ಕೊಹ್ಲಿ, ತೆಂಡೂಲ್ಕರ್ ಸೇರಿ 7 ಸಾವಿರ ವಿಐಪಿಗಳಿಗೆ ಆಹ್ವಾನ : ಅಯೋಧ್ಯಾ ರಾಮಮಂದಿರ ಪ್ರಾಣ ಪ್ರತಿಷ್ಠಾ ಸಮಾರಂಭ

ನವದೆಹಲಿ: ಸಮಾರಂಭದಲ್ಲಿ ಭಾಗಿಯಾಗುವಂತೆ ಸುಮಾರು 7000 ಗಣ್ಯರಿಗೆ ಶ್ರೀ ರಾಮ್ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಆಮಂತ್ರಣಗಳನ್ನು ಈಗಾಗಲೇ ಕಳುಹಿಸಿದೆ.ಅಯೋಧ್ಯಾ ರಾಮ ಮಂದಿರದ ಪ್ರಾಣ ಪ್ರತಿಷ್ಠಾ ಸಮಾರಂಭವು 2024 ರ ಜನವರಿ 22 ರಂದು ಅತ್ಯಂತ ಅದ್ದೂರಿಯಾಗಿ ನಡೆಯಲಿದೆ.ಮುಂದಿನ ವರ್ಷದ ಜನವರಿ 22 ರಂದು ನಡೆಯಲಿರುವ ರಾಮ ಮಂದಿರ ಪ್ರಾಣ ಪ್ರತಿಷ್ಠಾ ಸಮಾರಂಭದಲ್ಲಿ ಭಾಗಿಯಾಗಲು 7 ಸಾವಿರ ಗಣ್ಯರಿಗೆ ಆಮಂತ್ರಣ ನೀಡಲಾಗಿದೆ.

ರಾಮ ಮಂದಿರ ಟ್ರಸ್ಟ್ 3,000 ವಿಐಪಿಗಳು ಸೇರಿದಂತೆ 7,000 ಕ್ಕೂ ಹೆಚ್ಚು ಜನರಿಗೆ ಆಹ್ವಾನ ಪತ್ರಿಕೆಗಳನ್ನು ಕಳುಹಿಸಿದೆ. ರಾಮ ಮಂದಿರ ಚಳವಳಿಯ ಸಮಯದಲ್ಲಿ ಪ್ರಾಣ ಕಳೆದುಕೊಂಡ ಕರಸೇವಕರ ಕುಟುಂಬಗಳನ್ನು ಸಹ ಆಹ್ವಾನಿಸಲಾಗುವುದು. ಇತರ ಆಹ್ವಾನಿತರಲ್ಲಿ ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್ ಭಾಗವತ್, ಯೋಗ ಗುರು ರಾಮದೇವ್, ದೇಶಾದ್ಯಂತದ 4,000 ಮಠಾಧೀಶರು, ಬರಹಗಾರರು, ಪತ್ರಕರ್ತರು, ವಿಜ್ಞಾನಿಗಳು ಮತ್ತು ಪ್ರಮುಖ ವ್ಯಕ್ತಿಗಳು ಸೇರಿದ್ದಾರೆ.ಕ್ರಿಕೆಟಿಗರಾದ ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ಕೈಗಾರಿಕೋದ್ಯಮಿಗಳಾದ ಮುಖೇಶ್ ಅಂಬಾನಿ, ಗೌತಮ್ ಅದಾನಿ ಮತ್ತು ರತನ್ ಟಾಟಾ, ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್, ಜನಪ್ರಿಯ ಟಿವಿ ಧಾರಾವಾಹಿ ‘ರಾಮಾಯಣ’ದಲ್ಲಿ ರಾಮ ಮತ್ತು ಸೀತೆಯ ಪಾತ್ರ ನಿರ್ವಹಿಸಿದ ನಟರಾದ ಅರುಣ್ ಗೋವಿಲ್ ಮತ್ತು ದೀಪಿಕಾ ಚಿಖ್ಲಿಯಾ ಅವರನ್ನು ರಾಮ ಮಂದಿರದ ಪ್ರತಿಷ್ಠಾಪನಾ ಸಮಾರಂಭಕ್ಕೆ ಆಹ್ವಾನಿಸಲಾಗಿದೆ.

“ರಾಮ್ ಲಲ್ಲಾ ಐದು ವರ್ಷದ ಬಾಲಕನ ರೂಪದಲ್ಲಿ ದೇವಾಲಯದಲ್ಲಿ ವಿರಾಜಮಾನರಾಗಲಿದ್ದಾರೆ. ಇದಕ್ಕಾಗಿ ಕರ್ನಾಟಕದಿಂದ ತಂದ ಎರಡು ಕಲ್ಲುಗಳಿಂದ ಮೂರು ವಿಗ್ರಹಗಳನ್ನು ಮತ್ತು ರಾಜಸ್ಥಾನದಿಂದ ತಂದ ಕಲ್ಲಿನಿಂದ ಒಂದು ವಿಗ್ರಹವನ್ನು ತಯಾರಿಸಲಾಗುತ್ತಿದೆ. ವಿಗ್ರಹಗಳು ಬಹುತೇಕ ಸಿದ್ಧವಾಗಿವೆ ಮತ್ತು ಅಂತಿಮ ಸ್ಪರ್ಶ ನೀಡಲಾಗುತ್ತಿದೆ. ಅತ್ಯಂತ ಸುಂದರವಾದ ವಿಗ್ರಹವನ್ನು ಪ್ರತಿಷ್ಠಾಪನೆಗಾಗಿ ಆಯ್ಕೆ ಮಾಡಲಾಗುವುದು” ಎಂದು ರೈ ಹೇಳಿದರು.

ಪತ್ರಕರ್ತರಿಗೂ ಆಹ್ವಾನ: ವಿಎಚ್​ಪಿ ವಕ್ತಾರ ಶರದ್ ಶರ್ಮಾ ಮಾತನಾಡಿ, “ತಮ್ಮ ಬರಹಗಳು ಮತ್ತು ವರದಿಗಳ ಮೂಲಕ ರಾಮ ಮಂದಿರ ಚಳವಳಿಯನ್ನು ಬೆಂಬಲಿಸಿದ ಪತ್ರಕರ್ತರನ್ನು ನಾವು ಆಹ್ವಾನಿಸಿದ್ದೇವೆ. ಅವರಿಲ್ಲದಿದ್ದರೆ ರಾಮ ಮಂದಿರ ನಿರ್ಮಾಣ ಹೋರಾಟ ಯಶಸ್ವಿಯಾಗುತ್ತಿರಲಿಲ್ಲ. ವಿವಿಐಪಿಗಳು ಬಾರ್ ಕೋಡ್ ಪಾಸ್ ಗಳ ಮೂಲಕ ಪ್ರವೇಶ ಪಡೆಯುತ್ತಾರೆ. 7,000 ಆಹ್ವಾನಿತರಲ್ಲಿ ಸುಮಾರು 4,000 ಮಂದಿ ಧಾರ್ಮಿಕ ಮುಖಂಡರಾಗಿರುತ್ತಾರೆ. ಉಳಿದವರು ವಿವಿಧ ಕ್ಷೇತ್ರಗಳ ಪ್ರಮುಖ ವ್ಯಕ್ತಿಗಳನ್ನು ಒಳಗೊಂಡಿರುತ್ತಾರೆ. ಸಮಾರಂಭಕ್ಕೆ ಮುಂಚಿತವಾಗಿ ಆಹ್ವಾನಿತರೊಂದಿಗೆ ಲಿಂಕ್ ಅನ್ನು ಹಂಚಿಕೊಳ್ಳಲಾಗುವುದು. ಒಮ್ಮೆ ಅವರು ತಮ್ಮನ್ನು ನೋಂದಾಯಿಸಿಕೊಂಡ ನಂತರ ಬಾರ್ ಕೋಡ್ ಅನ್ನು ರಚಿಸಲಾಗುತ್ತದೆ. ಅದೇ ಪ್ರವೇಶದ ಪಾಸ್ ಆಗಿರಲಿದೆ” ಎಂದು ಶರ್ಮಾ ಹೇಳಿದರು.

ಚಂಪತ್ ರಾಯ್ ಅವರು ಸಹಿ ಮಾಡಿದ ಆಮಂತ್ರಣ ಪತ್ರದ ಒಕ್ಕಣೆ ಹೀಗಿದೆ: “ದೀರ್ಘಕಾಲದ ಹೋರಾಟದ ನಂತರ ಶ್ರೀ ರಾಮ ಜನ್ಮಭೂಮಿಯಲ್ಲಿ ದೇವಾಲಯದ ನಿರ್ಮಾಣ ಪ್ರಗತಿಯಲ್ಲಿದೆ ಮತ್ತು ಪೌಶ್ ಶುಕ್ಲ ದ್ವಾದಶಿ, ವಿಕ್ರಮ್ ಸಂವತ್ 2080 ರಂದು, ಸೋಮವಾರ, 2024 ರ ಜನವರಿ 22 ರಂದು ರಾಮ್ ಲಲ್ಲಾ ದೇವರ ಹೊಸ ವಿಗ್ರಹವನ್ನು ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಲಾಗುವುದು ಎಂದು ನಿಮಗೆ ತಿಳಿಸಲು ಬಯಸುತ್ತೇವೆ. ಈ ಪವಿತ್ರ ಸಂದರ್ಭದಲ್ಲಿ ನೀವು ಅಯೋಧ್ಯೆಯಲ್ಲಿ ಉಪಸ್ಥಿತರಿರಬೇಕು ಮತ್ತು ಈ ಮಹಾನ್ ಐತಿಹಾಸಿಕ ದಿನದ ಘನತೆಯನ್ನು ಹೆಚ್ಚಿಸಬೇಕು ಎಂಬುದು ನಮ್ಮ ಬಯಕೆಯಾಗಿದೆ.”

ಈ ಬಗ್ಗೆ ಮಾಹಿತಿ ನೀಡಿದ ಶ್ರೀ ರಾಮ್ ಜನ್ಮಭೂಮಿ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್, “ನಾವು 50 ವಿದೇಶಗಳಿಂದ ತಲಾ ಒಬ್ಬ ಪ್ರತಿನಿಧಿಯನ್ನು ಆಹ್ವಾನಿಸಲು ಯೋಜಿಸಿದ್ದೇವೆ. ಚಳವಳಿಯ ಸಮಯದಲ್ಲಿ ಪ್ರಾಣ ಕಳೆದುಕೊಂಡ 50 ಕರಸೇವಕರ ಕುಟುಂಬಗಳನ್ನು ಸಹ ಆಹ್ವಾನಿಸಲಾಗಿದೆ. ನ್ಯಾಯಾಧೀಶರು, ವಿಜ್ಞಾನಿಗಳು, ಬರಹಗಾರರು ಮತ್ತು ಕವಿಗಳಿಗೂ ಆಹ್ವಾನಗಳನ್ನು ಕಳುಹಿಸಲಾಗಿದೆ.” ಎಂದರು. “ಸಂತರು, ಪುರೋಹಿತರು, ಶಂಕರಾಚಾರ್ಯರು, ಮಾಜಿ ನಾಗರಿಕ ಸೇವಕರು, ನಿವೃತ್ತ ಸೇನಾಧಿಕಾರಿಗಳು, ವಕೀಲರು, ಸಂಗೀತಗಾರರು ಮತ್ತು ಪದ್ಮ ಪ್ರಶಸ್ತಿ ಪುರಸ್ಕೃತರನ್ನು ಆಹ್ವಾನಿಸಿದ್ದೇವೆ” ಎಂದು ಅವರು ಹೇಳಿದರು.