ಕೊಡವೂರು: ಕೊಡವೂರು ವಾರ್ಡ್ ನಲ್ಲಿ ಶೇ. 100ರಷ್ಟು ಲಸಿಕೆ ನೀಡುವ ಮೂಲಕ ಕೋವಿಡ್ ಸೋಂಕಿನಿಂದ ರಕ್ಷಣೆ ಪಡೆಯಬೇಕೆಂಬ ಉದ್ದೇಶದಿಂದ ಕೊಡವೂರು ವಾರ್ಡ್ ಅಭಿವೃದ್ಧಿ ಸಮಿತಿಯ ನೇತೃತ್ವದಲ್ಲಿ ಇತರೆ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ನಾಲ್ಕನೇ ಬಾರಿಗೆ ಕೋವಿಡ್ ಲಸಿಕಾ ಅಭಿಯಾನವನ್ನು ಆಯೋಜಿಸಲಾಯಿತು.
ನಗರಸಭಾ ಸದಸ್ಯ ವಿಜಯ್ ಕೊಡವೂರು ಮಾತನಾಡಿ, ಜನರು ಹೆಚ್ಚು ಹೊತ್ತು ಕಾಯದೆ, ಮನೆಯ ಸಮೀಪವೇ ಲಸಿಕೆ ಪಡೆಯಬೇಕೆಂಬ ಉದ್ದೇಶದಿಂದ ಸ್ವಯಂ ಪ್ರೇರಿತರಾಗಿ ಈ ಲಸಿಕಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಜನರು ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕು. ಆ ಮೂಲಕ ಕೊರೊನಾ ಮಹಾಮಾರಿಯಿಂದ ರಕ್ಷಣೆ ಪಡೆಯಬೇಕು ಎಂದರು.
ಅಣ್ಣ-ತಂಗಿಯ ಬಾಂಧವ್ಯದ ಸಂಕೇತವಾಗಿ ಆಚರಿಸುವ ‘ರಕ್ಷಾ ಬಂಧನ’ ಸದೃಢ ಸಮಾಜವನ್ನು ನಿರ್ಮಾಣ ಮಾಡಲು ಸಹಕಾರಿಯಾಗಿದೆ. ಸಮಾಜದ ರಕ್ಷಣೆಯ ಹೊಣೆಯನ್ನು ನಾವೇ ಹೊರಬೇಕು. ಆ ಮೂಲಕ ನಮ್ಮ ದೇಶವನ್ನು ಬಲಿಷ್ಟವಾಗಿ ಕಟ್ಟಬೇಕು ಎಂದು ಹೇಳಿದರು.
ಪ್ರಸಿದ್ಧ ಕರಕುಶಲ ಉತ್ಪನ್ನಗಳ ತಯಾರಕರಾದ ಕಾವೇರಿ ಪಾಳೇಕಟ್ಟೆ ಅಭಿಯಾನಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಹೇಮಚಂದ್ರ ಬಾಚನಬೈಲು, ಬೇಬಿ ಮೆಂಡನ್ ವಾಸುಕಿ ನಗರ, ಶ್ರೀ ಗಣೇಶ್ ವಾಸುಕಿ ನಗರ ಮಲ್ಪೆ ಆರೋಗ್ಯ ಇಲಾಖೆಯ ನಿಶಾ ಸಿಸ್ಟರ್ ಮತ್ತು ಆಶಾ ಕಾರ್ಯಕರ್ತರು, ಎಲ್ಲಾ ಸಂಘ ಸಂಸ್ಥೆಯ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಬ್ರಾಹ್ಮಣ ಮಹಾಸಭಾ ಕೊಡವೂರು ಇದರ ಪೂರ್ಣ ಸಹಕಾರದೊಂದಿಗ ವಿಪ್ರ ಶ್ರೀ ಸಭಾಭವನದಲ್ಲಿ ಈ ಲಸಿಕಾ ಅಭಿಯಾನ ನಡೆಯಿತು. ಈ ಸಂದರ್ಭದಲ್ಲಿ ಶಿವಾಜಿಪಾರ್ಕ್ ನಿರ್ವಹಣಾ ಸಮಿತಿ ಗರ್ಡೆ ಮತ್ತು ಗೆಳೆಯರ ಬಳಗ ಗರ್ಡೆ ಲಕ್ಷ್ಮೀನಗರ ಅಂತಹ ಅನೇಕ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಈ ಕಾರ್ಯಕ್ರಮ ನಡೆಯಿತು. ವಾರ್ಡ್ ಅಭಿವೃದ್ಧಿ ಸಮಿತಿ ಅಧ್ಯಕ್ಷ ಪ್ರಭಾತ್ ಕೊಡವೂರು ಸ್ವಾಗತಿಸಿ, ವಂದಿಸಿದರು.