ಬರ್ತ್ ಡೇ ಪಾರ್ಟಿಯ ನೆಪದಲ್ಲಿ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ!

ಪಶ್ಚಿಮ ಬಂಗಾಳದಲ್ಲಿ ಮತ್ತೊಂದು ದುರ್ಘಟನೆ ಬೆಳಕಿಗೆ ಬಂದಿದ್ದು, ಯುವತಿಯ ಹುಟ್ಟು ಹಬ್ಬದ ದಿನದಂದೆ ಆಕೆಯನ್ನು ಪಾರ್ಟಿ ಮಾಡಲು ಪ್ಲಾಟ್​ಗೆ ಕರೆದೊಯ್ದು ಪರಿಚಯಸ್ಥ ಇಬ್ಬರು ಯುವಕರು ಅತ್ಯಾಚಾರ ಮಾಡಿರುವ ಘಟನೆ ಸೆ. 07 ರಂದು ವರದಿಯಾಗಿದೆ.

ಕೋಲ್ಕತ್ತಾದ ಹೊರವಲಯದಲ್ಲಿರುವ ರೀಜೆಂಟ್ ಪಾರ್ಕ್ ಪ್ರದೇಶದಲ್ಲಿ ಶುಕ್ರವಾರ ಈ ದುಷ್ಕೃತ್ಯ ನಡೆದಿದೆ. ಪ್ರಸ್ತುತ ತಲೆಮರೆಸಿಕೊಂಡಿರುವ ಇಬ್ಬರು ಆರೋಪಿಗಳನ್ನು ಚಂದನ್ ಮಲಿಕ್ ಮತ್ತು ದೀಪ್ ಎಂದು ಗುರುತಿಸಲಾಗಿದೆ. ದೀಪ್ ಸರ್ಕಾರಿ ಉದ್ಯೋಗಿ ಎಂದೂ ತಿಳಿದು ಬಂದಿದೆ.

ಹುಟ್ಟು ಹಬ್ಬ ಆಚರಣೆಗೆ ಫ್ಲಾಟ್‌ಗೆ ಕರೆದೊಯ್ದರು:
ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತೆ ಹರಿದೇವಪುರದವಳು. ಅವಳ ಹುಟ್ಟುಹಬ್ಬದ ಸಂದರ್ಭದಲ್ಲಿ ಚಂದನ್ ಆಕೆಯನ್ನು ದೀಪ್ ಅವರ ಫ್ಲಾಟ್‌ಗೆ ಹುಟ್ಟು ಹಬ್ಬ ಆಚರಿಸಲು ಕರೆದೊಯ್ದಿದ್ದಾನೆ. ಆಚರಣೆ ಬಳಿಕ ಊಟ ಮಾಡಿ ಯುವತಿ ಮನೆಗೆ ಹೋಗುವುದಾಗಿ ಹೇಳಿದ್ದಾಳೆ. ಆದರೆ ಆರೋಪಿಗಳು ಆಕೆಯನ್ನು ತಡೆದು, ಕೋಣೆಯಲ್ಲಿ ಕೂಡಿ ಹಾಕಿ ಇಬ್ಬರು ಅತ್ಯಾಚಾರ ಎಸಗಿದ್ದಾರೆ. ಮರುದಿನ ಬೆಳಿಗ್ಗೆ 10.30 ಕ್ಕೆ, ಸಂತ್ರಸ್ತೆ ಅಲ್ಲಿಂದ ತಪ್ಪಿಸಿಕೊಂಡು ಮನೆಗೆ ಹೋಗಿ ತನ್ನ ಕುಟುಂಬದವರಿಗೆ ನಡೆದ ದೌರ್ಜನ್ಯದ ಬಗ್ಗೆ ತಿಳಿಸಿದ್ದಾಳೆ. ಬಳಿಕ ಕುಟುಂಬಸ್ಥರು ದೂರು ದಾಖಲಿಸಿದ್ದಾರೆ. ಸಂತ್ರಸ್ತೆ ದೂರಿನಲ್ಲಿ ದೀಪ್ ಮೂಲಕ ಕೆಲವು ತಿಂಗಳ ಹಿಂದೆ ಚಂದನ್ ಅವರನ್ನು ಭೇಟಿಯಾಗಿದ್ದು, ಅಂದಿನಿಂದ ಮೂವರು ಸಂಪರ್ಕದಲ್ಲಿದ್ದೇವೆ ಎಂದು ಹೇಳಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದರು.

ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿಗಳಿಬ್ಬರು ತಲೆಮರೆಸಿಕೊಂಡಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ.