಾಗಿದ್ದಾರೆ.

ಮೊದಲು ನಮ್ಮ ತಲೆಯ ಮೇಲಿರುವ ಸಾಲದ ಹೊರೆಯನ್ನು ಇಳಿಸುತ್ತೇವೆ,” ಎಂದಿದ್ದಾರೆ.
ಬದುಕು ಬದಲಿಸಿದ ‘2’ ಅದೃಷ್ಟದ ಸಂಖ್ಯೆ: ಕೋವಿಡ್ ಸಮಯದಲ್ಲಿ ಕೆಲಸವಿಲ್ಲದೆ ಕಷ್ಟಪಡುತ್ತಿದ್ದ ಈ ಕುಟುಂಬ, ಜೀವನೋಪಾಯಕ್ಕಾಗಿ ಲಾಟರಿ ಮಾರಾಟ ಮಾಡಲು ಆರಂಭಿಸಿತ್ತು. ಪೊನ್ನನ್ ಪ್ರತಿದಿನ ಗ್ರಾಹಕರಿಗೆ ಟಿಕೆಟ್ ಮಾರುವುದರ ಜೊತೆಗೆ, ತಮಗಾಗಿಯೂ ಒಂದು ಟಿಕೆಟ್ ಖರೀದಿಸುತ್ತಿದ್ದರು. ಈ ಬಾರಿ ಅವರಿಗೆ ಅದೃಷ್ಟ ತಂದಿದ್ದು ‘2’ ಎಂಬ ಸಂಖ್ಯೆ.
“ನನಗೆ 2′ ಅದೃಷ್ಟದ ಸಂಖ್ಯೆಯಾದ್ದರಿಂದ, ನಾನು ಮಾರಾಟ ಮಾಡಲು ತಂದಿದ್ದ ಕಟ್ಟುಗಳಲ್ಲಿ ಕೊನೆಯ ಅಂಕಿ ‘2’ ಹೊಂದಿದ್ದ ಒಂದು ಟಿಕೆಟ್ ಅನ್ನು ನನಗಾಗಿಯೇ ಇಟ್ಟುಕೊಂಡಿದ್ದೆ. ಅದೇ ಈಗ ನನ್ನ ಇಡೀ ಬದುಕನ್ನು ಬದಲಿಸಿದೆ. ಗೆದ್ದ ಸುದ್ದಿ ಕೇಳಿದಾಗ ನಂಬಲು ಸಾಧ್ಯವಾಗದೆ. ನಾಲೈದು ಬಾರಿ ನಂಬ‌ರ್ ಪರಿಶೀಲಿಸಿ ಖಚಿತಪಡಿಸಿಕೊಂಡೆ” ಎಂದು ಪೊನ್ನನ್ ತಮ್ಮ ಅದೃಷ್ಟದ ಕ್ಷಣವನ್ನು ವಿವರಿಸಿದ್ದಾರೆ.ಲಾಟರಿ ಮಾರುವವನೇ ಬೃಹತ್ ಮೊತ್ತದ ಬಹುಮಾನ ಗೆದ್ದ ಈ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು. ಬಡ ಕುಟುಂಬದ ಅದೃಷ್ಟಕ್ಕೆ ಸಾರ್ವಜನಿಕರಿಂದ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.