ಕೊಡವೂರು: ನಿವೃತ್ತ ಶಿಕ್ಷಕಿ ಮಲ್ಲಿಕಾ ದೇವಿಯವರಿಗೆ ಸನ್ಮಾನ

ಕೊಡವೂರು: ಕೊಡವೂರು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಶಾಲಾಭಿವೃದ್ಧಿ ಸಮಿತಿ, ಹಳೆ ವಿದ್ಯಾರ್ಥಿ ಸಂಘ, ಯುವಕ ಸಂಘ,ಶ್ರೀ ದುರ್ಗಾ ಮಹಿಳಾ ಮಂಡಲ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ಕಳೆದ 36 ವರ್ಷಗಳಿಂದ ಕೊಡವೂರು ಶಾಲಾ ಶಿಕ್ಷಕಿಯಾಗಿ ಅನುಪಮ ಸೇವೆ ಸಲ್ಲಿಸಿ ಇತ್ತೀಚೆಗೆ ನಿವೃತ್ತಿ ಹೊಂದಿದ ಮಲ್ಲಿಕಾ ದೇವಿಯವರ ಸನ್ಮಾನ ಕಾರ್ಯಕ್ರಮ ಸ್ಥಳೀಯ ವಿಪಶ್ರೀ ಸಭಾಂಗಣದಲ್ಲಿ ನಡೆಯಿತು.

ಶಾಲೆಯ ನೂತನ ಕೊಠಡಿಗಳನ್ನು ಉದ್ಘಾಟಿಸಿ ಮಾತನಾಡಿದ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಘವೇಂದ್ರ ಕಿಣಿ, ಶಿಕ್ಷಕರು ನಿರಂತರ ಅಧ್ಯಯನ ಶೀಲರಾಗಿ ಶಿಕ್ಷಣದ ಜೊತೆಗೆ ಜೀವನಕ್ಕೆ ದಾರಿದೀಪವಾಗಬಲ್ಲ ಮೌಲ್ಯಯುತ ವಿಷಯಗಳನ್ನು ವಿದ್ಯಾರ್ಥಿಗಳಿಗೆ ಭೋದಿಸಿದಾಗ ಪ್ರಜ್ಞಾವಂತ ಸಮಾಜ ನಿರ್ಮಾಣವಾಗುವುದರ ಜೊತೆಗೆ ಅಂತಹ ಶಿಕ್ಷಕರು ಸದಾ ಸ್ಮರಣೀಯರಾಗುತ್ತಾರೆ ಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಮಲ್ಲಿಕಾ ದೇವಿ ಅವರು, ಸಹೋದ್ಯೋಗಿಗಳು, ಶಿಕ್ಷಣ ಇಲಾಖೆಯವರು ಹಾಗು ಸ್ಥಳೀಯ ಸಂಘ ಸಂಸ್ಥೆಯವರು, ಹಳೆ ವಿದ್ಯಾರ್ಥಿ ಗಳು ಕೊಟ್ಟಿರುವ ಸಹಕಾರದಿಂದ ಸತತ 36 ವರ್ಷಗಳ ಕಾಲ ಸುಲಲಿತವಾಗಿ ಸೇವೆ ಮಾಡಲು ಸಾಧ್ಯವಾಯಿತು ಎಂದರು.

ಕಾರ್ಯಕ್ರಮ ಆಯೋಜಿಸಿದ ಸಂಘ ಸಂಸ್ಥೆಗಳೊಂದಿಗೆ ಊರಿನ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ,ಸಹಕಾರಿ ಹಾಗೂ ಕ್ರೀಡಾ ಸಂಸ್ಥೆಯವರು, ಊರಿನ ಗಣ್ಯರು, ಹಳೆ ವಿದ್ಯಾರ್ಥಿಗಳು ಮಲ್ಲಿಕಾ ದೇವಿ ಹಾಗೂ ಪತಿ ತಿಮ್ಮಪ್ಪ ಬಾಬು ಪೂಜಾರಿ ಅವರನ್ನು ಸನ್ಮಾನಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ನಗರಸಭಾ ಸದಸ್ಯ ವಿಜಯ ಕೊಡವೂರು ಅವರು, ಮಲ್ಲಿಕಾ ಅವರು ಪುಸ್ತಕದ ಪಾಠದೊಂದಿಗೆ ಜೀವನ ಪಾಠ ಕಲಿಸಿದ ಉತ್ತಮ ಶಿಕ್ಷಕಿ ಎಂದರು.

ಮುಖ್ಯ ಅತಿಥಿಗಳಾಗಿ ಕೊಡವೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ನಾರಾಯಣ ಬಲ್ಲಾಳ್, ಮತ್ಸ್ಯೋದ್ಯಮಿ ಆನಂದ ಪಿ.ಸುವರ್ಣ, ಶಂಕರನಾರಾಯಣ ಪ್ರತಿಷ್ಠಾನದ ಅಧ್ಯಕ್ಷ ಟಿ.ರಾಘವೇಂದ್ರ ರಾವ್,ಶಾಲಾ ಕಟ್ಟಡ ನಿರ್ಮಾಣ ಸಮಿತಿಯ ಅಧ್ಯಕ್ಷ ಮಧು ಬಂಗೇರ,ಮುಖ್ಯ ಶಿಕ್ಷಕಿ ಪುಷ್ಪಾವತಿ,ಯುವಕ ಸಂಘದ ಅಧ್ಯಕ್ಷ ಪ್ರಭಾತ್ ಕೋಟ್ಯಾನ್, ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಹರೀಶ್ ಕೊಡವೂರು, ಸಾಮಾಜಿಕ ಮುಂದಾಳು ಅರುಣ್ ಕುಮಾರ್ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಶಾಲೆಯ ಕನ್ನಡ ಹಾಗೂ ಆಂಗ್ಲ ಮಾಧ್ಯಮ ತರಗತಿಯ ಎಲ್ಲ ಶಿಕ್ಷಕರನ್ನು ಗೌರವಿಸಲಾಯಿತು. ರೈತ ಸಾಹಿತಿ ವೀರಣ್ಣ ಕುರುವತ್ತಿ ಗೌಡ, ಶಿಕ್ಷಕಿ ಶೋಭಾ ರವರು ನಿವ್ರತ್ತ ಶಿಕ್ಷಕಿಯ ಕ್ರಿಯಾಶೀಲ ಸೇವಾ ವೈಖರಿ ಯ ಬಗ್ಗೆ ಅನಿಸಿಕೆಗಳನ್ನು ವ್ಯಕ್ತಪಡಿಸಿ ಶುಭಹಾರೈಸಿದರು.

ಮಧು ಬಂಗೇರ ಸ್ವಾಗತಿಸಿದರು,ಪ್ರಭಾತ್ ಕೋಟ್ಯಾನ್ ವಂದಿಸಿದರು.ಹಳೆವಿದ್ಯಾರ್ಥಿ ಸಂಘ ದ ಅಧ್ಯಕ್ಷ ಸತೀಶ್ ಕೊಡವೂರು ಕಾರ್ಯಕ್ರಮ ನಿರೂಪಿಸಿದರು.