ದುಬೈ: ಆಸ್ಟ್ರೇಲಿಯದ ನಾಯಕ ವೇಗದ ಬೌಲರ್ ಪ್ಯಾಟ್ ಕಮಿನ್ಸ್ ಐಪಿಎಲ್ ನಲ್ಲಿ ದಾಖಲೆ ಮೊತ್ತಕ್ಕೆ ಸನ್‌ರೈಸರ್ಸ್ ಹೈದರಾಬಾದ್ ಪಾಲಾಗಿದ್ದಾರೆ. ವಿಶ್ವ ಕಪ್ ವಿಜೇತ ನಾಯಕ ಬರೋಬ್ಬರಿ 20.50 ಕೋಟಿ ರೂ ಬೆಲೆಗೆ ಎಸ್.ಆರ್.ಎಚ್ ಪಾಲಾಗಿದ್ದಾರೆ. ಕಮಿನ್ಸ್ ಅವರ ಸಹ ಆಟಗಾರ ಮತ್ತು ಆಸ್ಟ್ರೇಲಿಯಾದ ವಿಶ್ವಕಪ್ ಫೈನಲ್ ಹೀರೋ ಟ್ರಾವಿಸ್ ಹೆಡ್ ಅವರನ್ನು ಎಸ್‌ಆರ್‌ಹೆಚ್ ₹6.80 ಕೋಟಿಗೆ ಪಡೆದುಕೊಂಡಿದೆ.
ಆಸ್ಟ್ರೇಲಿಯಾ ಬೌಲರ್ ಮಿಶೆಲ್ ಸ್ಟಾರ್ಕ್ ಅವರು ತಮ್ಮ ನಾಯಕನ ದಾಖಲೆಯನ್ನು ಮುರಿದು 24.75 ಕೋಟಿ ರೂ ಗಳಿಗೆ ಕೆ.ಕೆ.ಆರ್ ಪಾಲಾಗಿದ್ದಾರೆ.
ದುಬೈನಲ್ಲಿ ಇಂದು ಐಪಿಎಲ್ ಮೆಗಾ ಹರಾಜಿನ ಎರಡು ದಿನಗಳ ಕಾರ್ಯಕ್ರಮದಲ್ಲಿ ಮೊದಲನೆ ದಿನ ಹರಾಜು ಪ್ರಕ್ರಿಯೆ ನಡೆದಿದೆ.
ಡೇರಿಲ್ ಮಿಚೆಲ್‌ಗೆ ತೀವ್ರ ಬಿಡ್ಡಿಂಗ್ ನಡೆದು ಅಂತಿಮವಾಗಿ ಅವರನ್ನು 14 ಕೋಟಿಗೆ ಸಿ.ಎಸ್.ಕೆ ಖರೀದಿಸಿದೆ. ಹರ್ಷಲ್ ಪಟೇಲ್ ಅವರನ್ನು ಪಿಬಿಕೆಎಸ್ 11.75 ಕೋಟಿಗೆ ಸ್ವಾಧೀನಪಡಿಸಿಕೊಂಡಿದೆ. ರೊವ್‌ಮನ್ ಪೊವೆಲ್ ಮಾರಾಟವಾದ ಮೊದಲ ಆಟಗಾರ, ಅವರನ್ನು ಆರ್‌ಆರ್ 7.40 ಕೋಟಿಗೆ ಖರೀದಿಸಿದೆ. ಎಸ್‌ಆರ್‌ಎಚ್ ಹ್ಯಾರಿ ಬ್ರೂಕ್‌ನನ್ನು 4 ಕೋಟಿಗೆ ಹಾಗೂ ರಚಿನ್ ರವೀಂದ್ರ ಅವರನ್ನು 1.80 ಕೋಟಿಗೆ ಸಿಎಸ್‌ಕೆ ಖರೀದಿಸಿದೆ.
10 ಫ್ರಾಂಚೈಸಿಗಳು ಒಟ್ಟಾರೆ 262.95 ಕೋಟಿ ಖರ್ಚು ಮಾಡಬಹುದಾಗಿದ್ದು, ಈ ಪೈಕಿ ಗುಜರಾತ್ ಟೈಟಾನ್ಸ್ ಗರಿಷ್ಠ 38.15 ಕೋಟಿ ಸಾಮರ್ಥ್ಯ ಹೊಂದಿದೆ. ಎರಡನೇ ಸ್ಥಾನ ಸನ್‌ರೈಸರ್ಸ್ ಹೈದರಾಬಾದ್ 34 ಕೋಟಿಗಳ ಖರೀದಿ ಸಾಮರ್ಥ್ಯ ಹೊಂದಿದ್ದರೆ, ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಇತರ ಎರಡು ಫ್ರಾಂಚೈಸಿಗಳಾಗಿದ್ದು, 30 ಕೋಟಿಗೂ ಅಧಿಕ ಮೊತ್ತ ಹೊಂದಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು 28.95 ಕೋಟಿ
ಹೊಂದಿದೆ.
ಇತ್ತೀಚೆಗಷ್ಟೇ ಡಬ್ಲ್ಯುಪಿಎಲ್ ಹರಾಜು ನಡೆಸಿದ ಮಲ್ಲಿಕಾ ಸಾಗರ್ ಐಪಿಎಲ್‌ನ 16 ವರ್ಷಗಳ ಸುದೀರ್ಘ ಇತಿಹಾಸದಲ್ಲಿ ಮೊದಲ ಮಹಿಳಾ ಹರಾಜುಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.